Advertisement

ಮಾರುತಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿ ವೀಕ್ಷಣೆ-ಪರಿಶೀಲನೆ

07:45 PM Apr 10, 2021 | Girisha |

ಮುದ್ದೇಬಿಹಾಳ : 25 ವರ್ಷಗಳ ನಂತರ ಮಾರುತಿ ನಗರ ಬಡಾವಣೆ ಅಭಿವೃದ್ಧಿ ಕಾಣತೊಡಗಿದೆ. ಎ.ಎಸ್‌ .ಪಾಟೀಲ ನಡಹಳ್ಳಿಯವರು ಶಾಸಕರಾದ ಮೇಲೆ ಕೋಟ್ಯಂತರ ರೂ. ಅನುದಾನ ತಂದು ಅಭಿವೃದ್ಧಿಯ ನಿಜವಾದ ಹರಿಕಾರ ಎನ್ನಿಸಿಕೊಂಡಿದ್ದಾರೆ. ಇಂಥ ಅಭಿವೃದ್ಧಿ ಪರ ಚಿಂತನೆಯುಳ್ಳ ಶಾಸಕರಿಗೆ ನಾವು ಸದಾ ಕಾಲ ಋಣಿಯಾಗಿರುತ್ತೇವೆ ಎಂದು ಮಾರುತಿ ನಗರ ಬಡಾವಣೆಯ ನಾಗರಿಕರು ಹರ್ಷ ವ್ಯಕ್ತಪಡಿಸಿದರು.

Advertisement

ಮುದ್ದೇಬಿಹಾಳ ಪಟ್ಟಣದ ಪ್ರಗತಿ ಶೀಲ ಪ್ರಜ್ಞಾವಂತರ ಬಡಾವಣೆ ಎಂದೇ ಕರೆಯಲ್ಪಡುವ ಮಾರುತಿ ನಗರದಲ್ಲಿ ಪ್ರಗತಿಯಲ್ಲಿರುವ ಸಿಸಿ ರಸ್ತೆ, ಚರಂಡಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ಸಂದರ್ಭ ಶಾಸಕರ ಎದುರಿಗೆ ಹರ್ಷ ಪ್ರಕಟಿಸಿದ ನಾಗರಿಕರು, ನಡಹಳ್ಳಿಯವರು ನೀವು ಶಾಸಕರಾದ ಮೇಲೆ ನಮ್ಮ ಬಡಾವಣೆಗೆ ಒಂದೇ ವರ್ಷದಲ್ಲಿ 3.36 ಕೋಟಿ ವೆಚ್ಚದ ಕಾಮಗಾರಿ ಹಾಕಿ ಮೂಲ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೀರಿ.

ನೀವು ಶಾಸಕರಾದ ಮೇಲೆಯೇ ಇಲ್ಲಿ ಗುಣಮಟ್ಟದ ಕೆಲಸಗಳು ನಡೆಯುತ್ತಿವೆ. ಇಂಥ ಕೆಲಸ ಆಗುತ್ತದೆ, ಇದನ್ನು ನಮ್ಮ ಜೀವನದಲ್ಲಿ ನೋಡುತ್ತೇವೆ ಅನ್ನೋ ನಿರೀಕ್ಷೆಯೇ ನಮಗಿರಲಿಲ್ಲ ಎಂದು ಮ್ಯಾಗೇರಿ ದಂಪತಿ, ಕೆಂಚಪ್ಪ ಮಡಿವಾಳ, ಜೈರಾಬಿ ಢವಳಗಿ ಖುಷಿ ವ್ಯಕ್ತಪಡಿಸಿ ನಮಗೆಲ್ಲ ಸಂತೋಷ ಆಗಿದೆ ಎಂದರು.

