Advertisement

ಮಾಸ್ಕ್ ಧರಿಸುವುದು ಕಡ್ಡಾಯ: 3 ತಿಂಗಳುಗಳಲ್ಲಿ 58,400 ರೂ. ದಂಡ ಸಂಗ್ರಹ

02:55 AM Jul 02, 2020 | Sriram |

ಮಹಾನಗರ: ಮಾಸ್ಕ್ ಧರಿಸದೇ ಸಂಚರಿಸುವವರಿಗೆ ದಂಡ ಹಾಕುವ ಪ್ರಕ್ರಿಯೆ ನಗರದಲ್ಲಿ ನಿರಂತರವಾಗಿ ಚಾಲ್ತಿಯಲ್ಲಿದ್ದು, ಈವರೆಗೆ 58,400 ರೂ. ದಂಡ ಸಂಗ್ರಹ ಮಾಡಲಾಗಿದೆ. ದಂಡ ವಿಧಿಸಲಾಗುತ್ತಿದ್ದರೂ ಮಾಸ್ಕ್ ಹಾಕುವುದಕ್ಕೆ ಇನ್ನೂ ಜನ ನಿರ್ಲಕ್ಷé ವಹಿ ಸುತ್ತಿರುವುದು ಅಲ್ಲಲ್ಲಿ ಕಂಡು ಬರುತ್ತಿದೆ.

Advertisement

ದೇಶದಲ್ಲಿ ಕೋವಿಡ್-19 ಭೀತಿ ಹೆಚ್ಚಾಗುತ್ತಿದ್ದಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಸರಕಾರ ಕಡ್ಡಾಯ ಮಾಡಿದೆ. ಮಾಸ್ಕ್ ಧರಿಸದೇ ಮನೆಯಿಂದ ಹೊರ ಬರುವವರಿಗೆ 200 ರೂ. ದಂಡ ವಿಧಿಸುವಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಸರಕಾರ ಸೂಚಿಸಿದೆ.

ಅದರಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸುವ ಸಾರ್ವಜನಿಕರು ಮಾಸ್ಕ್ ಧರಿಸದೇ ಇದ್ದಲ್ಲಿ ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಪಾಲಿಕೆಯ ಆರೋಗ್ಯ ಇಲಾಖೆ ಅಧಿಕಾರಿಗಳೇ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸುತ್ತಾರೆ. ಮೂರು ತಿಂಗಳುಗಳಿಂದ ಮಾಸ್ಕ್ ಹಾಕದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಜಾರಿಯಲ್ಲಿದ್ದು, ಇಲ್ಲಿವರೆಗೆ 58,400 ರೂ. ದಂಡ ಸಂಗ್ರಹಗೊಂಡಿದೆ. ಈ ನಡುವೆ ಲಾಕ್‌ಡೌನ್‌ ಸಡಿಲಿಕೆಯಾದ ಬಳಿಕ ದಂಡ ವಿಧಿಸುವ ಪ್ರಕ್ರಿಯೆ ಅಷ್ಟೇನು ದೊಡ್ಡ ಮಟ್ಟದಲ್ಲಿ ಇಲ್ಲದಿದ್ದರೂ ಪ್ರಸ್ತುತ ನಗರದಲ್ಲಿ ಕೊರೊನಾ ಸಂಖ್ಯೆ ಹೆಚ್ಚುತ್ತಿರುವ ಕಾರಣ ಆರೋಗ್ಯಾಧಿಕಾರಿಗಳು ನಿಯಮ ಬಿಗಿಗೊಳಿಸಲು ಮುಂದಾಗಿದ್ದಾರೆ.

ಸಾಮಾಜಿಕ ಅಂತರ ಅಗತ್ಯ
ಎಷ್ಟೇ ಜಾಗೃತಿ ಮೂಡಿಸಿದರೂ ಇನ್ನೂ ಕೆಲವು ಕಡೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನೇ ಮರೆಯುತ್ತಾರೆ. ಕೆಲವು ಅಂಗಡಿಗಳೆದುರು ಸಂಜೆ ವೇಳೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಒಟ್ಟೊಟ್ಟಿಗೆ ನಿಲ್ಲುತ್ತಿರುವ ದೃಶ್ಯ ಈಗಲೂ ಕಾಣಸಿಗುತ್ತಿದೆ. ಈ ಬಗ್ಗೆ ಈಗಾಗಲೇ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ನಿಯಮ ಬಿಗಿಗೊಳಿಸಲಾಗುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾಸ್ಕ್ ಧರಿಸದ 292 ಮಂದಿಗೆ ದಂಡ
ಮೂರು ತಿಂಗಳುಗಳ ಅವಧಿಯಲ್ಲಿ ಮಾಸ್ಕ್ ಧರಿಸದೇ ನಡೆದಾಡಿದ, ವಾಹನಗಳಲ್ಲಿ ಸಂಚರಿಸಿದ ಒಟ್ಟು 292 ಮಂದಿಗೆ ತಲಾ 200 ರೂ.ಗಳಂತೆ ದಂಡ ವಿಧಿಸಲಾಗಿದೆ ಎಂದು ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕ ಶಿವಲಿಂಗ್‌ ತಿಳಿಸಿದ್ದಾರೆ. ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವುದರೊಂದಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗುತ್ತದೆ. ಕೋವಿಡ್-19 ಬಗ್ಗೆ ಜಾಗರೂಕತೆ ವಹಿಸುವಂತೆ ಪ್ರತಿಯೊಬ್ಬರಿಗೂ ಹೇಳಲಾಗುತ್ತದೆ ಎಂದವರು ಹೇಳಿದ್ದಾರೆ.

Advertisement

ಸ್ವಯಂ ಜಾಗೃತಿ ಅಗತ್ಯ
ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಪ್ರಕ್ರಿಯೆ ಪಾಲಿಕೆ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿದೆ. ಆದರೆ, ದಂಡ ವಿಧಿಸಿ ಮಾಸ್ಕ್ ಹಾಕಿಸುವುದಕ್ಕೆ ಬದಲು ಜನರೇ ಜಾಗೃತರಾಗಿ ಸ್ವಯಂ ಪ್ರೇರಣೆಯಿಂದ ಮಾಸ್ಕ್ ಧರಿಸಿ ಓಡಾಡಬೇಕು. ಇದರಿಂದ ಅವರ ಜೀವಕ್ಕೂ, ಕುಟುಂಬಕ್ಕೂ ಸುರಕ್ಷತೆ ಸಿಕ್ಕಂತಾಗುತ್ತದೆ. ಪಾಲಿಕೆ ವ್ಯಾಪ್ತಿಯಲ್ಲೂ ಕೊರೊನಾ ಪ್ರಕರಣ ಹೆಚ್ಚುತ್ತಿದ್ದು, ಜನ ಅನಾವಶ್ಯಕ ಮನೆಯಿಂದ ಹೊರಗೆ ಬರುವುದನ್ನು ನಿಯಂತ್ರಿಸಿಕೊಳ್ಳಬೇಕು. ಮಕ್ಕಳು, ವಯಸ್ಕರು ಆದಷ್ಟು ಮನೆಯೊಳಗಡೇ ಇರುವುದನ್ನು ರೂಢಿಸಿಕೊಳ್ಳಬೇಕು.
 - ಶಾನಾಡಿ ಅಜಿತ್‌ಕುಮಾರ್‌ ಹೆಗ್ಡೆ,
ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next