ಕಲಬುರಗಿ: ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಸಿದ್ಧಲಿಂಗೇಶ್ವರ ಸಂಸ್ಥಾನದ ಹಿರೇಮಠದ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಗುರುವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದರಿಂದ ಮಠದ ಕಿಟಕಿಗಳ ಗಾಜುಗಳು ಒಡೆದು ಪುಡಿ-ಪುಡಿಯಾಗಿವೆ. ಮಠದ ಶ್ರೀ ಕೇದಾರ ಸ್ವಾಮೀಜಿಗಳ ವಿಶ್ರಾಂತ ಕೋಣೆ ಬಳಿಗೆ ಹೋಗಿ ಅವಾಚ್ಯ ಪದಗಳಿಂದ ಬೈದು, ಹಲ್ಲೆಗೆ ಯತ್ನಿಸಿ, ಆರೋಪಿಗಳು ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಲೇ ಡಿಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಜಗದೇವಪ್ಪ ಪಾಳ, ಪಿಎಸ್‌ಐ ವಿಶ್ವನಾಥ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ರಾತ್ರಿಯೇ ಪೊಲೀಸರು ಸ್ವಾಮೀಜಿ ಅವರಿಂದ ಹೇಳಿಕೆ ಪಡೆದುಕೊಂಡಿದ್ದಾರೆ.
ಕೇದಾರ ಶ್ರೀಗಳಿಗೆ ಇನ್ನೂ ಪಟ್ಟಾಭಿಷೇಕ ಆಗಿಲ್ಲ. ಜತೆಗೆ ಮಠದ ಆಸ್ತಿ ಇತರ ಕಾರಣಗಳಿಂದಾಗಿ ಗ್ರಾಮದ ಕೆಲವರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಮಠದ ಆಸ್ತಿ ವಿವಾದ ಹಿನ್ನೆಲೆಯಲ್ಲೇ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಮಾಶಾಳ ಸೇರಿದಂತೆ ವಿವಿಧೆಡೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಸದ್ಯ ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಗೆ ಮಠದ ಆಂತರಿಕ ವಿಚಾರಗಳು ಕಾರಣವಾಗಿರಬಹುದು ಎಂದು ಶ್ರೀ ಕೇದಾರ ಸ್ವಾಮೀಜಿ ಸಂದೇಹ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಸ್ವಾಮೀಜಿಗಳಿಂದ ದೂರು ಸ್ವೀಕರಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
–ಇಶಾ ಪಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