ಗುಳೇದಗುಡ್ಡ: ಪರೀಕ್ಷೆಗೆ ಹಾಜರಾಗುವಾಗ ಎಲ್ಲ ವಿದ್ಯಾರ್ಥಿಗಳು ಪ್ರವೇಶದ್ವಾರದಲ್ಲಿ ಸಿದ್ಧಪಡಿಸುವ ಬಾಕ್ಸ್ ಮೂಲಕ ಬರಬೇಕು. ಇಲಾಖೆ ಒದಗಿಸುವ ಥರ್ಮಲ್ ಸ್ಕ್ಯಾನಿಂಗ್ ಒಳಗಾಗಿ, ಮಾಸ್ಕ್ ಧರಿಸಬೇಕು. ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ ಹೇಳಿದರು.
ಪಟ್ಟಣದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗುವಂತೆ ತಿಳಿಸಬೇಕು. ಎಲ್ಲ ವಿದ್ಯಾರ್ಥಿಗಳು ಪರೀಕ್ಷಾ ಸಾಮಗ್ರಿ ಹಾಗೂ ಕುಡಿಯುವ ನೀರಿನ ಬಾಟಲಿಗಳನ್ನು ತರಬೇಕು ಎಂದು ಹೇಳಿದರು.
ಪರೀಕ್ಷೆಗೆ ಬರುವ ವಿದ್ಯಾರ್ಥಿಗಳು ಬೆ. 9:00ಗಂಟೆ ಒಳಗಾಗಿ ಹಾಜರಿದ್ದು, ಕಡ್ಡಾಯವಾಗಿ ಸ್ಕ್ರೀನಿಂಗ್ ಒಳಪಟ್ಟು ಪರೀಕ್ಷೆ ಬರೆಯಲು ಅಣಿಯಾಗಬೇಕು. ಕೊಠಡಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳಿಗೆ 3 ಅಡಿಗಳ ಅಂತರದಲ್ಲಿ ಆಸನಗಳ ವ್ಯವಸ್ಥೆಗೊಳಿಸಬೇಕು. ಪರೀಕ್ಷೆ ಕಾರ್ಯದಲ್ಲಿ ಭಾಗವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಹ್ಯಾಂಡ್‌ಗ್ಲೌಸ್ ಮತ್ತು ಮಾಸ್ಕ್ ಧರಿಸಬೇಕು. ಎಸ್‌ಒಪಿ ಅನುಸಾರವಾಗಿ ಪರೀಕ್ಷಾ ಕಾರ್ಯ ಕಟ್ಟು ನಿಟ್ಟಾಗಿ ನಡೆಸಲು ಬಿಇಒ ರುದ್ರಪ್ಪ ಹುರಳಿ ಸೂಚಿಸಿದರು.
ಅಗತ್ಯ ಬಿದ್ದಲ್ಲಿ ಎರಡು ಕಾಯ್ದಿರಿಸಿದ ಕೊಠಡಿಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಅಷ್ಟೇ ಅಲ್ಲದೇ ಪರೀಕ್ಷೆ ಸಮಯದಲ್ಲಿ ತೊಂದರೆಗಳಾದರೆ ಮುನ್ನೆಚ್ಚರಿಕೆ ಕ್ರಮವಾಗಿ ಸರಸ್ವತಿ ವಿದ್ಯಾ ಮಂದಿರವನ್ನು ಹೆಚ್ಚುವರಿ ಕೇಂದ್ರವನ್ನಾಗಿ ಕಾಯ್ದಿರಿಸಲಾಗಿದೆ ಎಂದು ಬಿಇಒ ರುದ್ರಪ್ಪ ಹುರಳಿ ಹೇಳಿದರು. 98 ಶಿಕ್ಷಕರು ಸಭೆಯಲ್ಲಿ ಹಾಜರಿದ್ದರು. ಹನುಮಂತರಾಜು, ದೈಹಿಕ ಶಿಕ್ಷಣಾ ಧಿಕಾರಿ ವಿವೇಕಾನಂದ ಮೇಟಿ ಪರೀಕ್ಷಾ ಸಿದ್ದತೆ ಬಗ್ಗೆ ವಿವರಿಸಿದರು.
ಉಪಪ್ರಾಚಾರ್ಯ ಎಂ.ಎಂ. ಚಲವಾದಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಸಂತೋಷ ಪಟ್ಟಣಶೆಟ್ಟಿ, ಬಾಲಕರ ಪ್ರೌಢಶಾಲೆ ಉಪಪ್ರಾಚಾರ್ಯ ರಾಜು ಪಾಗಿ ಉಪಸ್ಥಿತರಿದ್ದರು.