Advertisement

ರಸ್ತೆ ಅಗಲೀಕರಣಕ್ಕೆ ಮಸೀದಿ ಗೋಡೆ ತೆರವು

12:07 PM Oct 23, 2017 | |

ಬೆಂಗಳೂರು: ಹೊಸೂರು ರಸ್ತೆ ಅಗಲೀಕರಣಕ್ಕಾಗಿ ಶಿಯಾ ಮಸೀದಿಗೆ ಸೇರಿದ ಜಾಗ ನೀಡಲು ಮಜೀದ್‌ ಇ ಅಸ್ಕರಿ ಮತ್ತು ಖಬರಸ್ಥಾನ್‌ ಮ್ಯಾನೇಜಿಂಗ್‌ ಕಮಿಟಿ ಒಪ್ಪಿರುವ ಹಿನ್ನೆಲೆಯಲ್ಲಿ ಭಾನುವಾರ ಮಸೀದಿ ಕಾಂಪೌಂಡ್‌ ಗೋಡೆ ತೆರವುಗೊಳಿಸಲಾಯಿತು. 

Advertisement

ಮಸೀದಿ ಕಾಂಪೌಂಡ್‌ನಿಂದಾಗಿ ಹೊಸೂರು ರಸ್ತೆಯಿಂದ ಬ್ರಿಗೇಡ್‌ ರಸ್ತೆಯ ಕಡೆಗೆ ಬರುವ ಮಾರ್ಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ಹೀಗಾಗಿ ಜಾಗ ಬಿಟ್ಟುಕೊಡುವಂತೆ ಬಿಬಿಎಂಪಿ ಈ ಹಿಂದೆ ಸಮಿತಿಯನ್ನು ಕೋರಿತ್ತು. ಇದಕ್ಕೆ ಒಪ್ಪಿರುವ ಸಮಿತಿ ಕಾಂಪೌಂಡ್‌ ಒಳಗೆ ಮತ್ತೂಂದು ಕಾಂಪೌಂಡ್‌ ನಿರ್ಮಿಸಿ ಹಳೆಯ ಕಾಂಪೌಂಡ್‌ನ್ನು ಭಾನುವಾರ ಜೆಸಿಬಿ ಮೂಲಕ ತೆರವುಗೊಳಿಸಿತು. 

ಗೋಡೆ ತೆರವುಗೊಳಿಸುವ ವೇಳೆ ಸ್ಥಳೀಯ ಶಾಸಕ ಎನ್‌.ಎ.ಹ್ಯಾರೀಶ್‌, ಮೇಯರ್‌ ಸಂಪತ್‌ರಾಜ್‌ ಸೇರಿದಂತೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜತೆಗೆ ಶೀಘ್ರ ಟಿಡಿಆರ್‌ ನೀಡುವುದಾಗಿ ಭರವಸೆ ನೀಡಿದರು. 

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹ್ಯಾರೀಸ್‌, ಮಸೀದಿಯ ಗೋಡೆಯಿಂದ ವಾಹನ ದಟ್ಟಣೆಯಾಗುತ್ತಿದ್ದರಿಂದ ರಸ್ತೆ ಅಗಲೀಕರಣಕ್ಕೆ ಜಾಗ ಬಿಟ್ಟುಕೊಡುವಂತೆ ಕೋರಲಾಗಿತ್ತು. ಮಸೀದಿ ಸಮಿತಿ ಅಭಿವೃದ್ಧಿ ಕಾರ್ಯಕ್ಕೆ ಬೆಂಬಲಿಸಿದ್ದಾರೆ. ಸರ್ಕಾರ ಅಥವಾ ಪಾಲಿಕೆಯಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕೋರಿದರು. 

ಮೇಯರ್‌ ಸಂಪತ್‌ರಾಜ್‌, ದಿವಾನ್‌ ಸರ್‌ ಮಿರ್ಜಾ ಇಸ್ಮಾಯಿಲ್‌ ಈ ಜಾಗವನ್ನು ವಕ್ಫ್ ಮಂಡಳಿಗೆ ನೀಡಿದ್ದಾರೆ. 1936ರಲ್ಲಿ ಮಸೀದಿ ನಿರ್ಮಿಸಲಾಗಿದ್ದು, ಮಸೀದಿ ಕಾಂಪೌಂಡ್‌ ಗೋಡೆ ರಸ್ತೆಗೆ ಅಡ್ಡಲಾಗಿರುವುದರಿಂದ ದಟ್ಟಣೆಯಾಗುತ್ತಿತ್ತು. ಹೀಗಾಗಿ ಸಮಿತಿ ಅನುಮತಿ ನೀಡಿದೆ. ಶೀಘ್ರದಲ್ಲಿ ಟಿಡಿಆರ್‌ ನೀಡಿ ರಸ್ತೆ ನಿರ್ಮಿಸಲಾಗುವುದು ಎಂದು ತಿಳಿಸಿದರು. 

Advertisement

ನಗರದ ಬೇರೊಂದು ಕಡೆ ಜಾಗ ನೀಡುವಂತೆ ಹಾಗೂ ಜಾನ್ಸನ್‌ ಮಾರುಕಟ್ಟೆ ಬಳಿಯ ಜಂಕ್ಷನ್‌ಗೆ ಸರ್‌ ಮಿರ್ಜಾ ಇಸ್ಮಾಯಿಲ್‌ ಹೆಸರಿಡಲು ಮನವಿ ನೀಡುವುದಾಗಿ ಸಮಿತಿ ಅಧ್ಯಕ್ಷರು ತಿಳಿಸಿದ್ದು, ಮನವಿ ನೀಡಿದ ನಂತರ ಕೌನ್ಸಿಲ್‌ನಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. 

“ಮೆಟ್ರೋ ನಿಲ್ದಾಣಕ್ಕೆ ಮಿರ್ಜಾ ಇಸ್ಮಾಯಿಲ್‌ ಹೆಸರಿಡಿ’
ಸಾರ್ವಜನಿಕರಿಗೆ ಮಸೀದಿಯಿಂದ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕಾಂಪೌಂಡ್‌ ತೆರವುಗೊಳಿಸಲಾಗುತ್ತಿದೆ. ಮಸೀದಿ ನಿರ್ಮಾಣಕ್ಕೆ ಬೇರೊಂದು ಕಡೆಯಲ್ಲಿ ಜಾಗ ನೀಡುವಂತೆ ಕೋರಲಾಗುವುದು. ಜತೆಗೆ ಜಾನ್ಸನ್‌ ಮಾರುಕಟ್ಟೆ ಬಳಿಯ ಜಂಕ್ಷನ್‌ ಹಾಗೂ ಈ ಭಾಗದಲ್ಲಿ ನಿರ್ಮಾಣವಾಗುವ ನಮ್ಮ ಮೆಟ್ರೋ ನಿಲ್ದಾಣಕ್ಕೆ ದಿವಾನ್‌ ಸರ್‌ ಮಿರ್ಜಾ ಇಸ್ಮಾಯಿಲ್‌  ಹೆಸರಿಡುವಂತೆ ಮನವಿ ಮಾಡಲಾಗುವುದು ಎಂದು ಮಜೀದ್‌ ಇ ಅಸ್ಕರಿ ಸಮಿತಿ ಅಧ್ಯಕ್ಷ ಮೀರ್‌ ಅಲಿ ಜವಾದ್‌ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next