ಅಲ್ಲೆಲ್ಲೋ ದೂರದಿಂದ ಕೊರೊನಾ ಮತ್ತೆ ಗುಟುರು ಹಾಕುತ್ತಾ, ನಮ್ಮತ್ತಲೇ ಬರುತ್ತಿರುವ ಆತಂಕ ಎಲ್ಲರೊಳಗೂ ಆವರಿಸಿಕೊಳ್ಳುತ್ತಿದೆ. ಹಿಂದಿನ ಆಘಾತ ಮರುಕಳಿಸುತ್ತಾ? ಈ ನಾಲ್ಕನೇ ಅಲೆ ಮಕ್ಕಳ ಮೇಲೆ ಸವಾರಿ ಮಾಡುತ್ತಾ?- ಹೀಗೆ ಒಂದಿಷ್ಟು ಪ್ರಶ್ನೆಗಳೂ ನಮ್ಮೊಳಗೆ ಜಗ್ಗಾಡುತ್ತಿವೆ.
ಏತನ್ಮಧ್ಯೆ, ಕಾನ್ಪುರ ಐಐಟಿ ಒಂದು ವರದಿ ಪ್ರಕಟಿಸಿದೆ. “ಕೊರೊನಾ ಪ್ರಕರಣಗಳು ಜೂನ್‌ನಲ್ಲಿ ಏರಿಕೆ ಕಂಡು ಸುಮಾರು 5 ತಿಂಗಳವರೆಗೆ ಬಾಧಿಸಲಿದೆ’ ಎಂದಿದೆ. ಆದರೆ ತಜ್ಞರ ಊಹೆಗಳೇನೇ ಇರಲಿ, ಇದಕ್ಕೆ ಹೆಚ್ಚು ಹೆದರಬೇಕಿಲ್ಲ. ಹಾಗೆಂದು ಮೈಮರೆಯುವ ಹಾಗೂ ಇಲ್ಲ. ಒಮಿಕ್ರಾನ್ ಉಪ ತಳಿ ಆಗಿರುವ ಕಾರಣ, ಗಂಟಲು ನೋವು, ಜ್ವರ, ಶೀತ, ತಲೆನೋವು- ಇಂಥ ಸೌಮ್ಯ ಲಕ್ಷಣಗಳಿಗಷ್ಟೇ ಈ ಬಾರಿ ಕೊರೊನಾ ಸೀಮಿತವಾಗುವ ಸಾಧ್ಯತೆ ಇದೆ.
ನಾಲ್ಕನೇ ಅಲೆಯ ಪ್ರಾರಂಭಕ್ಕೂ ಮೊದಲು ಪ್ರತಿಯೊಬ್ಬರು ಲಸಿಕೆ ಪಡೆದು ಸುರಕ್ಷಿತರಾಗುವುದು ಜಾಣತನ. ರಾಜ್ಯದಲ್ಲಿ ಕೊರೊನಾ ಮಾರ್ಗಸೂಚಿ ಸಡಿಲಗೊಂಡ ಬಳಿಕ ಸೋಂಕಿನ ಪ್ರಮಾಣದಲ್ಲಿ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದಕ್ಕೆ ಜನರ ವರ್ತನೆಯೂ ಕಾರಣ. ಜನರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಸೋಂಕಿನ ಲಕ್ಷಣಗಳಿದ್ದರೂ ಪರೀಕ್ಷೆ ಒಳಗಾಗದೇ ತಿರುಗಾಡುತ್ತಿದ್ದಾರೆ. ಇದರಿಂದ ಸೋಂಕಿನ ಹರಡುವಿಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತ ನಾಗರಿಕರಾಗಿ ಸೋಂಕಿನ ಲಕ್ಷಣಗಳಿದ್ದರೆ, ಪರೀಕ್ಷೆಗೆ ಒಳಗಾಗಿ, ಐಸೋಲೇಶನ್‌ಗೆ ಮುಂದಾಗಬೇಕು. ಸೋಂಕಿನ ಸರಪಳಿ ಕಡಿತಗೊಳಿಸುವಲ್ಲಿ ಶ್ರಮಿಸಬೇಕು. 4ನೇ ಅಲೆಯಲ್ಲಿ ಡೆಲ್ಟಾ+ ಒಮಿಕ್ರಾನ್‌ನ ಪ್ರೋಟಿನ್ ಹೊಂದಿರುವ ಎಕ್ಸ್‌ಡಿ ತಳಿ ಹೆಚ್ಚಾಗಿ ವರದಿಯಾಗುತ್ತಿದೆ. ಇದು ಡೆಲ್ಟಾದಷ್ಟು ಅಪಾಯಕಾರಿ ಅಲ್ಲದಿದ್ದರೂ, ಒಮಿಕ್ರಾನ್‌ನಷ್ಟು ಸೌಮ್ಯವಾಗಿದೆ. ಆದರೆ ಸೋಂಕು ಹರಡುವಿಕೆ ಪ್ರಮಾಣ ಓಮಿಕ್ರಾನ್‌ಗಿಂತ 10ಪಟ್ಟು ವೇಗವಿದೆ. 3ನೇ ಅಲೆಯಲ್ಲಿ ಸೋಂಕು ದ್ವಿಗುಣಗೊಳ್ಳಲು 48 ಗಂಟೆ ತೆಗೆದುಕೊಂಡರೆ, ಈ ಅಲೆಯಲ್ಲಿ 24 ಗಂಟೆಯೊಳಗೇ ಸೋಂಕು ದ್ವಿಗುಣಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ರಾಜ್ಯದಲ್ಲಿ ಎಕ್ಸ್ ಇ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವುದು ಇನ್ನೂ ನಿಖರವಾಗಿಲ್ಲ.ಆದರೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಸೋಂಕು ತೀವ್ರವಾಗಿ ಕಾಡಲಿದೆ. ಹಿರಿಯ ನಾಗರಿಕರು, ಮಕ್ಕಳು, ಗರ್ಭಿಣಿಯರು, ಅನಾರೋಗ್ಯ ಸಮಸ್ಯೆ ಹೊಂದಿರುವವರು ಕೋವಿಡ್ ಬಗ್ಗೆ ಬಹಳ ಎಚ್ಚರಿಕೆ ವಹಿಸಬೇಕು.
ನಾವೆಲ್ಲರೂ ಒಟ್ಟಾಗಿ ಶ್ರಮಿಸಿದರೆ, ಲಾಕ್‌ಡೌನ್ ಇಲ್ಲದೇ ಹಾಗೂ ಆರ್ಥಿಕ ಚಟುವಟಿಕೆಗೆ ತೊಂದರೆಯಾಗದಂತೆ ಈ ಅಲೆಯನ್ನು ಎದುರಿಸಬಹುದು. ಹೀಗಾಗಿ, ಇಂದಿನಿಂದಲೇ ಕಡ್ಡಾಯ ಮಾಸ್ಕ್ ಧಾರಣೆ, ಸಭೆ ಸಮಾರಂಭ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಸಾಮಾಜಿಕ ಅಂತರ ಹಾಗೂ ಲಸಿಕೆ ಪಡೆಯಬೇಕು.
(ಲೇಖಕರು: ರಾಜ್ಯ ಕೋವಿಡ್ ತಾಂತ್ರಿಕ ಸಮಿತಿ ಸದಸ್ಯ)
-ಡಾ| ಸತ್ಯನಾರಾಯಣ, ಮೈಸೂರು