Advertisement

Anju: ಪಾಕ್ ಗೆಳೆಯನೊಂದಿಗೆ ಭಾರತದ ಅಂಜು ಮದುವೆ ಆದದ್ದು ನಿಜವೇ? ಇಲ್ಲಿದೆ ಸತ್ಯಾಸತ್ಯತೆ

09:17 AM Jul 26, 2023 | Team Udayavani |

ಕರಾಚಿ: ತನ್ನ ಫೇಸ್‌ ಬುಕ್‌ ಗೆಳೆಯನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿರುವ ರಾಜಸ್ಥಾನದ ವಿವಾಹಿತ ಮಹಿಳೆ ಅಂಜು, ಪಾಕ್ ಗೆಳೆಯ ನಸ್ರುಲ್ಲಾ ಜೊತೆ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ನಿನ್ನೆಯಿಂದ ಭಾರೀ ಸದ್ದು ಮಾಡುತ್ತಿದೆ.

Advertisement

ಅಂಜು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ʼಫಾತಿಮಾʼ ಎಂದು ಹೆಸರು ಬದಲಾಯಿಸಿಕೊಂಡು, ಪಾಕಿಸ್ತಾನದ ಅಪ್ಪರ್ ದಿರ್‌ನಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ಇಬ್ಬರ ನಿಕಾಹ್ ಕುಟುಂಬದ ಸಮ್ಮುಖದಲ್ಲಿ ನಡೆದಿದೆ. ಆ ಬಳಿಕ ಇಬ್ಬರು ವಿಡಿಯೋ ಶೂಟ್‌ ಮಾಡಿಸಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮಗಳು ವರದಿ ಮಾಡಿತ್ತು.

ಆದರೆ “ಇಂಡಿಯಾ ಟುಡೇ” ಪಾಕಿಸ್ತಾನದಲ್ಲಿರುವ ನಸ್ರುಲ್ಲಾ ಹಾಗೂ ಅಂಜು ಅವರನ್ನು ಸಂಪರ್ಕಿಸಿ ಮದುವೆಯ ಸತ್ಯಾಸತ್ಯತೆಯನ್ನು ತಿಳಿದುಕೊಂಡಿದೆ. ತಾವಿಬ್ಬರೂ ಮದುವೆ ಆಗಿಲ್ಲ. ಇದೆಲ್ಲ ವದಂತಿ ಎಂದು ನಸ್ರುಲ್ಲಾ ಹಾಗೂ ಅಂಜು ಸ್ಪಷ್ಟನೆ ನೀಡಿದ್ದಾರೆ.

ನಸ್ರುಲ್ಲಾ ಹೇಳಿದ್ದೇನು?:

ನೀವು ಅಂಜು ಜೊತೆ ಮದುವೆಯಾಗಿದ್ದೀರಾ?

Advertisement

= ಇಲ್ಲ, ಇವೆಲ್ಲ ಸುಳ್ಳು. ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ನಮ್ಮ ಮದುವೆ ನಡೆದಿಲ್ಲ.

ಮದುವೆಯಾಗಿಲ್ಲ ಎಂದರೆ ನ್ಯಾಯಾಧೀಶರ ಮುಂದೆ ಏಕೆ ಹಾಜರಾಗಿದ್ದು?

= ನಾವು ಅಪಾಯದಲ್ಲಿರುವ ಕಾರಣ ನಾವು ನ್ಯಾಯಾಲಯದ ಮುಂದೆ ಹಾಜರಾಗಿದ್ದೇವೆ ಮತ್ತು ಭದ್ರತೆಯನ್ನು ಕೋರಲು ನ್ಯಾಯಾಲಯದ ಮುಂದೆ ಹೋಗಿದ್ದೇವೆ. ಅಂಜು ವಿದೇಶಿ ಮಹಿಳೆ ಎಂಬ ಕಾರಣಕ್ಕೆ ಸರ್ಕಾರ ನಮಗೆ 50 ಪೊಲೀಸ್ ಅಧಿಕಾರಿಗಳ ಭದ್ರತೆಯನ್ನೂ ನೀಡಿದೆ.