ದತ್ತು ತೆಗೆದುಕೊಳ್ಳಲು ಮನವಿ: ಪುರಸಭೆಗೆ ಅತಿ ಹೆಚ್ಚು ತೆರಿಗೆ ಕಟ್ಟುವ ಪ್ರದೇಶ ಮಾರುತಿ ನಗರ ಆಗಿದೆ. ಹೀಗಿದ್ದರೂ ಮೂಲಸೌಕರ್ಯ ಅಭಿವೃದ್ಧಿ ವಂಚಿತವಾಗಿತ್ತು. ಈಗಾಗಲೇ 3.36 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದ್ದೀರಿ. ಇದೇ ವರ್ಷದೊಳಗೆ ಇನ್ನೂ 4.5-5 ಕೋಟಿ ರೂ. ಹೆಚ್ಚುವರಿ ಅನುದಾನ ಇದೇ ಬಡಾವಣೆಗೆ ಮಂಜೂರು ಮಾಡಿಸಿ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೀರಿ. ಹೀಗಾಗಿ ಮಾರುತಿ ನಗರವನ್ನು ದತ್ತು ಪಡೆದುಕೊಳ್ಳಬೇಕು. ಇದರಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ನಿವಾಸಿಗಳ ಪರವಾಗಿ ಪುರಸಭೆಯ ನಾಮನಿರ್ದೇಶಿತ ಸದಸ್ಯ ಮನೋಹರ ತುಪ್ಪದ ಶಾಸಕರಿಗೆ ಮನವಿ ಮಾಡಿದರೆ ಇದಕ್ಕೆ ಮುಗುಳ್ನಗುತ್ತಲೇ ಉತ್ತರಿಸಿದ ಶಾಸಕರು ಆಯ್ತು, ನೋಡೋಣ ಎಂದರು.

ಕಾಮಗಾರಿ ವೀಕ್ಷಣೆ: ಇದೇ ವೇಳೆ ಬಡಾವಣೆಯ ವಿವಿಧೆಡೆ ನಡೆಯುತ್ತಿರುವ ಸಿಸಿ ರಸ್ತೆ, ಚರಂಡಿ ಕಾಮಗಾರಿಗಳನ್ನು ಬಡಾವಣೆಯ ಪ್ರಮುಖರೊಂದಿಗೆ ವೀಕ್ಷಿಸಿದ ಶಾಸಕರು ಕಾಮಗಾರಿಯ ಗುಣಮಟ್ಟಕ್ಕೆ ತೃಪ್ತಿ ವ್ಯಕ್ತಪಡಿಸಿದರು. ಕೆಲವೆಡೆ ಅಗತ್ಯ ಸಲಹೆ ಸೂಚನೆ ನೀಡಿದರು. ಮಡಿವಾಳೇಶ್ವರರ ಗುಡಿಯ ಹತ್ತಿರ ರಸ್ತೆ ಅತಿಕ್ರಮಿಸಿ ಬೆಳೆಸಿದ್ದ ಗಿಡಗಳ ತೆರವಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಮನೆಯೊಂದರ ಮಾಲಿಕರಿಗೆ ರಸ್ತೆಯ ಮಹತ್ವ ತಿಳಿ ಹೇಳಿ ಗಿಡ ತೆರವಿಗೆ ಮನವೊಲಿಸಿದರು.

Advertisement

ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಖುದ್ದು ತಾವೇ ಕಾಮಗಾರಿ ಪರಿಶೀಲಿಸಿ, ಜನರ ಬಾಯಿಂದಲೂ ಕಾಮಗಾರಿ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಶಾಸಕರು ತಮ್ಮ ಅಭಿವೃದ್ಧಿಯ ಕನಸನ್ನು ನಿವಾಸಿಗಳೊಂದಿಗೆ ಹಂಚಿಕೊಂಡರು. ನಿವಾಸಿಗಳು ಸಹಿತ ಸಲಹೆ ಸೂಚನೆ ನೀಡಿದರು. ಪುರಸಭೆ ಸದಸ್ಯ ಸದಾನಂದ ಮಾಗಿ, ಮುಖ್ಯಾ  ಧಿಕಾರಿ ಗೋಪಾಲ ಕಾಸೆ, ಪ್ರಮುಖರಾದ ಸಿದ್ರಾಮಪ್ಪ ಬಾಣಲದಿನ್ನಿ, ಹನುಮಂತ ಅಂಬಿಗೇರ, ಶಿವಪ್ಪ ಚಿಮ್ಮಲಗಿ, ಬಸಲಿಂಗಪ್ಪ ರಕ್ಕಸಗಿ, ಎಂ.ಜಿ. ಹೊಕ್ರಾಣಿ, ಬಸವಪ್ರಭು ಹಿರೇಮಠ, ರಾಮು ತಂಬೂರಿ, ಎಸ್‌. ಎಸ್‌. ಹುನಗುಂದ, ರುದ್ರಗೌಡ, ಮುತ್ತು, ಪುರಸಭೆ ಆರೋಗ್ಯ ವಿಭಾಗದ ಮಹಾಂತೇಶ ಕಟ್ಟಿಮನಿ ಮತ್ತಿತರರು ಶಾಸಕರ ಜೊತೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next