ಬೆಂಗಳೂರು: ಕೋವಿಡ್ ಪಾಸಿಟಿವ್ ಪ್ರಕರಣಗಳು ದ್ವಿಗುಣಗೊಳ್ಳುತ್ತಿರುವ ಸದ್ಯದ ಪರಿಸ್ಥಿತಿಯಲ್ಲಿ ಮಾಸ್ಕ್ , ಸ್ಯಾನಿಟೈಸರ್‌ಗಳ ತೀರಾ ಅವಶ್ಯಕತೆಯಿದೆ. ಅವುಗಳನ್ನು “ಅವಶ್ಯಕ ವಸ್ತುಗಳ” ಪಟ್ಟಿಯಲ್ಲಿ ಮರು ಸೇರ್ಪಡೆಗೊಳಿಸುವ ಸಂಬಂಧ ಪ್ರಮಾಣಪತ್ರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಇದೇ ವೇಳೆ, ಜನಸಾಮಾನ್ಯರಿಗೆ ಎನ್-95 ಮಾಸ್ಕ್ಗಳ ಅಗತ್ಯವಿದೆ. ಹೀಗಿರುವಾಗ ಎನ್-95 ಮಾಸ್ಕ್ ಗಳ ದರ ನಿಗದಿ ಇದೆಯೇ? ಮಾರಾಟಗಾರರಿಂದ ರಾಜ್ಯ ಸರ್ಕಾರ ಯಾವ ಬೆಲೆಗೆ ಖರೀದಿ ಮಾಡುತ್ತಿದೆ. ಅದರ ಲಭ್ಯತೆ ಎಷ್ಟಿದೆ ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎ.ಎಸ್. ಓಕ್ ಹಾಗೂ ನ್ಯಾ. ಅರವಿಂದ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀಧರ್ ಪ್ರಭು ವಾದ ಮಂಡಿಸಿ, ಎನ್-95 ಮಾಸ್ಕ್, ಸ್ಯಾನಿಟೈಸರ್ ಅಭಾವ ಇರುವ ಬಗ್ಗೆ ರಾಜ್ಯದಿಂದ ವರದಿ ಬಾರದ ಹಿನ್ನೆಲೆಯಲ್ಲಿ ಅವುಗಳನ್ನು ಅಗತ್ಯ ವಸ್ತುಗಳ ಪಟ್ಟಿ ಹಾಗೂ ಬೆಲೆ ನಿಯಂತ್ರಣ ಪಟ್ಟಿಯಿಂದ ಹೊರಗಿಡುವ ರಾಷ್ಟ್ರೀಯ ಔಷಧೀಯ ದರ ನಿಗದಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಎನ್-95 ಮಾಸ್ಕ್ ಹಾಗೂ ಸ್ಯಾನಿಟೈಸರ್‌ಗಳನ್ನು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಮರು ಸೇರ್ಪಡೆಗೊಳಿಸುವ ಬಗ್ಗೆ ಕೇಂದ್ರ ಸರ್ಕಾರದ ಸಕ್ಷಮ ಅಧಿಕಾರಿಯಿಂದ ಪ್ರಮಾಣಪತ್ರ ಸಲ್ಲಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಗೆ ಸೂಚನೆ ನೀಡಿತು.