ಮುಂಬಯಿ: “ಗುಜರಾತಿಗಳು ಮತ್ತು ರಾಜಸ್ಥಾನಿಯರನ್ನು ಮಹಾರಾಷ್ಟ್ರದಿಂದ ತೆಗೆದುಹಾಕಿದರೆ, ರಾಜ್ಯದಲ್ಲಿ ಬಿಡಿಗಾಸೂ ಉಳಿಯುವುದಿಲ್ಲ’ ಎಂದು ಹೇಳುವ ಮೂಲಕ ಮಹಾರಾಷ್ಟ್ರ ರಾಜ್ಯಪಾಲ ಭಗತ್‌ಸಿಂಗ್ ಕೋಶಿಯಾರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇವರ ಹೇಳಿಕೆಗೆ ಮಾಜಿ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಶಿವಸೇನೆ, ಕಾಂಗ್ರೆಸ್‌ನ ಹಲವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೋಶಿಯಾರಿ, “ಮಹಾ ರಾಷ್ಟ್ರದಿಂದ ಗುಜರಾತಿಗಳು ಮತ್ತು ರಾಜಸ್ಥಾನಿಯರನ್ನು ಹೊರಗಟ್ಟಿದರೆ ಇಡೀ ರಾಜ್ಯದಲ್ಲಿ ವಿಶೇಷವಾಗಿ ಮುಂಬಯಿ ಮತ್ತು ಥಾಣೆಯಲ್ಲಿ ಒಂದು ಪೈಸೆಯೂ ಉಳಿ ಯುವುದಿಲ್ಲ. ಮುಂಬಯಿ ದೇಶದ ವಾಣಿಜ್ಯ ರಾಜಧಾನಿ ಎಂಬ ಹಣೆಪಟ್ಟಿಯನ್ನೂ ಕಳೆದು ಕೊಳ್ಳಲಿದೆ. ಮುಂಬಯಿಗೆ ಇಂಥದ್ದೊಂದು ಹೆಸರು ಬಂದಿರುವುದು ರಾಜಸ್ಥಾನಿ ಮತ್ತು ಮಾರ್ವಾಡಿಗಳಿಂದ’ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ ಏಕನಾಥ ಶಿಂಧೆ, “ಇದು ರಾಜ್ಯಪಾಲರ ವೈಯಕ್ತಿಕ ಹೇಳಿಕೆಯಾಗಿದ್ದು, ಅದನ್ನು ನಾನು ಬೆಂಬಲಿಸುವುದಿಲ್ಲ’ ಎಂದಿದ್ದರು.
“ಮನೆಗೆ ಕಳಿಸಬೇಕೋ, ಜೈಲಿಗೆ ಕಳಿಸಬೇಕೋ’: ಇನ್ನು, ಕೋಶಿಯಾರಿ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಉದ್ಧವ್ ಠಾಕ್ರೆ, “ರಾಜ್ಯಪಾಲರು ಹಿಂದೂಗಳನ್ನು ವಿಭಜಿಸಲು ನೋಡುತ್ತಿದ್ದಾರೆ. ಅವರ ಹೇಳಿಕೆಯು ಮರಾಠಿ ಮಾತನಾಡುವ ಮಣ್ಣಿನ ಮಕ್ಕಳು ಮತ್ತು ಮರಾಠಿ ಘನತೆಗೆ ಮಾಡಿದ ಅವಮಾನ. ಕೋಶಿಯಾರಿ ಅವರನ್ನು ವಾಪಸ್ ಮನೆಗೆ ಕಳುಹಿಸಬೇಕೇ, ಜೈಲಿಗೆ ಕಳುಹಿಸಬೇಕೇ ಎಂಬುದನ್ನು ಸರಕಾರ ನಿರ್ಧರಿಸಬೇಕು’ ಎಂದಿದ್ದಾರೆ.
ರಾಜ್ಯಪಾಲರ ರಾಜೀನಾಮೆ ಕೇಳಿ: ರಾಜ್ಯಪಾಲರ ಭಾಷಣದ ಉದ್ದೇಶ ಸ್ಪಷ್ಟವಾಗಿದೆ. ಮರಾಠಿಗರು ಅಥವಾ ಮಹಾರಾಷ್ಟ್ರಿಗರು ಭಿಕ್ಷುಕರು ಎಂದು ಅವರು ತಿಳಿದಂತಿದೆ ಎಂದು ಶಿವಸೇನೆಯ ನಾಯಕ ಸಂಜಯ್ ರವೂತ್ ಗುಡುಗಿದ್ದಾರೆ.
“ಮೊರಾರ್ಜಿ ದೇಸಾಯಿ ಅವರೂ ಕೂಡ 105 ಮರಾಠಾ ಹುತಾತ್ಮರನ್ನು ಇಷ್ಟೊಂದು ಅಗೌರವವಾಗಿ ಕಂಡಿರಲಿಲ್ಲ. ಮುಖ್ಯಮಂತ್ರಿ ಶಿಂಧೆಯವರೇ, ಕೇಳಿಸಿಕೊಳ್ಳುತ್ತಿದ್ದೀರಾ? ನಿಮಗೆ ಸ್ವಾಭಿಮಾನ ಎಂಬುದೇನಾದರೂ ಇದ್ದರೆ, ಈ ಕೂಡಲೇ ರಾಜೀನಾಮೆ ಕೇಳಿ’ ಎಂದು ಅವರು ತಿಳಿಸಿದ್ದಾರೆ.
ರಾಜ್ಯಪಾಲರು ಕ್ಷಮೆ ಕೇಳಲಿ: ಕಾಂಗ್ರೆಸ್: ರಾಜ್ಯಪಾಲ ಕೋಶಿಯಾರಿ ಅವರು ಮಹಾರಾಷ್ಟ್ರಿಗರಿಗೆ ನೋವುಂಟಾಗುವಂಥ ಮಾತುಗಳನ್ನಾಡಿದ್ದಾರೆ. ಹಾಗಾಗಿ, ಅವರು ಮರಾಠಿಗರ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ರಾಜಭವನ ಸ್ಪಷ್ಟನೆ
ವಿವಾದದ ಬಗ್ಗೆ ರಾಜಭವನ ಸ್ಪಷ್ಟನೆ ಕೊಟ್ಟಿದೆ. ರಾಜ್ಯಪಾಲರು ತಮ್ಮ ಭಾಷಣದಲ್ಲಿ ಮಹಾರಾಷ್ಟ್ರದ ಏಳ್ಗೆಗೆ ರಾಜಸ್ಥಾನೀಯರು, ಗುಜರಾತಿಗಳ ಕೊಡುಗೆಯೇನು ಎಂಬುದನ್ನು ಪ್ರಸ್ತಾಪ ಮಾಡಿದ್ದಾರೆ. ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ಅವರಿಗೆ ಇರಲಿಲ್ಲ ಎಂದು ರಾಜಭವನದಿಂದ ಹೊರ ಬಿದ್ದಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.