Advertisement

ಖ್ವಾಜಾ, ಮಾರ್ಷ್‌ ಬ್ರದರ್ ಬ್ಯಾಟಿಂಗ್‌ ಮಜಾ

06:25 AM Jan 07, 2018 | |

ಸಿಡ್ನಿ: “ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಸಿಡಿದು ನಿಂತ ಆಸ್ಟ್ರೇಲಿಯ, 3ನೇ ದಿನವನ್ನು ಪೂರ್ತಿಯಾಗಿ ತನ್ನ ಬ್ಯಾಟಿಂಗ್‌ ವೈಭವಕ್ಕೆ ಮೀಸಲಿರಿಸಿದೆ. ಇನ್ನೂ 6 ವಿಕೆಟ್‌ಗಳನ್ನು ಕೈಲಿರಿಸಿಕೊಂಡು 133 ರನ್ನುಗಳ ಮುನ್ನಡೆ ಸಾಧಿಸಿದೆ.

Advertisement

ಇಂಗ್ಲೆಂಡಿನ 346ಕ್ಕೆ ಜವಾಬಾಗಿ 2 ವಿಕೆಟಿಗೆ 193 ರನ್‌ ಪೇರಿಸಿದ್ದ ಆಸೀಸ್‌, ಶನಿವಾರದ ಆಟದಲ್ಲಿ ಕೇವಲ 2 ವಿಕೆಟ್‌ಗಳನ್ನಷ್ಟೇ ಕಳೆದುಕೊಂಡು ತನ್ನ ಮೊತ್ತವನ್ನು 479ಕ್ಕೆ ಏರಿಸಿತು. 91ರಲ್ಲಿದ್ದ ಉಸ್ಮಾನ್‌ ಖ್ವಾಜಾ 171ರ ತನಕ ಬೆಳೆದರೆ, 44ರಲ್ಲಿದ್ದ ನಾಯಕ ಸ್ಟೀವನ್‌ ಸ್ಮಿತ್‌ 83 ರನ್‌ ಮಾಡಿ ನಿರ್ಗಮಿಸಿದರು. 5ನೇ ವಿಕೆಟಿಗೆ ಅಂಟಿಕೊಂಡ ಮಾರ್ಷ್‌ ಬ್ರದರ್ ಶತಕದ ಜತೆಯಾಟದ ಮೂಲಕ ಇಂಗ್ಲೆಂಡಿಗೆ ಸವಾಲಾಗಿ ಉಳಿದುಕೊಂಡಿದ್ದಾರೆ.

ಮತ್ತೂಮ್ಮೆ ಶಾನ್‌ದಾರ್‌ ಆಟ ಪ್ರದರ್ಶಿಸಿದ ಶಾನ್‌ ಮಾರ್ಷ್‌ 98 ರನ್‌ ಗಳಿಸಿದ್ದು, 6ನೇ ಶತಕಕ್ಕೆ ಹಾಗೂ ಈ ಸರಣಿಯ ದ್ವಿತೀಯ ಶತಕಕ್ಕೆ ಕೇವಲ 2 ರನ್ನಿನಿಂದ ದೂರವಿದ್ದಾರೆ. ಈಗಾಗಲೇ 207 ಎಸೆತಗಳನ್ನು ಎದುರಿಸಿ ನಿಂತಿರುವ ಶಾನ್‌, 10 ಬೌಂಡರಿ ಬಾರಿಸಿದ್ದಾರೆ. ಅಡಿಲೇಡ್‌ ಪಂದ್ಯದಲ್ಲಿ ಅವರು ಅಜೇಯ 126 ರನ್‌ ಹೊಡೆದಿದ್ದರು. ಮಿಚೆಲ್‌ ಮಾರ್ಷ್‌ ಗಳಿಕೆ ಅಜೇಯ 63 ರನ್‌. ಅಣ್ಣನಿಗಿಂತ ಹೆಚ್ಚು ಆಕ್ರಮಣಕಾರಿಯಾಗಿದ್ದ “ಮಿಚ್‌’ ಮಾರ್ಷ್‌ 87 ಎಸೆತ ಎದುರಿಸಿದ್ದು, 9 ಬೌಂಡರಿ ಹಾಗೂ 2 ಸಿಕ್ಸರ್‌ ಬಾರಿಸಿದ್ದಾರೆ. 5ನೇ ವಿಕೆಟಿಗೆ ಇವರಿಬ್ಬರಿಂದ 104 ರನ್‌ ಒಟ್ಟುಗೂಡಿದೆ.

