ನವದೆಹಲಿ: ಮಹಾರಾಷ್ಟ್ರದಲ್ಲಿನ ರಾಜಕೀಯ ಅಸ್ಥಿರತೆ ಬಗ್ಗೆ ಕಾಂಗ್ರೆಸ್ ಸೋಮವಾರ ಲೋಕಸಭೆ ಕಲಾಪದ ವೇಳೆ ತೀವ್ರ ಗದ್ದಲ, ಕೋಲಾಹಲ ನಡೆಸಿದ ಪರಿಣಾಮ ಇಬ್ಬರು ಕಾಂಗ್ರೆಸ್ ಸಂಸದರನ್ನು ಸದನದಿಂದ ಬಲವಂತವಾಗಿ ಹೊರಹಾಕಿದ ಘಟನೆ ನಡೆದಿದೆ.
ಸದನದೊಳಗೆ ಅಶಿಸ್ತಿನಿಂದ ವರ್ತಿಸಿದ್ದ ಇಬ್ಬರು ಸಂಸದರನ್ನು ಹೊರಕಳುಹಿಸಬೇಕೆಂದು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ರವಿ ಶಂಕರ್ ಪ್ರಸಾದ್ ಮತ್ತು ಪ್ರಹ್ಲಾದ್ ಜೋಶಿ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದರು. ಲೋಕಸಭೆಯ ಶಿಷ್ಟಾಚಾರವನ್ನು ಎಲ್ಲಾ ಪಕ್ಷಗಳು ಕಾಪಾಡಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿರುವುದಾಗಿ ವರದಿ ತಿಳಿಸಿದೆ.
ಮಾರ್ಷಲ್ ಗಳ ಜತೆ ಜಟಾಪಟಿ:
ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸಂಸದರ ಗುಂಪೊಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿವೆ. ಅಲ್ಲದೇ ಸ್ಪೀಕರ್ ಬಿರ್ಲಾ ಅವರ ಸಮೀಪ ತೆರಳಿ ಬ್ಯಾನರ್ ಹಿಡಿದು ಘೋಷಣೆ ಕೂಗಿದ್ದರು. ಮಹಾರಾಷ್ಟ್ರದಲ್ಲಿನ ಪ್ರಜಾಪ್ರಭುತ್ವದ ಕೊಲೆಯನ್ನು ನಿಲ್ಲಿಸಿ. ಏತನ್ಮಧ್ಯೆ ಗದ್ದಲ ಎಬ್ಬಿಸದೇ, ಶಾಂತಿ ಕಾಪಾಡಿ ಎಂದು ಸ್ಪೀಕರ್ ಬಿರ್ಲಾ ಮನವಿ ಮಾಡಿಕೊಂಡಿದ್ದರು.
ನಂತರ ಟಿಎನ್ ಪ್ರತಾಪನ್ ಮತ್ತು ಹಿಬಿ ಎಡನ್ ಹಿಡಿದುಕೊಂಡಿದ್ದ ಬ್ಯಾನರ್ ಅನ್ನು ತೆಗೆದುಹಾಕುವಂತೆ ಸ್ಪೀಕರ್ ನಿರ್ದೇಶನ ನೀಡಿದ್ದರು. ಆದರೆ ಕಾಂಗ್ರೆಸ್ ಸಂಸದರು ಸೂಚನೆ ನಿರಾಕರಿಸಿ ಪ್ರತಿಭಟನೆ ಮುಂದುವರಿಸಿದ್ದರು. ಈ ಸಂದರ್ಭದಲ್ಲಿ ಲೋಕಸಭೆ ಮಾರ್ಷಲ್ಸ್ ಗಳ ಜತೆ ಕಾಂಗ್ರೆಸ್ ಸಂಸದರು ಕೈ ಮಿಲಾಯಿಸಿದ ಘಟನೆ ನಡೆಯಿತು.
ಕಲಾಪದಿಂದ ಇಬ್ಬರು ಸಂಸದರನ್ನು ಮಾರ್ಷಲ್ಸ್ ಗಳು ಬಲವಂತವಾಗಿ ಹೊರ ಹಾಕಲು ಮುಂದಾಗಿದ್ದು, ನಮ್ಮ ಕೈಯಲ್ಲಿದ್ದ ಬ್ಯಾನರ್ ಗಳನ್ನು ಕಿತ್ತೊಗೆಯಲು ಪ್ರಯತ್ನಿಸಿದ್ದರು. ಇದರ ಬಗ್ಗೆ ನಮ್ಮ ವಿರೋಧ ವ್ಯಕ್ತಪಡಿಸಿದ್ದವೇವು. ಮಹಿಳಾ ಸಂಸದರನ್ನು ದೂಡಿದ್ದರು. ಹೀಗಾಗಿ ನಾವು ಸ್ಪೀಕರ್ ವಿರುದ್ಧ ದೂರು ನೀಡಿದ್ದೇವೆ ಎಂದು ಎಡೆನ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.