ನಟ ಧ್ರುವ ಸರ್ಜಾ ನಾಯಕರಾಗಿರುವ “ಮಾರ್ಟಿನ್’ ಸಿನಿಮಾದ ಟ್ರೇಲರ್ 1, ಸೋಮವಾರ ಮುಂಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಪತ್ರಿಕಾಗೋಷ್ಠಿಯ ಮೂಲಕ ಅದ್ದೂರಿಯಾಗಿ ಬಿಡುಗಡೆಗೊಂಡಿತು.
ದೇಶದ ವಿವಿಧ ರಾಜ್ಯಗಳ ಪತ್ರಕರ್ತರ ಜತೆಗೆ, 21 ದೇಶಗಳ ಪತ್ರಕರ್ತರೂ ಈ ಪತ್ರಿಕಾಗೋಷ್ಠಿಗೆ ಸಾಕ್ಷಿಯಾಗಿದ್ದು ವಿಶೇಷ. “ಮಾರ್ಟಿನ್’ ಚಿತ್ರದ ಮೊದಲ ಟ್ರೇಲರ್ ನೋಡಿ ಖುಷಿಯಾದ ವಿದೇಶಿ ಪತ್ರಕರ್ತರು, ಮೆಚ್ಚುಗೆ ವ್ಯಕ್ತಪಡಿಸುವುದಲ್ಲದೇ, ತಮ್ಮ ದೇಶಗಳಲ್ಲೂ “ಮಾರ್ಟಿನ್’ಗೆ ವ್ಯಾಪಕ ಪ್ರಚಾರ ಹಾಗೂ ಬೆಂಬಲ ನೀಡುವ ಮಾತುಗಳನ್ನಾಡಿದರು.
ಜತೆಗೆ “ಮಾರ್ಟಿನ್’ ಕಥೆಯ ಹುಟ್ಟು, ಬೆಳವಣಿಗೆ, ಧ್ರುವ ಸರ್ಜಾ ನಟನೆ, ಆ್ಯಕ್ಷನ್ ಸೇರಿದಂತೆ ಸಿನಿಮಾದ ಎಲ್ಲ ವಿಭಾಗಗಳ ತಮ್ಮ ಕುತೂಹಲದ ಪ್ರಶ್ನೆಗಳನ್ನು ಧ್ರುವ ಹಾಗೂ “ಮಾರ್ಟಿನ್’ ತಂಡದ ಮುಂದೆ ಇಟ್ಟರು. ಇದಕ್ಕೆ ಚಿತ್ರತಂಡ ಅಷ್ಟೇ ಸಮರ್ಪಕವಾಗಿ ಉತ್ತರ ನೀಡಿತು.
ಸದ್ಯಕ್ಕೆ ಟ್ರೇಲರ್ 1 ಬಿಡುಗಡೆಗೊಳಿಸಿದ ಚಿತ್ರತಂಡ, ಶೀಘ್ರದಲ್ಲಿ ಟ್ರೇಲರ್ 2 ಹಾಗೂ ಹಾಡುಗಳಿಂದ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ. ಈ ಚಿತ್ರ ಅಕ್ಟೋಬರ್ 11ರಂದು ಅದ್ದೂರಿಯಾಗಿ ಪ್ಯಾನ್ ಇಂಡಿಯಾ, ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಜತೆಗೆ 13 ಭಾಷೆಗಳಿಗೆ ಡಬ್ ಆಗಲಿದೆ. ಈ ಮೂಲಕ ಕನ್ನಡ ಸಿನಿಮಾವೊಂದು ಮತ್ತೂಮ್ಮೆ ಜಾಗತಿಕ ಮಟ್ಟದಲ್ಲಿ ಸಜ್ಜು ಮಾಡಲು ಸಿದ್ಧವಾಗಿದೆ. ಈ ಚಿತ್ರವನ್ನು ಉದಯ ಕೆ. ಮೆಹ್ತಾ ನಿರ್ಮಿಸಿದ್ದು, ಎ.ಪಿ. ಅರ್ಜುನ್ ನಿರ್ದೇಶನ ಮಾಡಿದ್ದಾರೆ.
ದೇವರ ನಾಡಿನವನು ನಾನು!: ವಿದೇಶಿ ಪತ್ರಕರ್ತರೊಬ್ಬರು ಭಾರತೀಯ ಚಿತ್ರರಂಗದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಧ್ರುವ, “ಜಗತ್ತಿನಲ್ಲಿ ಅತೀ ಹೆಚ್ಚು ಸಿನಿಮಾಗಳನ್ನು ಯಾವುದಾದರೂ ದೇಶ ಮಾಡುತ್ತದೆ ಎಂದರೆ ಅದು ಭಾರತ. ರಾಮಾಯಣ, ಮಹಾಭಾರತ ನಡೆದ ದೇಶವಿದು. ನಾನು ದೇವರ ನಾಡಿನವನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಾಗುತ್ತದೆ. ನನ್ನ ಪ್ರತಿ ಚಿತ್ರ ನೋಡಿದ ಮೇಲೆ ನಾನು ಹೇಗೆ ಪಳಗಬೇಕು, ಹೇಗೆ ತಪ್ಪನ್ನು ಸರಿಪಡಿಸಿಕೊಳ್ಳಬೇಕು ಎಂಬ ಬಗ್ಗೆ ಯೋಚಿಸುತ್ತೇನೆ. ಹೇಗೋ ಸಿನಿಮಾ ಮಾಡುವುದಕ್ಕೆ ನನಗೆ ಇಷ್ಟವಿಲ್ಲ. ನಾನು ಬೇರೆ ಯಾರೊಂದಿಗೂ ಸ್ಪರ್ಧಿಸುತ್ತಿಲ್ಲ. ನನ್ನ ಜೊತೆಗೆ ನಾನೇ ಸ್ಪರ್ಧಿಸುತ್ತೇನೆ’ ಎಂದರು.
-ರವಿ ಪ್ರಕಾಶ್ ರೈ