Advertisement
ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಮೆಡಿಕಲ್ ಶಾಪ್‌ಗ್ಳಿಗೆ ಬುಧವಾರ ಮಧ್ಯಾಹ್ನ ಭೇಟಿ ನೀಡಿದ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಮಾಸ್ಕ್ಗಳ ದಾಸ್ತಾನು, ಬೆಲೆಗಳ ಬಗ್ಗೆ ಮಾಹಿತಿ ಪಡೆದರು. ಈ ವೇಳೆ, ಕೆಲವು ಮೆಡಿಕಲ್ ಶಾಪ್‌ಗ್ಳಲ್ಲಿ ಹೆಚ್ಚಿನ ಬೆಲೆಗೆ ಮಾಸ್ಕ್ ಮಾರುತ್ತಿರುವುದು ಕಂಡು ಬಂದಿತು. ಇದಕ್ಕೆ ಆರೋಗ್ಯಾಧಿಕಾರಿಗಳು ಆಕ್ಷೇಪಿಸಿದರು. ಆದರೆ, ಮೆಡಿಕಲ್ ಶಾಪ್ ಮಾಲೀಕರು ಏಜೆನ್ಸಿ ದರ ನಿಗದಿ ಮಾಡಿ, ಸರಬರಾಜು ಮಾಡುತ್ತಿದೆ. ಅದರಂತೆ ಮಾರಾಟ ಮಾಡುತ್ತಿರುವುದಾಗಿ ಸಮಜಾಯಿಷಿ ನೀಡಿದರು. ಅಲ್ಲದೆ ಏಜೆನ್ಸಿ ನೀಡಿರುವ ಇನ್‌ವಾಯ್ಸ ಅನ್ನು ಪಾಲಿಕೆ ಅಧಿಕಾರಿಗಳಿಗೆ ನೀಡಿದರು.
Related Articles
Advertisement
ಕೆ.ಆರ್.ಆಸ್ಪತ್ರೆಗೂ ಬೇಟಿ: ಮೆಡಿಕಲ್ ಶಾಪ್‌ಗ್ಳಲ್ಲಿ ಪರಿಶೀಲನೆ ನಡೆಸಿದ ಬಳಿಕ ಆರೋಗ್ಯ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಕೆ.ಆರ್.ಆಸ್ಪತ್ರೆ ತೆರಳಿ ಪರಿಶೀಲಿಸಿದರು. ಅಲ್ಲಿನ ಮೆಡಿಕಲ್ ಶಾಪ್‌ನಲ್ಲಿ ಮಾಸ್ಕ್ಗಳ ದಾಸ್ತಾನುಗಳ ಬಗ್ಗೆ ಮಾಹಿತಿ ಪಡೆದರು. ಬಳಿಕ ಆಸ್ಪತ್ರೆಯ ಅಧೀಕ್ಷಕ ಡಾ.ಎನ್.ನಂಜುಂಡಸ್ವಾಮಿ ಅವರಿಂದ ಕೊರೊನಾ ವೈರಸ್ ಪೀಡಿತ ರೋಗಿಗಳು ಬಂದರೆ ಯಾವ ರೀತಿ ಚಿಕಿತ್ಸೆ ನೀಡುತ್ತೀರಿ, ಅದಕ್ಕಾಗಿ ಆಸ್ಪತ್ರೆಯಲ್ಲಿ ಏನು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಪಡೆದರು. ಈ ವೇಳೆಆರೋಗ್ಯ ಸ್ಥಾಯಿ ಸಮಿತಿ ಸದಸ್ಯರಾದ ಎಂ.ಎಸ್.ಶೋಭಾ, ಶಾರದಮ್ಮ, ಉಷಾ ನಾರಾಯಣ್, ಭಾಗ್ಯ ಮಾದೇಶ್, ಅಯಾಸ್ ಪಾಷ ಇತರರಿದ್ದರು.
