Advertisement

ಕೋವಿಡ್‌ ನಿಯಂತ್ರಣ : ಮನೆಯಲ್ಲೂ ಮಾಸ್ಕ್ ಧಾರಣೆ ದಿ ಬೆಸ್ಟ್‌!

12:59 PM May 31, 2020 | sudhir |

ಲಂಡನ್‌: ಕೋವಿಡ್‌-19 ವೈರಸ್‌ ಹೇಗೆಲ್ಲ ಹರಡುತ್ತದೆ ಎನ್ನುವುದು ಇನ್ನೂ ವಿಜ್ಞಾನಿಗಳ ತಲೆ ತಿನ್ನುತ್ತಲೇ ಇದೆ. ಈ ಕುರಿತಂತೆ ವಿಶ್ವಾದ್ಯಂತ ವಿಜ್ಞಾನ ನಿಯತಕಾಲಿಕೆಗಳಲ್ಲಿ ಸಂಶೋಧನ ಲೇಖನಗಳು ಬರುತ್ತಲೇ ಇವೆ. ಸದ್ಯ ಮನೆಯಲ್ಲೂ ಮಾಸ್ಕ್ ಹಾಕುವುದರಿಂದ ಕೋವಿಡ್‌-19 ಅನ್ನು ಇನ್ನಷ್ಟು ನಿಯಂತ್ರಿಸಬಹುದು ಮತ್ತು ಮನೆಮಂದಿಯನ್ನು ಸುರಕ್ಷಿತವಾಗಿರಿಸಬಹುದು ಎಂದು ಸಂಶೋಧನ ಲೇಖನವೊಂದರಲ್ಲಿ ಹೇಳಲಾಗಿದೆ.

Advertisement

ಕೋವಿಡ್‌-19 ಮನೆಯ ಓರ್ವ ಸದಸ್ಯನಿಗೆ ಬಂದರೆ ಉಳಿದೆಲ್ಲರಿಗೂ ತಗಲುವ ಭೀತಿ ಹೆಚ್ಚು ಆದರೆ ಆರಂಭದಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತಿರುವಾಗ ಮನೆಯ ಎಲ್ಲರೂ ಮಾಸ್ಕ್ಗಳನ್ನು ಕಡ್ಡಾಯವಾಗಿ ಹಾಕುವುದು ಒಳ್ಳೆಯದು. ಇದರಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾಮುದಾಯಿಕವಾಗಿ ಹರಡುವುದು ತಪ್ಪುತ್ತದೆ ಎಂದು ಬಿಎಂಜೆ ಗ್ಲೋಬಲ್‌ ಹೆಲ್ತ್‌ ಎಂಬ ವೈಜ್ಞಾನಿಕ ನಿಯತಕಾಲಿಕೆಯ ಲೇಖನದಲ್ಲಿ ಹೇಳಲಾಗಿದೆ.

ಕೋವಿಡ್‌-19 ರೋಗ ಲಕ್ಷಣಗಳು ಕಂಡು ಬರುವುದಕ್ಕಿಂತಲೂ ಮೊದಲೇ ಮಾಸ್ಕ್ ಹಾಕುವುದರಿಂದ ಶೇ.79ರಷ್ಟು ಪರಿಣಾಮಕಾರಿಯಾಗಿ ವೈರಸ್‌ ಹರಡುವಿಕೆಯನ್ನು ತಡೆಯಬಹುದು. ಚೀನದ ಕುಟುಂಬದ ಮೇಲೆ ನಡೆಸಿದ ಸಮೀಕ್ಷೆಯನ್ನಾಧರಿಸಿ ಈ ವೈಜ್ಞಾನಿಕ ಲೇಖನವನ್ನು ಸಿದ್ಧಪಡಿಸಲಾಗಿದ್ದು ಈ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೇ ಮನೆಯಲ್ಲಿ ಕ್ರಿಮಿನಾಶಕಗಳನ್ನು ಬಳಸಿ ಯಾವತ್ತಿಗೂ ಶುಚಿಯಾಗಿಡುವುದರಿಂದ ಶೇ.77ರಷ್ಟು ರೋಗ ಹರಡುವಿಕೆಯನ್ನು ತಡೆಯಬಹುದು ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ಮನೆಯ ಸದಸ್ಯರು ಒಟ್ಟಾಗಿ ಟಿ.ವಿ. ನೋಡುವಾಗ, ಒಟ್ಟಿಗೆ ಊಟ ಮಾಡುವಾಗ ವೈರಸ್‌ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇದರೊಂದಿಗೆ ಶುಚಿತ್ವ ಮತ್ತು ವರ್ತನೆಯು ಬಹಳಷ್ಟು ಪರಿಣಾಮ ಬೀರುತ್ತದೆ ಎನ್ನಲಾಗಿದೆ.
ಈ ವೈಜ್ಞಾನಿಕ ಲೇಖನ ಸಿದ್ಧಪಡಿಸಲು ಸಮೀಕ್ಷೆಯೊಂದನ್ನು ಕೈಗೊಳ್ಳಲಾಗಿದ್ದು ಇದಕ್ಕಾಗಿ ಚೀನಾದ 126 ಕುಟುಂಬದ 460 ಮಂದಿಯನ್ನು ಸಂದರ್ಶಿಸಲಾಗಿದೆ.ಹಾಗೂ ಮುನ್ನೆಚ್ಚರಿಕೆಗಳ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

