Advertisement

Kannada Movies; ತ್ರಿಬಲ್‌ ಸ್ಟಾರ್‌ ಅಕ್ಟೋಬರ್‌: ಧ್ರುವ, ಮುರಳಿ, ಉಪ್ಪಿ ಅಖಾಡಕ್ಕೆ

11:14 AM Sep 13, 2024 | Team Udayavani |

ಶ್ರೀಮುರಳಿ ನಾಯಕರಾಗಿರುವ “ಬಘೀರ’ ಚಿತ್ರ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಪ್ರಶ್ನೆ ಅನೇಕರಲ್ಲಿತ್ತು. ಏಕೆಂದರೆ ಚಿತ್ರ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ, ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಅಕ್ಟೋಬರ್‌ 31ಕ್ಕೆ ಚಿತ್ರವನ್ನು ತೆರೆಗೆ ತರುವುದಾಗಿ ಚಿತ್ರತಂಡ ಘೋಷಿಸಿದೆ. ಈ ಮೂಲಕ ಅಕ್ಟೋಬರ್‌ ಸ್ಟಾರ್‌ ಸಿನಿಮಾಗಳ ಪಟ್ಟಿಗೆ “ಬಘೀರ’ ಕೂಡಾ ಸೇರಿದೆ.

Advertisement

ನಿಮಗೆ ಗೊತ್ತಿರುವಂತೆ ಈಗಾಗಲೇ ಅಕ್ಟೋಬರ್‌ನಲ್ಲಿ 11ಕ್ಕೆ “ಮಾರ್ಟಿನ್‌’ ಚಿತ್ರ ಬರುವುದಾಗಿ ಘೋಷಿಸಿಕೊಂಡಿದೆ. ಇದರ ಜೊತೆಗೆ ಉಪೇಂದ್ರ ಅವರ “ಯು-ಐ’ ಕೂಡಾ ಅಕ್ಟೋಬರ್‌ ರಿಲೀಸ್‌ ಎಂದಿದೆ. ಆದರೆ, ಆ ಚಿತ್ರ ಡೇಟ್‌ ಅನೌನ್ಸ್‌ ಮಾಡಿಲ್ಲ. ಈಗ “ಬಘೀರ’ ಕೂಡಾ ಅಕ್ಟೋಬರ್‌ ಕೊನೆಯ ವಾರವನ್ನು ಆಯ್ಕೆ ಮಾಡಿಕೊಂಡಿದೆ.

ಒಂದು ತಿಂಗಳಲ್ಲಿ ಮೂರು ಸ್ಟಾರ್‌ ಸಿನಿಮಾಗಳು ಬಂದರೆ ಅದರಿಂದ ಚಿತ್ರರಂಗಕ್ಕೆ ಲಾಭವೇ ಹೆಚ್ಚು. ಆದರೆ, ಕೊನೆಯ ಕ್ಷಣದ ಬದಲಾವಣೆ ಮಾಡಿಕೊಂಡರೆ ಇತರ ಸಿನಿಮಾಗಳ ತಯಾರಿ ಮೇಲೆ ಪ್ರಭಾವ ಬೀರುವುದು ಸುಳ್ಳಲ್ಲ. ಇನ್ನು, ಉಪೇಂದ್ರ ಅವರ “ಯು-ಐ’ ಚಿತ್ರ ಇನ್ನೂ ಡೇಟ್‌ ಅನೌನ್ಸ್‌ ಮಾಡದೇ ಅಕ್ಟೋಬರ್‌ ಎಂದಷ್ಟೇ ಹೇಳಿರುವುದರಿಂದ ಈ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗುತ್ತಾ ಎಂಬ ಪ್ರಶ್ನೆ ಎದ್ದಿದೆ.

ಪೂರ್ಣ ಸಮಯ ಬಘೀರನಿಗೆ

“ಬಘೀರ’ ಸಿನಿಮಾದ ಹೆಸರೇ ಹೇಳುವಂತೆ ಇದೊಂದು ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಕಂ ಸಸ್ಪೆನ್ಸ್‌-ಥ್ರಿಲ್ಲರ್‌ ಶೈಲಿಯ ಸಿನಿಮಾ. ಹಿಂದಿನ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರದಂತಹ ಗೆಟಪ್‌ ಈ ಸಿನಿಮಾದಲ್ಲಿ ಶ್ರೀಮುರಳಿ ಅವರಿಗೆ ಇದೆಯಂತೆ. ಇನ್ನು ಶ್ರೀಮುರಳಿ ಅವರ ಪಾತ್ರದಲ್ಲಿ ಸಾಕಷ್ಟು ವಿಶೇಷತೆ ಮತ್ತು ವೈವಿದ್ಯತೆಗಳಿರುವುದರಿಂದ, ತಮಗಿರುವ ಪಾತ್ರಕ್ಕೆ ತಕ್ಕಂತೆ ತಮ್ಮ ದೇಹದ ತೂಕವನ್ನೂ ಶ್ರೀಮುರಳಿ ಹೆಚ್ಚು-ಕಡಿಮೆ ಮಾಡಿಕೊಂಡಿದ್ದಾರೆ. ಈ ಪ್ರಕ್ರಿಯೆಗಾಗಿ ಶ್ರೀಮುರಳಿ ಅವರಿಗೆ ಸಾಕಷ್ಟು ಸಮಯ ಹಿಡಿದಿದೆ.

Advertisement

ಈ ಹಿಂದೆ ಶ್ರೀಮುರಳಿ ಬಘೀರನ ಬಗ್ಗೆ ಹೇಳಿಕೊಂಡಂತೆ, “ಪ್ರತಿಯೊಬ್ಬರ ವರ್ಕ್‌ ಕೂಡ ಬಘೀರ ಸಿನಿಮಾವನ್ನು ಬೇರೊಂದು ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಿದೆ. ಎಲ್ಲರ ಡೆಡಿಕೇಷನ್‌ ನೋಡಿದಾಗ, ನಾನು ಕೂಡ ಅವರಿಗೆ ತಕ್ಕಂತೆ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ಡೆಡಿಕೇಷನ್‌ ಮಾಡಬೇಕು ಅಂಥ ಅನಿಸುತ್ತದೆ. ಹಾಗಾಗಿ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ ತುಂಬ ಪೋಕಸ್‌ ಆಗಿದ್ದೇನೆ. ಅದಕ್ಕೆ ಏನು ಮಾಡಬೇಕೊ ಅದೆಲ್ಲವನ್ನು ಮಾಡುತ್ತಿದ್ದೇನೆ. ನಾನಂತೂ “ಬಘೀರ’ನ ಬಗ್ಗೆ ತುಂಬ ಎಕ್ಸೈಟ್‌ ಆಗಿದ್ದೇನೆ. ಅದೇ ಎಕ್ಸೈಟ್‌ಮೆಂಟ್‌ ಥಿಯೇಟರ್‌ನಲ್ಲಿ ಆಡಿಯನ್ಸ್‌ಗೂ ಸಿಗಲಿದೆ’ ಎಂದಿದ್ದರು.

ಈಗ ಅಭಿಮಾನಿಗಳು ಕೂಡಾ ಈ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಕಥೆ ಇದ್ದು, ಡಾ.ಸೂರಿ ನಿರ್ದೇಶನವಿದೆ. ಹೊಂಬಾಳೆ ಫಿಲಂಸ್‌ ಚಿತ್ರ ನಿರ್ಮಾಣ ಮಾಡುತ್ತಿದೆ.

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.