Advertisement

ಬ್ಯಾಡಗಿಗೆ ಬೇಕು ಮಸಾಲಾ ಪಾರ್ಕ್‌

01:53 AM Feb 11, 2021 | Team Udayavani |

ಮೆಣಸಿನಕಾಯಿಗೆ (ಕೆಂಪು ಒಣಮೆಣಸಿನಕಾಯಿ) ಅತೀ ಹೆಚ್ಚು ದರ ನೀಡುವ ಮೂಲಕ ಸರಣಿ ವಿಶ್ವ ದಾಖಲೆಯತ್ತ ಸಾಗಿರುವ ಬ್ಯಾಡಗಿ ಮೆಣಸಿನ ಕಾಯಿ ಮಾರುಕಟ್ಟೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಇಲ್ಲೊಂದು ಮಸಾಲಾ ಪಾರ್ಕ್‌ ಆದರೆ ಮೆಣಸಿಗೆ ನಿತ್ಯ ಬಂಗಾರದ ಬೆಲೆ ಸಿಗಬಹುದು ಎಂಬ ನಿರೀಕ್ಷೆಯೂ ಇದೆ.

Advertisement

ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಫೆ.4ರಂದು ಬ್ಯಾಡಗಿ ಡಬ್ಬಿ ತಳಿಯ ಮೆಣಸಿನ ಕಾಯಿ ಕ್ವಿಂಟಾಲ್‌ಗೆ 76,109 ಅತ್ಯುತ್ಕೃಷ್ಟ ಬೆಲೆ ಪಡೆಯುವ ಮೂಲಕ ಮತ್ತೂಮ್ಮೆ ವಿಶ್ವ ದಾಖಲೆ ಬರೆದಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಇಲ್ಲಿ ಮೆಣಸಿನಕಾಯಿಗೆ ಬಂಗಾರಕ್ಕಿಂತ ದುಬಾರಿ ಬೆಲೆ‌ ಸಿಗುತ್ತಿದ್ದು, ಕ್ವಿಂಟಾಲ್‌ಗೆ 50,000 ರೂ. ಮೀರು ತ್ತಲೇ ಇದೆ. ಇನ್ನು ಇತರ ಮಾರುಕಟ್ಟೆಗಳಿಗೆ ಹೋಲಿ ಸಿದರೆ ಮಾದರಿ ಬೆಲೆಯಲ್ಲಿಯೂ (ಸರಾಸರಿ) ಬ್ಯಾಡಗಿ ಮಾರುಕಟ್ಟೆ ಮುಂಚೂಣಿಯಲ್ಲಿದೆ.

ಅತೀ ಹೆಚ್ಚು ರೈತರು, ಹೆಚ್ಚು ಖರೀದಿದಾರರು ಈ ಮಾರುಕಟ್ಟೆಗೆ ಧಾವಿಸುತ್ತಿರುವುದರಿಂದ ಇಲ್ಲಿ ಮಾರಾಟ ಹಾಗೂ ಖರೀದಿ ಎರಡರಲ್ಲಿಯೂ ಪೈಪೋಟಿ ಇರುವುದರಿಂದ ರೈತರಿಗೆ ಸ್ಪರ್ಧಾತ್ಮಕ ದರ ಸಿಗುವ ಜತೆಗೆ ಇ-ಟೆಂಡರ್‌, ಎಲೆಕ್ಟ್ರಾನಿಕ್‌ ತೂಕದ ಯಂತ್ರದ ವ್ಯವಸ್ಥೆ, ವ್ಯಾಪಾರವಾದ ದಿನವೇ ರೈತರ ಖಾತೆಗೆ ಹಣ ಜಮೆ ಇಲ್ಲಿಯ ವಿಶೇಷವಾಗಿದೆ. ವ್ಯಾಪಾರಕ್ಕಾಗಿ ಲಾರಿಗಳನ್ನು ನಿಲ್ಲಿಸಿ ದಿನಗಳನ್ನು ಕಾಯುವ ಪ್ರಮೇಯವೇ ಇಲ್ಲಿಲ್ಲ. ಮಾರುಕಟ್ಟೆಗೆ ಬೆಳೆ ತಂದ ದಿನವೇ ವ್ಯಾಪಾರ ಮಾಡುವ ವ್ಯವಸ್ಥೆ, ಲಕ್ಷಾಂತರ ಮೆಣಸಿನಕಾಯಿ ಚೀಲ ಇಡಲು ವಿಶಾಲವಾದ ಅಂಕಣ, ಬೆಲೆ ಕಡಿಮೆ ಇದ್ದರೆ ಮೆಣಸು ಶೇಖರಿಸಿಡಲು 30 ಲಕ್ಷ ಚೀಲ ಇಡಬಹುದಾದಷ್ಟು ಶೀಥಲೀಕರಣ ಘಟಕ ಸೌಲಭ್ಯ ಇಲ್ಲಿದೆ. ಹೀಗಾಗಿ ಇಲ್ಲಿ 25 ಸಾವಿರಕ್ಕೂ ಅಧಿಕ ರೈತರು, 500ಕ್ಕೂ ಹೆಚ್ಚು ಖರೀದಿದಾರರು ವ್ಯಾಪಾರ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

