ಸಾಧನೆಯನ್ನು ಪ್ರೀತಿಸುವವರಿಗೆ ಮೇರಿಕೋಮ್ ಸ್ಫೂರ್ತಿದಾಯಕ ಮಹಿಳೆ. ಮದುವೆ, ಮಕ್ಕಳು ಎಂಬ ಸಾಂಸಾರಿಕ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡೇ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯ ಮೆಟ್ಟಿಲೇರಿದ ಮೇರಿಕೋಮ್ ದೇಶದ ಹೆಮ್ಮೆಯ ಕ್ರೀಡಾಪಟು. ಇದೀಗ ಬಾಕ್ಸಿಂಗ್‌ನಲ್ಲಿ ಮತ್ತೆ ಭಾರತವನ್ನು ಪ್ರತಿನಿಧಿಸಲು ತಾನು ಸಮರ್ಥಳು ಎಂದು ಸಾಬೀತುಮಾಡಿದ್ದಾರೆ.
ಮನುಷ್ಯನ ವಯಸ್ಸಿನ ಸಂಖ್ಯೆ ಏರಿದಂತೆಯೇ ಸ್ಪರ್ಧಾತ್ಮಕವಾದ ಈ ಜಗತ್ತಿನಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೆ ಸಾಬೀತು ಮಾಡಬೇಕಾದ ಅನಿವಾರ್ಯತೆ ಎಲ್ಲ ಕ್ಷೇತ್ರಗಳಲ್ಲಿಯೂ ಇದೆ. ಆರು ಬಾರಿ ವಿಶ್ವಚಾಂಪಿಯನ್ ಆಗಿದ್ದ ಮೇರಿಕೋಮ್ ಮಣಿಪುರದವರು. ಅವರನ್ನು 51 ಕೆಜಿ ವಿಭಾಗದಲ್ಲಿ ನೇರವಾಗಿ ಒಲಿಂಪಿಕ್ ಅರ್ಹತಾ ಟೂರ್ನಿಗೆ ಆಯ್ಕೆ ಮಾಡಿದ ಕ್ರಮವನ್ನು ಮತ್ತೋರ್ವ ಕ್ರೀಡಾಪಟು ನಿಖೀತಾ ಝರೀನ್ ಆಕ್ಷೇಪಿಸಿದ್ದರು. ಮೇರಿಕೋಮ್ ಅವರೂ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿಯೇ ಮುಂದುವರೆಯಬೇಕು ಎಂದು ಭಾರತೀಯ ಬಾಕ್ಸಿಂಗ್‌ಫೆಡರೇಶನ್ ಮತ್ತು ಕ್ರೀಡಾ ಸಚಿವಾಲಯದ ಮೊರೆ ಹೋಗಿದ್ದರು.
ಹಾಗೆ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 36 ವರ್ಷದ ಮೇರಿಕೋಮ್, 23 ವರ್ಷದ ಝರೀನಾರನ್ನು 9-1ರ ಅಂತರದಲ್ಲಿ ಮಣಿಸಿದರು. ಈ ಇಬ್ಬರ ನಡುವಿನ ಮಾತಿನ ಚಕಮಕಿ, ವೈಮನಸ್ಯಗಳು ಸಾಕಷ್ಟು ಸುದ್ದಿ ಮಾಡಿದ್ದರೂ, ಮೇರಿಕೋಮ್ ಅಭಿಮಾನಿಗಳು ಅವರ ಸಾಧನೆಯನ್ನು ಮತ್ತೆ ಮೆಚ್ಚಿಕೊಳ್ಳುವಂತಾಗಿದೆ. ಮಣಿಪುರದ ಗುಡ್ಡಗಾಡು ಪ್ರದೇಶದಲ್ಲಿ ಓಡಾಡಿ ಬೆಳೆದ ಮೇರಿಕೋಮ್ ಸಾಧನೆ ಸಣ್ಣದಲ್ಲ.
ಆಕೆಗೆ ರಾಜ್ಯಸಭಾ ಸದಸ್ಯತ್ವದ ಗೌರವ ದೊರೆತಿದೆ. ಮಣಿಪುರ ಸರ್ಕಾರ “ಮೀಥೋಯಿ ಲೀಮಾ “(ಶ್ರೇಷ್ಠ ಮಹಿಳೆ) ಎಂಬ ಗೌರವವನ್ನೂ ನೀಡಿದೆ. ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಮೇರಿಕೋಮ್ ನಿವಾಸದಿಂದ ನ್ಯಾಷನಲ್ ಗೇಮ್ಸ್ ವಿಲೇಜ್‌ಗೆ ತೆರಳುವ ರಸ್ತೆಗೆ “ಮೇರಿಕೋಮ್’ ರಸ್ತೆ ಎಂದು ನಾಮಕರಣ ಮಾಡಲಾಗಿದೆ. ಅವರ ಜೀವನ ಆಧರಿಸಿ ನಿರ್ಮಿಸಿದ ಸಾಕ್ಷ್ಯಚಿತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.
ಸ್ಮಿತಾ