ಸೋಬರ್-ಸ್ಮಿತ್‌ ಸಮ ಸಮ
ಕಾಂಗರೂ ಕಪ್ತಾನ ಸ್ಟೀವನ್‌ ಸ್ಮಿತ್‌ 24ನೇ ಹಾಗೂ ಈ ಸರಣಿಯಲ್ಲಿ 4ನೇ ಶತಕ ಬಾರಿಸುವರೆಂಬ ನಿರೀಕ್ಷೆ ಬಲವಾಗಿತ್ತು. ಆದರೆ 83 ರನ್‌ ಮಾಡಿದ ಅವರು ಮೊಯಿನ್‌ ಅಲಿಗೆ ರಿಟರ್ನ್ ಕ್ಯಾಚ್‌ ನೀಡಿ ನಿರಾಸೆ ಅನುಭವಿಸಬೇಕಾಯಿತು (158 ಎಸೆತ, 5 ಬೌಂಡರಿ). ಆದರೆ ಈ ಸಂದರ್ಭದಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ಸಾವಿರ ರನ್‌ ಪೂರ್ತಿಗೊಳಿಸಿದ ಸಾಧನೆಗೈದರು. ಇದಕ್ಕಾಗಿ ಅವರು ಆಡಿದ್ದು 111 ಇನ್ನಿಂಗ್ಸ್‌ ಮಾತ್ರ. ಕಡಿಮೆ ಇನ್ನಿಂಗ್ಸ್‌ ಲೆಕ್ಕಾಚಾರದಲ್ಲಿ ಗ್ಯಾರಿ ಸೋಬರ್ ಜತೆ ಸ್ಮಿತ್‌ ಜಂಟಿ ದ್ವಿತೀಯ ಸ್ಥಾನ ಅಲಂಕರಿಸಿದರು. ಡಾನ್‌ ಬ್ರಾಡ್‌ಮನ್‌ 68 ಇನ್ನಿಂಗ್ಸ್‌ಗಳಲ್ಲಿ 6 ಸಾವಿರ ರನ್‌ ಪೇರಿಸಿದ್ದು ವಿಶ್ವದಾಖಲೆಯಾಗಿದೆ.

ಉಸ್ಮಾನ್‌ ಖ್ವಾಜಾ ಅವರದು 6ನೇ ಶತಕ ಸಂಭ್ರಮ. ಅವರು 381 ಎಸೆತ ಎದುರಿಸಿ ಮ್ಯಾರಥಾನ್‌ ಬ್ಯಾಟಿಂಗಿಗೆ ಸಾಕ್ಷಿಯಾದರು. ಖ್ವಾಜಾ ಕೊಡುಗೆ 171 ರನ್‌. ಬೀಸಿದ್ದು 18 ಬೌಂಡರಿ ಹಾಗೂ ಒಂದು ಸಿಕ್ಸರ್‌. ಕ್ರೇನ್‌ ಎಸೆತವನ್ನು ಮುನ್ನುಗ್ಗಿ ಬಾರಿಸುವ ಭರದಲ್ಲಿ ಖ್ವಾಜಾ ಸ್ಟಂಪ್ಡ್ ಆದರು.

Advertisement

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-346. ಆಸ್ಟ್ರೇಲಿಯ-4 ವಿಕೆಟಿಗೆ 479 (ಖ್ವಾಜಾ 171, ಸ್ಮಿತ್‌ 83, ಶಾನ್‌ ಮಾರ್ಷ್‌ ಬ್ಯಾಟಿಂಗ್‌ 98, ಮಿಚೆಲ್‌ ಮಾರ್ಷ್‌ ಬ್ಯಾಟಿಂಗ್‌ 63, ವಾರ್ನರ್‌ 56, ಅಲಿ 125ಕ್ಕೆ 1, ಕ್ರೇನ್‌ 135ಕ್ಕೆ 1).

Advertisement

Udayavani is now on Telegram. Click here to join our channel and stay updated with the latest news.

Next