ಮಾಸ್ಕೊ: ರಷ್ಯಾದಲ್ಲಿ ಕೋವಿಡ್ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿನಿಂದ ಮೃತಪಟ್ಟವರ ಸಂಖ್ಯೆಯನ್ನು ಅದು ತಪ್ಪಾಗಿ ತೋರಿಸುತ್ತಿದೆಯೆಂಬ ಆರೋಪಕ್ಕೊಳಗಾಗಿದೆ.ಈ ಆರೋಪವನ್ನು ಪುಷ್ಟೀಕರಿಸುವಂಥ ಹಲವು ದೃಷ್ಟಾಂತಗಳು ಕಾಣಸಿಗುತ್ತಿವೆ. ಕೋವಿಡ್ ರಾಜಧಾನಿ ಮಾಸ್ಕೊವನ್ನು ಸಂಪೂರ್ಣವಾಗಿ ತತ್ತರಿಸುವಂತೆ ಮಾಡಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.
ಮಾಸ್ಕೊ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳಿರುವ ನಗರ. ಇಲ್ಲಿಯೇ ಹೀಗಾದರೆ ದೇಶದ ಉಳಿದ ಭಾಗಗಳ ಪರಿಸ್ಥಿತಿ ಹೇಗಿರಬಹುದು ಎನ್ನುವುದನ್ನು ಅಂದಾಜಿಸಬಹುದು. ಸೋಂಕು ಮತ್ತು ಸಾವಿನ ಸಂಖ್ಯೆಯನ್ನು ರಷ್ಯಾ ಮರೆಮಾಚುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ.
ರಷ್ಯಾದಲ್ಲಿ 2,81,762 ದೃಢೀಕೃತ ಪ್ರಕರಣಗಳಿವೆ ಮತ್ತು ಈ ಪೈಕಿ 1,38,969 ಪ್ರಕರಣಗಳು ರಾಜಧಾನಿ ಮಾಸ್ಕೊದಲ್ಲಿವೆ. ವೈರಾಣು ಈಗ 11 ಸಮಯ ವಲಯಗಳನ್ನೊಳಗೊಂಡ ಈ ವಿಶಾಲ ದೇಶದ ದೂರದ ಪ್ರದೇಶಗಳಿಗೆ ವ್ಯಾಪಿಸುತ್ತಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು 85 ವಲಯ ಮುಖ್ಯಸ್ಥರೊಂದಿಗೆ ನಡೆಸಿದ ವಿಡಿಯೊ ಸಮಾವೇಶದ ವೇಳೆ ಲಾಕ್‌ಡೌನ್ ಮುಂದುವರಿಕೆ ಅಥವಾ ಆರ್ಥಿಕತೆಯ ಉತ್ತೇಜನಕ್ಕೆ ಹಂತಗಳಲ್ಲಿ ನಿರ್ಬಂಧಗಳ ಹಿಂದೆಗೆತದ ಜವಾಬ್ದಾರಿಯನ್ನು ಸ್ಥಳೀಯ ನಾಯಕರು ನಿಭಾಯಿಸಬೇಕಾಗುತ್ತದೆಯೆಂದು ಹೇಳಿದರು.
ರಷ್ಯಾ ಸರಕಾರ ಕೋವಿಡ್ ಅಂಕಿ-ಅಂಶಗಳನ್ನು ತಿರುಚಿಲ್ಲವೆಂದು ರಶ್ಯದ ಉಪಪ್ರಧಾನಿ ತಾತಿಯಾನ ಗೊಲಿಕೋವ ಹೇಳಿದ್ದಾರೆ. ಆದರೆ ದೇಶದಲ್ಲಿ ಕೋವಿಡ್‌ಗೆ ಬಲಿಯಾದವರ ಸಂಖ್ಯೆ ಕುರಿತು ರಾಜಕೀಯ ವಲಯಗಳಲ್ಲಿ ಅನುಮಾನಗಳು ವ್ಯಕ್ತವಾಗಿವೆ. ಸೋಂಕಿತರು ಅಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇರುವಾಗ ಕೇವಲ 2,418 ಮಂದಿ ಮೃತಪಟ್ಟಿರುವುದಾಗಿ ಅಧಿಕೃತ ಅಂಕಿ-ಅಂಶಗಳು ಹೇಳುತ್ತಿವೆ ಎಂದು ವೀಕ್ಷಕರು ಬೆಟ್ಟು ಮಾಡುತ್ತಾರೆ.
ಮಾಸ್ಕೋದಲ್ಲಿ ಆರೋಗ್ಯಾಧಿಕಾರಿಗಳು ಮಾಧ್ಯಮ ವರದಿಗಳ ವಿರುದ್ಧ ಹರಿಹಾಯ್ದಿದ್ದಾರೆ ಮತ್ತು ಅಧಿಕೃತ ಅಂಕಿ-ಅಂಶಗಳು ಸಂಪೂರ್ಣ ಪಾರದರ್ಶಕವಾಗಿವೆ ಎಂದು ಹೇಳಿದ್ದಾರೆ. ಪೋಸ್ಟ್‌ಮಾರ್ಟಂ ಪರೀಕ್ಷೆಯಲ್ಲಿ ಸಾವಿಗೆ ಕೋವಿಡ್ 19 ವೈರಾಣು ನೇರ ಕಾರಣವೆಂದು ವ್ಯಕ್ತವಾದ ಪ್ರಕರಣಗಳನ್ನು ಮಾತ್ರ ತಾವು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರುವುದಾಗಿ ಮಾಸ್ಕೋ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಎಪ್ರಿಲ್‌ನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗತೊಡಗಿದಂತೆಯೇ ರಾಜಧಾನಿ ಮಾಸ್ಕೊದಲ್ಲಿ ಅಧಿಕಾರಿಗಳು ಕೋವಿಡ್ ಚಿಕಿತ್ಸೆಗಾಗಿಯೇ ಹೊಸ ಆಸ್ಪತ್ರೆಯೊಂದನ್ನು ಆರಂಭಿಸಿದ್ದರು. ರಷ್ಯಾದ ಇತರ ವಲಯಗಳಿಗೆ ಹೋಲಿಸಿದಲ್ಲಿ ಮಾಸ್ಕೋದಲ್ಲಿ ಚಿಕಿತ್ಸೆಗೆ ಹೆಚ್ಚು ಉತ್ತಮ ಸೌಲಭ್ಯಗಳಿವೆ. ಮಾಸ್ಕೊ ವ್ಯಾಪ್ತಿಯಿಂದ ಹೊರಗೆ ತೆರಳಿದರೆ ಜನರ ಜೀವನ ಮಟ್ಟ ಮತ್ತು ಆರೋಗ್ಯ ಸೌಲಭ್ಯಗಳಲ್ಲಿನ ಅಸಮಾನತೆ ಢಾಳಾಗಿ ಕಣ್ಣಿಗೆ ಬೀಳುತ್ತದೆ.