ಪಕ್ಕದ ಆಂಧ್ರ, ತೆಲಂಗಾಣ ರಾಜ್ಯಗಳಿಂದ ಹಿಡಿದು ಸುತ್ತಮುತ್ತಲಿನ ಭಾಗದ ಬಹುತೇಕ ರೈತರು ತಾವು ಬೆಳೆದ ಮೆಣಸನ್ನು ಬ್ಯಾಡಗಿ ಮಾರುಕಟ್ಟೆಗೆ ತರುವುದರಿಂದ ಹಾಗೂ ವಿವಿಧ ತಳಿ ಮೆಣಸು ಇಲ್ಲಿಗೆ ಬರುವುದರಿಂದ ಹತ್ತಾರು ಕಂಪೆನಿಗಳು, ಖಾಸಗಿ ಖರೀದಿದಾರರು ನೇರ ಖರೀದಿಗಾಗಿ ಬ್ಯಾಡಗಿ ಮಾರುಕಟ್ಟೆಗೆ ಧಾವಿಸುತ್ತಿದ್ದಾರೆ. ಇ-ಟೆಂಡರ್‌, ಆರ್‌ಟಿಜಿಎಸ್‌ ಮೂಲಕ ಹಣ ವರ್ಗಾವಣೆ, ಖರೀದಿಸಿದ ಬೆಳೆ ಸಂಗ್ರಹಿಸಿಡಲು ವಿಶಾಲವಾದ ಗೋದಾಮು, ಶೀಥಲೀಕರಣ ಘಟಕಗಳ ವ್ಯವಸ್ಥೆ ಜತೆಗೆ ಅದನ್ನು ಪುಡಿ ಮಾಡಲು ಇಲ್ಲಿಯೇ 100ಕ್ಕೂ ಹೆಚ್ಚು ಅತ್ಯಾಧುನಿಕ ಪುಡಿ ಮಾಡುವ ಯಂತ್ರಗಳು ಸಹ ಲಭ್ಯವಿರುವುದರಿಂದ ಖರೀದಿದಾರರು ಪೈಪೋ ಟಿಯಲ್ಲಿ ಮೆಣಸು ಖರೀದಿಸುತ್ತಾರೆ. ಇದರಿಂದ ಸಹಜವಾಗಿಯೇ ಮೆಣಸಿಗೆ ಹೆಚ್ಚಿನ ಬೆಲೆ ಲಭಿಸುತ್ತಿದೆ.
ಬ್ಯಾಡಗಿ ಮಾರುಕಟ್ಟೆಗೆ ಪೂರಕವಾಗಿ ಬ್ಯಾಡಗಿಯಲ್ಲಿಯೇ ಮಸಾಲಾ ಪಾರ್ಕ್‌ ನಿರ್ಮಾಣವಾದರೆ ಖರೀದಿದಾರ ಕಂಪೆನಿಗಳು ಇಲ್ಲಿಯೇ ಮೆಣಸು ಖರೀದಿಸಿ, ಇಲ್ಲಿಯೇ ತಮ್ಮ ಉತ್ಪನ್ನ ಸಿದ್ಧಪಡಿಸಲು ಅನುಕೂಲವಾಗುತ್ತದೆ. ಇದರಿಂದ ರೈತರ ಬೆಳೆಗೆ ಇನ್ನೂ ಹೆಚ್ಚಿನ ದರ ಸಿಗುವ ಜತೆಗೆ ಗ್ರಾಹಕರಿಗೂ ಕಡಿಮೆ ಬೆಲೆದಲ್ಲಿ ಮೆಣಸಿನಕಾಯಿ ಉತ್ಪನ್ನ ಸಿಗಬಹುದು ಎಂಬುದು ಜನರ ಅಪೇಕ್ಷೆಯಾಗಿದೆ.

– ಎಚ್.ಕೆ. ನಟರಾಜ್

Advertisement
Advertisement

Udayavani is now on Telegram. Click here to join our channel and stay updated with the latest news.

Next