ಮಧ್ಯಮ ವರ್ಗದವರ ಜೀವನವೇ ಹಾಗೆ. ಕನಸುಗಳು ನೂರು.. ಆದರೆ ಅದನ್ನು ಈಡೇರಿಸಿಕೊಳ್ಳಲು ಪರದಾಡಬೇಕಾದ ರೀತಿ ಇದೆಯಲ್ಲ ಅದು ತುಂಬಾ ತ್ರಾಸದಾಯಕ. ಅದರಲ್ಲೂ ಈ ಹಾದಿಯಲ್ಲಿ ಎದುರಾಗುವ ಅವಮಾನ, ನೋವು, ಸಂಕಟ ಒಂದು ಕಡೆಯಾದರೆ ಅವೆಲ್ಲವನ್ನು ಸಹಿಸಿಕೊಂಡು “ಕೈಲಾಗದವರಂತೆ’ ಕೂರಬೇಕಾದ ಪರಿಸ್ಥಿತಿ ಮತ್ತೂಂದು ಹಿಂಸೆ. ಇಂತಹ ಮಧ್ಯಮ ವರ್ಗದ ಆಸೆ, ಸಂಕಟ ಗಳಿಗೆ ಕೈ ಗನ್ನಡಿಯಂತೆ ಮೂಡಿ ಬಂದಿರುವ ಸಿನಿಮಾ “ಮರ್ಯಾದೆ ಪ್ರಶ್ನೆ’.
ಚಿತ್ರದ ಟೈಟಲ್ ಹೇಳುವಂತೆ ಮರ್ಯಾದೆಗೆ ಅಂಜಿ ಬದುಕುವ, ಸುಂದರ ಬದುಕಿನ ಕನಸು ಕಾಣುವ ಮನಸುಗಳ ಸುತ್ತ ಸಾಗುವ ಸಿನಿಮಾ “ಮರ್ಯಾದೆ ಪ್ರಶ್ನೆ’. ಚಿತ್ರದಲ್ಲಿ ಮೂವರು ವಿಭಿನ್ನ ವ್ಯಕ್ತಿಗಳ ಕಥೆಯನ್ನು ಹೇಳುತ್ತಾ ಹೋಗಿದ್ದಾರೆ. ಮೂವರದ್ದು ಉದ್ಯೋಗ ಬೇರೆ ಬೇರೆ. ಆದರೆ, ಕನಸು ಒಂದೇ. ಅದು ಒಂದೊಳ್ಳೆಯ ಜೀವನ ಕಟ್ಟಿಕೊಳ್ಳಬೇಕು, ಸಮಾಜದಲ್ಲಿ ತಲೆಎತ್ತಿ ಬದುಕಬೇಕು ಎಂಬುದು. ಈ ಹೋರಾಟದಲ್ಲಿ ನಡೆಯುವ ಘಟನೆಯೊಂದು ದೊಡ್ಡ ಆಘಾತವನ್ನೇ ತಂದೊಡ್ಡುತ್ತದೆ. ಹೀಗೆ ಸಾಗುವ ಕಥೆಯಲ್ಲಿ ಒಂದಷ್ಟು ಮನಸಿಗೆ ಹತ್ತಿರವಾಗುವ ಅಂಶಗಳಿವೆ.
ಇಡೀ ಕಥೆಯನ್ನು ನೇರಾನೇರ ಹೇಳುವ ಮೂಲಕ ಚಿತ್ರ ಸಾಮಾನ್ಯ ಪ್ರೇಕ್ಷಕರಿಗೂ ಬೇಗನೇ ಅರ್ಥವಾಗುವಂತೆ ನಿರೂಪಿಸಲಾಗಿದೆ. ಕಥೆ ಬಿಟ್ಟು ಅನವಶ್ಯಕ ದೃಶ್ಯಗಳಿಂದ ಚಿತ್ರ ಮುಕ್ತವಾಗಿದ್ದು, ನಮ್ಮ ಸುತ್ತಮುತ್ತ ನಡೆಯು ತ್ತಿರುವ ಯಾವುದೋ ಘಟನೆಯನ್ನು ಕಟ್ಟಿಕೊಟ್ಟಂತೆ ಚಿತ್ರ ಭಾಸವಾ ಗು ವುದು ಈ ಚಿತ್ರದ ಪ್ಲಸ್ ಕೂಡಾ. ಸಿನಿಮಾದ ಪರಿಸರ ಕೂಡಾ ಕಥೆಗೆ ಪೂರಕ ವಾಗಿದೆ. ಸರಳ ಸಂಭಾಷಣೆಯೂ ಕಥೆಯ ಓಘಕ್ಕೆ ಸಾಥ್ ಕೊಟ್ಟಿದೆ.
ಚಿತ್ರದಲ್ಲಿ ರಾಕೇಶ್ ಅಡಿಗ, ಸುನೀಲ್ ರಾವ್ ಹಾಗೂ ಪೂರ್ಣ ಚಂದ್ರ ಮೈಸೂರು ಪ್ರಮುಖ ಪಾತ್ರ ಮಾಡಿದ್ದಾರೆ. ರೆಬೆಲ್ ಹುಡುಗನಾಗಿ ರಾಕೇಶ್ ಅಡಿಗ ಇಷ್ಟವಾಗುತ್ತಾರೆ. ಉಳಿದಂತೆ ಶೈನ್ ಶೆಟ್ಟಿ, ಪ್ರಭು ಮುಂಡ್ಕೂರ್, ತೇಜು ಬೆಳವಾಡಿ ಸೇರಿದಂತೆ ಇತತರು ನಟಿಸಿದ್ದಾರೆ. ಚಿತ್ರದ ಹಾಡುಗಳು ಸನ್ನಿವೇಶಗಳಿಗೆ ಪೂರಕವಾಗಿದೆ. ಹೆಚ್ಚು ಅಬ್ಬರ, ಆರ್ಭಟವಿಲ್ಲದೇ ಒಂದು ಸರಳ ಕಥೆಯನ್ನು ಕಣ್ತುಂಬಿಕೊಳ್ಳ ಬಯಸುವವರಿಗೆ “ಮರ್ಯಾದೆ ಪ್ರಶ್ನೆ’ ಒಳ್ಳೆಯ ಆಯ್ಕೆಯಾಗಬಹುದು.
ರವಿಪ್ರಕಾಶ್ ರೈ