ನವದೆಹಲಿ: 2020ರ ಏಪ್ರಿಲ್ ನಿಂದ ಮಾರುತಿ ಡೀಸೆಲ್ ಕಾರುಗಳ ಮಾರಾಟ ಸ್ಥಗಿತಗೊಳಿಸುವುದಾಗಿ ಭಾರತದ ಅತೀ ದೊಡ್ಡ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ(ಎಂಎಸ್ಐ) ಗುರುವಾರ ತಿಳಿಸಿದೆ.
ಮಾರುತಿ ಡೀಸೆಲ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಇಲ್ಲದಿರುವುದನ್ನು ಪರಿಗಣಿಸಿದ ಹಿನ್ನೆಲೆಯಲ್ಲಿ 2020ರ ಏಪ್ರಿಲ್ 1ರಿಂದ ಮಾರುತಿ ಡೀಸೆ ಕಾರುಗಳ ಮಾರಾಟ ಮಾಡದಿರಲು ತೀರ್ಮಾನಿಸಿರುವುದಾಗಿ ಮಾರುತಿ ಅಧ್ಯಕ್ಷ ಆರ್ ಸಿ ಭಾರ್ಗವ್ ಮಾಧ್ಯಮಗಳ ಜೊತೆ ಮಾತನಾಡುತ್ತ ತಿಳಿಸಿದ್ದಾರೆ.
ಅಲ್ಲದೇ ಮಾರುತಿ ಸುಜುಕಿ ಇಂಡಿಯಾ 1500ಸಿಸಿ ಅಧಿಕ ಸಾಮರ್ಥ್ಯದ ಮಾರುತಿ ಡೀಸೆಲ್ ಕಾರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದ್ದಿರುವುದಾಗಿ ಹೇಳಿದರು. ಇದರಲ್ಲಿ ಇತ್ತೀಚೆಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಮಾರುತಿ ಬಾಲೆನೋ(1248ಸಿಸಿ) ಡೀಸೆಲ್ ಕಾರು ಮಾತ್ರ ಈ ಪಟ್ಟಿಗೆ ಸೇರಲಿದೆ ಎಂದು ಭಾರ್ಗವ್ ವಿವರಿಸಿದ್ದಾರೆ.
ಭವಿಷ್ಯದಲ್ಲಿ 1500 ಸಿಸಿ ಡೀಸೆಲ್ ವಾಹನಗಳಿಗೆ ಮಾತ್ರ ಹೆಚ್ಚಿನ ಬೇಡಿಕೆ ಇದೆ. ಒಂದು ವೇಳೆ ಡೀಸೆಲ್ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದಲ್ಲಿ ಮಾತ್ರ ನಾವು ಉತ್ಪಾದನೆ ಮಾಡುವ ಬಗ್ಗೆ ಚಿಂತನೆ ನಡೆಸುವುದಾಗಿ ಹೇಳಿದರು.
ಅಷ್ಟೇ ಅಲ್ಲ ಕೇಂದ್ರ ಸರ್ಕಾರ ಕೂಡಾ 2020ರ ಮಾರ್ಚ್ 31ರ ನಂತರ ಬಿಎಸ್ 4 ವಾಹನ (ಭಾರತ್ ಸ್ಟೇಜ್ 4)ಗಳ ಮಾರಾಟವಾಗಲಿ ಮತ್ತು ರಿಜಿಸ್ಟ್ರೇಶನ್ ಆಗಲಿ ಮಾಡುವಂತಿಲ್ಲ ಎಂದು ಡೆಡ್ ಲೈನ್ ನೀಡಿದೆ. ಆ ನಿಟ್ಟಿನಲ್ಲಿ ಬಿಎಸ್ 4 ಆದೇಶ ಜಾರಿಗೊಂಡರೆ 1500ಸಿಸಿಗಿಂತ ಕಡಿಮೆ ಸಾಮರ್ಥ್ಯದ ಡೀಸೆಲ್ ಇಂಜಿನ್ ಅನ್ನು ತಯಾರಿಸುವುದರಲ್ಲಿ ಅರ್ಥ ಇಲ್ಲ ಎಂದು ಮಾರುತಿ ಹೇಳಿದೆ.