ಮಸ್ಕಿ: ಸಂಬಳ ವಿಚಾರದಲ್ಲಿ ಅಡುಗೆ ಸಹಾಯಕ – ಶಿಕ್ಷಕನ ನಡುವೆ ಮರಾಮಾರಿ ಉಂಟಾಗಿ ವಸತಿ ಶಾಲೆಯಲ್ಲಿ ಊಟ ಬಂದ್ ಮಾಡಿಸಿದ ಘಟನೆ ತಾಲೂಕಿನ ಮಾರಲದಿನ್ನಿ ತಾಂಡಾದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಸೋಮವಾರ ಘಟನೆ ನಡೆದಿದೆ.
ಅರ್ಹತೆ ಇಲ್ಲದ ಇಬ್ಬರು ಶಿಕ್ಷಕರನ್ನು ಕೆಲಸದಿಂದ ತಗೆದು ಹಾಕಿ, ಅರ್ಹತೆ ಇರುವ ಶಿಕ್ಷಕರನ್ನು ನೇಮಕ ಮಾಡಿ ಈ ಹಿಂದಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ ಕೆಲಸದಿಂದ ತಗೆದು ಹಾಕಿದ ಶಿಕ್ಷಕರಿಗೆ ಏಳು ತಿಂಗಳಗಳ ಸಂಬಳ ಈವರೆಗೆ ನೀಡಿಲ್ಲ, ಇದರಿಂದ ಕೆಲಸ ಬಿಟ್ಟಿರುವ ಶಿಕ್ಷಕರು, ಏಳು ತಿಂಗಳ ಸಂಬಳ ಕೊಟ್ಟಿಲ್ಲ, ನಾವು ನಮ್ಮ ಜೀವನ ಹೇಗೆ ನಿರ್ವಹಣೆ ಮಾಡಬೇಕು, ಶಾಲೆಗೆ ಬೀಗ ಹಾಕಿ, ಊಟ ಬಂದ್ ಮಾಡಿ ಎಂದು ಅಡುಗೆ ಸಹಾಯಕರಿಗೆ ಹೇಳಿದರು, ಸಂಬಳ ಬೇಕಾದರೆ ತಾಲೂಕು ಕಚೇರಿಗೆ ಹೋಗಿ ಕೇಳಿ ಆದರೆ ಶಾಲೆ ಬಂದ್ ಮಾಡಲ್ಲ ಎಂದು ಹೇಳಿದ್ದಾರೆ,
ಈ ವೇಳೆ ಕೆಲಸ ಬಿಟ್ಟಿರುವ ಶಿಕ್ಷಕ ಹಾಗೂ ಅಡುಗೆ ಸಹಾಯಕರ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಹೊಡೆದಾಟ ನಡೆದಿದೆ, ಈ ವೇಳೆ ಶಿಕ್ಷಕನ ಕೈ ಬೆರಳುಗಳಿಗೆ ಗಾಯವಾಗಿದೆ. ಜೊತೆಗೆ ಶಾಲೆಯ ಸಿಬಂದಿ ವರ್ಗ ಜಗಳ ಬಿಡಿಸಿದ್ದಾರೆ. ಇತ್ತ ಘಟನೆ ಸುದ್ದಿ ತಿಳಿದ ಕೂಡಲೇ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಡಿ.ರಾಜಕುಮಾರ, ಹಾಸ್ಟೆಲ್ ವಾರ್ಡನ್ ಶಾಲೆಗೆ ಭೇಟಿ ನೀಡಿ ತಾಂಡದ ಡಾ.ಬಿ.ಆರ್ ಅಂಬೇಡ್ಕರ್ ವಸತಿ ನಿಲಯ ಪರಿಶೀಲನೆ ಮಾಡಿದರು. ವಸತಿ ಶಾಲೆಯ ಸಿಬ್ಬಂದಿಗಳನ್ನು ತರಾಟೆಗೆ ತಗೆದುಕೊಂಡರು, ಶಾಲೆಯ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು. ಇಲ್ಲಿಗೆ ಗಲಾಟೆ ತಿಳಿಯಾಯಿತು.
ಗಾಯಗೊಂಡಿರುವ ಶಿಕ್ಷಕನಿಗೆ ಸಮಾಜ ಕಲ್ಯಾಣ ಅಧಿಕಾರಿಗಳು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ವರ್ಗ, ಗ್ರಾಮಸ್ಥರು ಇದ್ದರು.