Advertisement

ಸಚಿವ ಸ್ಥಾನ ನಿರೀಕ್ಷೆ; ಬಿಜೆಪಿಗೆ ಮಸ್ಕಿ ಪರೀಕ್ಷೆ

03:47 PM Dec 02, 2020 | Suhan S |

ರಾಯಚೂರು: ಸರ್ಕಾರದ ಮುಂದಿರುವ ಸಚಿವ ಸಂಪುಟ ವಿಸ್ತರಣೆ ಬಿಕ್ಕಟಿಗೆ ಮಸ್ಕಿ ಉಪಚುನಾವಣೆ ಆತಂಕವೂ ಇದೆ. ಬಿಜೆಪಿ ಅಧಿಕಾರಕ್ಕೆ ಬರಲು ಶಾಸಕ ಸ್ಥಾನ ತ್ಯಜಿಸಿದವರಲ್ಲಿ ಮಸ್ಕಿಯ ಪ್ರತಾಪಗೌಡ ಪಾಟೀಲ್‌ ಅಗ್ರಜರಾಗಿದ್ದು, ಒಂದು ವೇಳೆ ಅವರು ಗೆದ್ದಲ್ಲಿ ಸಚಿವ ಸ್ಥಾನ ನೀಡಬೇಕಾದ ಸಂದಿಗ್ಧತೆ ಸರ್ಕಾರಕ್ಕೆ ಎದುರಾಗಬಹುದು.

Advertisement

ಸಿಎಂ ಯಡಿಯೂರಪ್ಪ ನೀಡಿದ ಮಾತಿನಂತೆ ಸರ್ಕಾರ ರಚನೆಗಾಗಿ ರಾಜೀನಾಮೆ ನೀಡಿ ಗೆದ್ದು ಬಂದ ಬಹುತೇಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಆದರೆ,ಅಡ್ಡ ಮತದಾನ ಆರೋಪದಡಿ ಉಪ ಚುನಾವಣೆನಡೆಯದ ಕಾರಣ ಮಸ್ಕಿಯ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ್‌ ಅತಂತ್ರ ಸ್ಥಿತಿಗೆ ಸಿಲುಕಿದ್ದರು.

ಇನ್ನೇನು ಚುನಾವಣೆ ಘೋಷಣೆಯಾಗಲಿದೆ ಎಂಬ ನಿರೀಕ್ಷೆಯಲ್ಲೇ ಒಂದು ವರ್ಷ ಕಳೆದು ಹೋಗಿದ್ದು, ಇಂದಿಗೂ ಚುನಾವಣೆ ಸುಯೋಗ ಬಂದಿಲ್ಲ. ಈಗ ಅಂತಿಮ ಹಂತದ ಸೆಣಸಾಟ ಶುರುವಾಗಿದ್ದು, ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗಬಹುದು ಎನ್ನಲಾಗುತ್ತಿದೆ. ಹಿಂದೆ ನಡೆದ ಆಪರೇಷನ್‌ ಕಮಲದ ಬೃಹನ್ನಾಟಕದಲ್ಲಿ ಪ್ರತಾಪಗೌಡ ಪಾಟೀಲರದ್ದೇ ಮುಖ್ಯ ಪಾತ್ರ ಎನ್ನುವಂತಾಗಿತ್ತು. ಯಾವುದೇ ಶಾಸಕರು ಭಿನ್ನಮತ ತೋರಿದರೂ ಅಲ್ಲಿ ಪಾಟೀಲರ ಹೆಸರು ಕೇಳಿ ಬರುತ್ತಿತ್ತು. ಕೊನೆಗೆ ಅದು ನಿಜವೂ ಆಯಿತು. ಆದರೆ, ಕೇವಲ 213 ಮತಗಳ ಅಂತರದಿಂದ ಪರಾಭವಗೊಂಡ ಬಿಜೆಪಿ ಅಭ್ಯರ್ಥಿ ಬಸನಗೌಡ ತುರುವಿಹಾಳ ನ್ಯಾಯಾಲಯದಲ್ಲಿ ಹೂಡಿದ ದಾವೆಯಿಂದ ಮಸ್ಕಿ ಕ್ಷೇತ್ರಕ್ಕೆ ಉಪ ಚುನಾವಣೆಯೇ ನಡೆಯಲಿಲ್ಲ. ಇದರಿಂದ ತಾವು ರಚಿಸಿದ ಸರ್ಕಾರದಲ್ಲಿ ತಮಗೇ ಅ ಧಿಕಾರ ಇಲ್ಲದಂತಾಗಿತ್ತು.

ಈಗಲೂ ರಾಜ್ಯದಲ್ಲಿ ಸಂಪುಟ ಸರ್ಕಸ್‌ ಪ್ರಹಸನ ನಿಂತಿಲ್ಲ. ಹೊಸಬರಿಗೆ ಅವಕಾಶ, ಹಳಬರಿಗೆ ಕೋಕ್‌ಸಿಗಲಿದೆ ಎನ್ನುವ ಮಾತು ಕೇಳಿ ಬರುತ್ತಿವೆ. ಈಗಸಿಎಂ ಹೈಕಮಾಂಡ್‌ ಕಡೆ ಬೆರಳು ಮಾಡಿದ್ದು, ಪುನಾರಚನೆಯೋ, ವಿಸ್ತರಣೆಯೋ ಎಂಬ ಗೊಂದಲಮತ್ತೂಂದೆಡೆ ಇದೆ. ಎಲ್ಲದರ ಮಧ್ಯೆ ಮಸ್ಕಿಯಲ್ಲಿ ಬಿಜೆಪಿ ಗೆದ್ದರೆ ಜಿಲ್ಲೆಗೆ ಸಚಿವ ಸ್ಥಾನ ಸಿಗುವುದೋ ಇಲ್ಲವೋ ಎಂಬ ಲೆಕ್ಕಾಚಾರ ಶುರುವಾಗಿದೆ.