ಯಾರು ಅಪಾಯದಲ್ಲಿದ್ದಾರೆ ಮತ್ತು ಏಕೆ?

= ಅಂಜು ಪಾಕಿಸ್ತಾನದಲ್ಲಿರುವ ವಿದೇಶಿ ಪ್ರಜೆ. ಆಕೆಯ ಜೀವ ಅಪಾಯದಲ್ಲಿದೆ. ಆಕೆಯ ಮೇಲೆ ಯಾವಾಗ ಬೇಕಾದರೂ ದಾಳಿ ನಡೆಯಬಹುದು. ಇಲ್ಲಿ ವಿವಿಧ ರೀತಿಯ ಜನರಿದ್ದಾರೆ. ನಾವು ಅವಳನ್ನು ರಕ್ಷಿಸಲು ಬಯಸುತ್ತೇವೆ. ಅದಕ್ಕಾಗಿಯೇ ನಾವು ನ್ಯಾಯಾಲಯದ ಮುಂದೆ ಹಾಜರಾಗಿದ್ದೇವೆ.

ಮದುವೆಯ ಸರ್ಟಿಫಿಕೇಟ್ ಬಗ್ಗೆ ಏನು ಹೇಳುತ್ತೀರಿ?

= ಇದು ನನ್ನ ಮದುವೆ ಪ್ರಮಾಣಪತ್ರವಲ್ಲ. ಇವು ಹರಡುತ್ತಿರುವ ಸುಳ್ಳು ವದಂತಿಗಳು.

ಅಂಜು ನಿಮ್ಮ ಸ್ನೇಹಿತೆ ಅಥವಾ ಸಂಗಾತಿಯೇ?

= ಅಂಜು ನನ್ನ ಬೆಸ್ಟ್ ಫ್ರೆಂಡ್.

ಅಂಜು ಬುರ್ಖಾ ಹಾಕಿಕೊಂಡು ನ್ಯಾಯಾಲಯಕ್ಕೆ ಹೋಗಿದ್ದು ಏಕೆ?

= ಬುರ್ಖಾ ಧರಿಸುವುದು ಇಲ್ಲಿನ ಸಂಪ್ರದಾಯ. ಯಾರೂ ಗುರುತು ಹಿಡಿಯಬಾರದೆಂದು ಹಾಗೆ ಮಾಡಿದ್ದು.

ಅಂಜು ಇಸ್ಲಾಂಗೆ ಮತಾಂತರಗೊಂಡಿದ್ದಾಳಾ?

= ಇಲ್ಲ, ಅವಳು ಮಾಡಿದ ಧರ್ಮವನ್ನು ಈಗಲೂ ಪಾಲಿಸುತ್ತಾಳೆ.

ಅಂಜು ನಿಮ್ಮ ಬಳಿಗೆ ಏಕೆ ಬಂದರು?

= ಅವಳು ನನ್ನ ಬೆಸ್ಟ್ ಫ್ರೆಂಡ್. ಪ್ರವಾಸಿ ವೀಸಾದಲ್ಲಿ ಬಂದಿದ್ದಾಳೆ. ಅವಳು ಪಾಕಿಸ್ತಾನವನ್ನು ನೋಡಬೇಕೆಂದು ಬಯಸಿದ್ದಳು.

ಅಂಜು ತನ್ನ ಗಂಡನ ಜೊತೆ ಜಗಳ ಮಾಡಿಕೊಂಡಿದ್ದು ಗೊತ್ತಾ?

= ಹೌದು, ಅವಳ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ ಎಂದು ನನಗೆ ತಿಳಿದಿದೆ.

ಒಂದು ವೇಳೆ ನಾಳೆಯ ದಿನ ಅಂಜು ವಿಚ್ಛೇದನ ಪಡೆದರೆ, ನೀವು ಅವಳನ್ನು ಮದುವೆಯಾಗುತ್ತೀರಾ?