ಲೇಖನದ ಪ್ರಕಾರ, 14 ದಿನಗಳಲ್ಲಿ ಕೋವಿಡ್‌-19 ರೋಗಿಯಿಂದ ಎರಡನೇ ಬಾರಿಗೆ ಹಬ್ಬುವ ಪ್ರಮಾಣದಲ್ಲಿ 77 ಮಂದಿ ಈಡಾಗಬಹುದು. ಅಂದರೆ ಸುಮಾರು 41 ಕುಟುಂಬಗಳು ಸಮಸ್ಯೆಗೆ ತುತ್ತಾಗಬಹುದು. ಇವರಲ್ಲಿ ಅತಿ ಸಮಸ್ಯೆಗೆ ತುತ್ತಾಗುವವರು ಎಂದರೆ ಶೇ.36ರಷ್ಟು ಮಕ್ಕಳು. ಯುವಕರ ಪ್ರಮಾಣ ಶೇ.69.5ರಷ್ಟು ಮತ್ತು ಹಿರಿಯರ ಪ್ರಮಾಣ ಶೇ.83ರಷ್ಟಿದೆ ಎಂದು ಹೇಳಲಾಗಿದೆ. ಸಮೀಕ್ಷೆ ಪ್ರಕಾರ ಎರಡನೇ ಹಂತದ ರೋಗ ಹರಡುವಿಕೆಯಲ್ಲಿ 10 ಮಂದಿಗೆ ಅತಿ ತೀವ್ರತರವಾಗಿ ಸೋಂಕಿನಿಂದ ಬಾಧೆ ಉಂಟಾಗಬಹುದು ಎಂದು ಹೇಳಲಾಗಿದೆ. ನಿತ್ಯವೂ ಕ್ರಿಮಿನಾಶಕಗಳನ್ನು ಬಳಸುವುದು, ಗಾಳಿಯಾಡಲು ಕಿಟಕಿಗಳನ್ನು ತೆರೆದಿಡುವುದು, ಇನ್ನೊಬ್ಬರಿಂದ ಕನಿಷ್ಠ 1 ಮೀಟರ್‌ ಅಂತರವಿರುವುದು, ಇನ್ನೊಬ್ಬರು ಬಳಸಿದ ವಸ್ತುಗಳನ್ನು ಬಳಸುವಾಗ ಸೂಕ್ತ ಮುಂಜಾಗ್ರತೆ ಕ್ರಮಕೈಗೊಳ್ಳುವುದು, ಮುನ್ನೆಚ್ಚರಿಕೆಗಳನ್ನು ಮನೆಯಲ್ಲಿದ್ದರೂ ಚಾಚೂ ತಪ್ಪದೆ ಪಾಲಿಸುವುದು ರೋಗ ಹರಡುವಿಕೆ ನಿಯಂತ್ರಣಕ್ಕೆ ಪ್ರಯೋಜನಕಾರಿಯಾಗಬಲ್ಲದು ಎಂದು ಸಮೀಕ್ಷೆ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next