ಅನಧಿಕೃತ ಶಾಸಕ: ಮಸ್ಕಿ ಕ್ಷೇತ್ರ ಕಳೆದ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಶಾಸಕರಿಲ್ಲದೇ ಅನಾಥವಾಗಿದ್ದರೂ ಅಲ್ಲಿ ಅನಧಿಕೃತವಾಗಿ ಪ್ರತಾಪಗೌಡರ ಆಡಳಿತ ಜಾರಿಯಲ್ಲಿತ್ತು ಎಂಬ ಆರೋಪವೂ ಇದೆ. ಬಿಜೆಪಿ ಸರ್ಕಾರ ಕ್ಷೇತ್ರಕ್ಕೆ ಬೇಕಾದ ಅಧಿಕಾರ ನೀಡುವ ಜತೆಗೆ ಪ್ರತಾಪಗೌಡ ಅಣತಿಯಂತೆ ಕೆಲಸ ಕಾರ್ಯ ನಡೆಯಲು ಯಾವುದೇ ಅಂಕುಶ ಹಾಕಿರಲಿಲ್ಲ. ಒಮ್ಮೆ ನಗರದಲ್ಲಿನಡೆದ ಸಾಮಾನ್ಯ ಸಭೆಯಲ್ಲಿ ವೇದಿಕೆ ಮೇಲೆ ಕೂಡ ಪ್ರತಾಪಗೌಡ ಆಸೀನರಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದರಿಂದ ಅಲ್ಲಿ ಅನಧಿಕೃತವಾಗಿ ಶಾಸಕರಾಗಿ ಅವರೇ ಇದ್ದಂತಿತ್ತು. ಅನುದಾನದ ಹರಿವು: ಉಪಚುನಾವಣೆಗಳ ಗೆಲುವಿನ ಜೈತ್ರಯಾತ್ರೆ ಮುಂದುವರಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿ, ಮಸ್ಕಿಯನ್ನು ಮಾದರಿ ಕ್ಷೇತ್ರ ಮಾಡುವ ನಿಟ್ಟಿನಲ್ಲಿ ಅಭಿವೃದ್ಧಿ ಮಂತ್ರ ಪಠಿಸುತ್ತಿದೆ. ಬಹುದಿನಗಳ ಬೇಡಿಕೆಯಾದ 5ಎ ಕಾಲುವೆ ಜಾರಿ ಶತಃಸಿದ್ಧ ಎನ್ನುವ ಮಾತನ್ನಾಡಿ ಮತದಾರಿಗೆ ಗಾಳ ಹಾಕಿದೆ. ಜತೆಗೆ ವಿವಿಧ ಇಲಾಖೆಗಳ ಸಚಿವರು ಭೇಟಿ ನೀಡಿ ತಮ್ಮದೇ ಮಿನಿ ಪ್ರಣಾಳಿಕೆ ಪ್ರಸ್ತುತಪಡಿಸುತ್ತಿದ್ದಾರೆ. ಇನ್ನೂ ಈ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿದ್ದು, ಕ್ಷೇತ್ರ ಉಳಿಸಿಕೊಳ್ಳಲು ಶತಾಯ ಗತಾಯ ಯತ್ನ ನಡೆಸಿದೆ. ಕಾಂಗ್ರೆಸ್‌ ಬಿಜೆಪಿ ಸಮಬಲದ ಪ್ರಾಬಲ್ಯಹೊಂದಿದ್ದು, ಈಚೆಗೆ ಭೇಟಿ ನೀಡಿದ್ದ ಡಿಕೆಶಿಜೆಡಿಎಸ್‌ ಮುಖಂಡರ ಮನೆಗೆ ಭೇಟಿ ನೀಡಿ ದಳದ ಮತಗಳನ್ನು ಸೆಳೆಯುವ ಯತ್ನ ನಡೆಸಿದ್ದರು.

Advertisement

ಬಿಜೆಪಿಯಲ್ಲಿ ಹೈಕಮಾಂಡ್‌ ನಿರ್ಧಾರವೇ ಅಂತಿಮ. ಮಸ್ಕಿ ಚುನಾವಣೆ ಡಿಸೆಂಬರ್‌ ಇಲ್ಲವೇ ಜನವರಿಯಲ್ಲಿ ನಡೆಯುವ ವಿಶ್ವಾಸವಿದೆ. ನನಗೆ ಸಚಿವ ನೀಡುವುದಾಗಿ ವರಿಷ್ಠರು ಭರವಸೆ ನೀಡಿದ್ದು,ಚುನಾವಣೆ ಬಳಿಕ ಗೊತ್ತಾಗಲಿದೆ.  –ಪ್ರತಾಪಗೌಡ ಪಾಟೀಲ್‌, ಅನರ್ಹ ಶಾಸಕ

 

ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next