ಮಾಸ್ಕ್ ದರ ಪಟ್ಟಿಯ ಬೋರ್ಡ್ ಹಾಕಿ: ಮೈಸೂರಿನಲ್ಲಿರುವ ಮೆಡಿಕಲ್ ಶಾಪ್‌ಗ್ಳಲ್ಲಿರುವ ಮಾಸ್ಕ್ಗಳ ದಾಸ್ತಾನು, ಅವುಗಳ ಬೆಲೆಯನ್ನು ಸಾರ್ವಜನಿಕರಿಗೆ ಕಾಣುವಂತೆ ಬೋರ್ಡ್ ಹಾಕುವಂತೆ ಸೂಚನೆ ನೀಡುತ್ತೇವೆ. ಎಲ್ಲಾ ಶಾಪ್‌ಗ್ಳಲ್ಲೂ ಕಡ್ಡಾಯವಾಗಿ ನಿತ್ಯ ಎಷ್ಟು ದಾಸ್ತಾನು ಇದೆ ಎಂಬ ಮಾಹಿತಿ ಹಾಕಬೇಕು. ಅಲ್ಲದೆ ಸರ್ಜಿಕಲ್ ಮಾಸ್ಕ್ ದರ, ಎನ್-90, ಎನ್-95 ಮಾಸ್ಕ್ಗಳ ಎಂಆರ್‌ಪಿ ದರವನ್ನೂ ಪ್ರಕಟಿಸಬೇಕು.
ಮಾರಾಟ ಹಾಗೂ ಎಂಆರ್‌ಪಿ ದರ ಸಾರ್ವಜನಿಕರಿಗೆ ಗೊತ್ತಾಗಬೇಕು. ಇದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿಯೇ ಆರೋಗ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮೆಡಿಕಲ್ ಶಾಪ್ ಮಾಲೀಕರ ಸಭೆ ನಡೆಸಿ, ಸೂಚನೆ ನೀಡಲಾಗುತ್ತದೆ. ಅಲ್ಲದೆ ಮಾಸ್ಕ್ಗಳ ಬೆಲೆ ಹೆಚ್ಚಿಸದಂತೆ ಏಜೆನ್ಸಿ ಹಾಗೂ ಕಂಪನಿಯೊಂದಿಗೆ ಮಾತನಾಡುತ್ತೇವೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ತಿಳಿಸಿದರು.
ಕೊರೊನಾ ಪೀಡಿತರಿಗೆ ಪ್ರತ್ಯೇಕ ವಾರ್ಡ್ ಸಿದ್ಧ: ಕೊರೊನಾ ವೈರಸ್ ಪೀಡಿತರಿಗಾಗಿ ಪ್ರತ್ಯೇಕ ವಾರ್ಡ್ ಸಿದ್ಧಪಡಿಸಲಾಗಿದೆ. ಸೋಂಕು ಪೀಡಿತರಿಗೆ ಅಗತ್ಯ ಚಿಕಿತ್ಸೆ ನೀಡುವುದಕ್ಕೂ ಆಸ್ಪತ್ರೆ ಸಿಬ್ಬಂದಿ ಸಜ್ಜಾಗಿದ್ದಾರೆ. ಸಿಬ್ಬಂದಿಗೆ ಮಾಸ್ಕ್ಗಳ ಕೊರತೆ ಎದುರಾಗಬಹುದು. ಈ ನಿಟ್ಟಿನಲ್ಲಿ ಪಾಲಿಕೆ ಸಹಕಾರ ನಿರೀಕ್ಷಿಸುತ್ತಿದ್ದೇವೆ. ಅಗತ್ಯಕ್ಕನುಗುಣವಾಗಿ ಮಾಸ್ಕ್ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕೆ.ಆರ್.ಆಸ್ಪತ್ರೆ ಅಧೀಕ್ಷಕ ಡಾ.ಎನ್.ನಂಜುಂಡಸ್ವಾಮಿ ತಿಳಿಸಿದರು.