ಮಸ್ಕಿ: ನಾರಾಯಣಪುರ ಬಲದಂಡೆ ಕಾಲುವೆಯ ಉಪಕಾಲುವೆ 5ಎ ಪಾಮನಕೆಲ್ಲೂರು ಶಾಖಾ ಕಾಲುವೆ ಯೋಜನೆ ಅನುಷ್ಠಾನ ನನೆಗುದಿಗೆ ಬಿದ್ದು, ಈ ಭಾಗದ ರೈತರ ಬದುಕು ಅತಂತ್ರಗೊಂಡಿದೆ. ವಾಸ್ತವ್ಯಕ್ಕೆಂದು ಜಿಲ್ಲೆಗೆ ಬರುತ್ತಿರುವ ನಾಡಿನ ದೊರೆ ಈ ಬಾರಿಯಾದರೂ ಈ ಯೋಜನೆಯತ್ತ ದೃಷ್ಟಿ ಹರಿಸುವರೇ ಎಂದು ಚಾತಕ ಪಕ್ಷಿಗಳಂತೆ ಕಾದಿದ್ದಾರೆ ರೈತರು.
Advertisement
ಈ ಕುರಿತು ಎನ್‌ಆರ್‌ಬಿಸಿ 5ಎ ಪಾಮನಕೆಲ್ಲೂರು ಶಾಖಾ ಕಾಲುವೆ ವ್ಯಾಪ್ತಿಯ ರೈತರ ಹೋರಾಟ ಸಮಿತಿಯಿಂದ ದಶಕಕ್ಕೂ ಹೆಚ್ಚು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಅನೇಕ ಮನವಿಗಳನ್ನು ಸಲ್ಲಿಸಿ ಸೋತು ಹೋಗಿದ್ದಾರೆ. ಕೊನೆ ಪ್ರಯತ್ನ ಎನ್ನುವಂತೆ ಸಿಎಂ ಗ್ರಾಮ ವಾಸ್ತವ್ಯದ ಕರೇಗುಡ್ಡಕ್ಕೆ ತೆರಳಿ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ತಮ್ಮದು ರೈತ ಪರ ಸರಕಾರ ಎನ್ನುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ದಶಕಗಳ ಬೇಡಿಕೆಯಾದ 5ಎ ಕಾಲುವೆ ಯೋಜನೆ ಅನುಷ್ಠಾನಕ್ಕೆ ಹಸಿರು ನಿಶಾನೆ ತೋರುವ ಮೂಲಕ ತಮ್ಮ ಕಾಳಜಿ ಪ್ರದರ್ಶಿಸಬೇಕಿದೆ.
Related Articles
Advertisement
ಅಲ್ಲದೆ 2017ರ ಮೇನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಯೋಜನೆಯ ಮಾಹಿತಿ ನೀಡಲಾಗಿತ್ತು. ತಮ್ಮ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಯೋಜನೆ ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರು. 2018ರ ಮಾರ್ಚ್ 18ರಂದು ಮಸ್ಕಿಯಲ್ಲಿ ನಡೆದ ಜೆಡಿಎಸ್ ಸಮಾವೇಶ ಹಾಗೂ ರೈತರ ಸಂವಾದ ಕಾರ್ಯಕ್ರಮದಲ್ಲಿ ರೈತರು ಯೋಜನೆಯ ಜಾರಿಗಾಗಿ ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿಯಾದ ನಂತರ ಸಿಂಧನೂರಿನಲ್ಲಿ ಪಶುಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಆಗಮಿಸಿದಾಗಲೂ ಈ ಕುರಿತು ಗಮನ ಸೆಳೆಯಲಾಗಿತ್ತು. ಆದರೂ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ತಾಳುತ್ತಿಲ್ಲ.
ಜಿಲ್ಲೆಯ ಸಮಸ್ಯೆ ಆಲಿಸಲೆಂದೇ ವಾಸ್ತವ್ಯ ಹೂಡುವುದಾಗಿ ಹೇಳಿಕೊಂಡಿರುವ ಸಿಎಂ, ಬಹುವರ್ಷಗಳ ಬೇಡಿಕೆಯನ್ನು ಇನ್ನಾದರೂ ಈಡೇರಿಸುವರೇ ಎಂಬುದು ರೈತರ ಪ್ರಶ್ನೆ.
ಈಗಾಗಲೇ ನಾವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದೇವೆ. 5ಎ ಕಾಲುವೆ ಅನುಷ್ಠಾನಗೊಂಡರೆ ಜಿಲ್ಲೆಯ ರೈತರ ಬದುಕೇ ಬದಲಾಗಿ ಹೋಗಲಿದೆ. ಕೊನೆ ಪ್ರಯತ್ನ ಎಂಬಂತೆ ಸಿಎಂಗೆ ಮತ್ತೂಮ್ಮೆ ಮನವಿ ಕೊಡಲು ನಿರ್ಧರಿಸಿದ್ದೇವೆ. ಇದೇ ವೇಳೆ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ನಮ್ಮ ಬೇಡಿಕೆಗೆ ದನಿಗೂಡಿಸಬೇಕು.•ಬಸವರಾಜಪ್ಪ ಗೌಡ ಹರ್ವಾಪುರ,
5ಎ ಕಾಲುವೆ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