= ಅದು ಅವಳ ನಿರ್ಧಾರ. ಅವಳು ಹಾಗೆ ಹೇಳಿದರೆ ನಾನು ಮಾಡುತ್ತೇನೆ. ಆದರೆ ಸದ್ಯಕ್ಕೆ ಆಕೆ ಭಾರತಕ್ಕೆ ವಾಪಸ್ ಆಗುತ್ತಿದ್ದಾಳೆ.

ಅಂಜು ಅವರ ವೀಸಾ ಅವಧಿ ಯಾವಾಗ ಮುಗಿಯುತ್ತದೆ?

= ಆಗಸ್ಟ್ 4 ರಂದು ಮುಕ್ತಾಯಗೊಳ್ಳುತ್ತದೆ.

ಇದಲ್ಲದೇ “ಇಂಡಿಯಾ ಟುಡೇ” ಈ ಬಗ್ಗೆ ಅಂಜು ಅವರ ಜೊತೆಯೂ ಮಾತನಾಡಿದ್ದು, ಅವರು ಕೂಡ ಮದುವೆಯಾಗಿರುವ ವಿಚಾರವನ್ನು ಅಲ್ಲಗೆಳೆದಿದ್ದಾರೆ.

ಅಂಜು ಹೇಳಿದ್ದೇನು?:

ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಮತ್ತು ನಸ್ರುಲ್ಲಾ ಅವರ ದೃಶ್ಯಗಳಿವೆ

=ನಾನು ಪ್ರವಾಸಕ್ಕೆಂದು ಪಾಕಿಸ್ತಾನಕ್ಕೆ ಬಂದಿದ್ದೇನೆ. ಇಲ್ಲೊಬ್ಬ ಪ್ರಸಿದ್ಧ ವ್ಲಾಗರ್ ಇದ್ದಾನೆ. ಅವನು ಪ್ರಯಾಣ ಮಾಡುವಾಗ ನನ್ನ ಹಾಗೂ ನಸ್ರುಲ್ಲಾ ಅವರ ಫೋಟೋ, ವಿಡಿಯೋಗಳನ್ನು ತೆಗೆದಿದ್ದಾನೆ.

ನ್ಯಾಯಾಲಯಕ್ಕೆ ಏಕೆ ಹೋಗಿದ್ದೀರಿ? ಮತ್ತು ಮದುವೆಯ ಪ್ರಮಾಣಪತ್ರದ ಬಗ್ಗೆ ಏನು ಹೇಳುತ್ತೀರಿ?

ನಸ್ರುಲ್ಲಾ ಮತ್ತು ನಾನು ಮದುವೆಯಾಗಿದ್ದೇವೆ ಎನ್ನುವುದು ಸುಳ್ಳು. ನಾನು ಭಾರತಕ್ಕೆ ಹಿಂತಿರುಗುವ ಪ್ರಕ್ರಿಯೆ ಇದೆ ಅದಕ್ಕಾಗಿಯೇ ನಾನು ಅಲ್ಲಿಗೆ ಹೋಗಿದ್ದೆ.

ನೀವು ಈಗಾಗಲೇ ವೀಸಾವನ್ನು ಹೊಂದಿದ್ದೀರಿ. ನಿಮ್ಮ ವಾಪಸಾತಿಗೆ ಬೇರೆ ಯಾವ ಪ್ರಕ್ರಿಯೆ ಅಗತ್ಯವಿದೆ?

= ನಾವು ನ್ಯಾಯಾಲಯಕ್ಕೆ ಹೋಗಲಿಲ್ಲ. ನಾವು ಕೆಲವು ದಾಖಲೆಗಳ ಕೆಲಸಕ್ಕಾಗಿ ಪೊಲೀಸ್ ಠಾಣೆಗೆ ಹೋಗಿದ್ದೇವೆ.

ನ್ಯಾಯಾಲಯದ ಹೊರಗೆ ಬುರ್ಖಾ ಧರಿಸಿರುವ ನಿಮ್ಮ ಫೋಟೋಗಳ ಬಗ್ಗೆ ಏನು ಹೇಳುತ್ತೀರಿ?

= ಅದು ಬುರ್ಖಾ ಅಲ್ಲ. ಅದು ಬೇರೆಯೇ ಆಗಿದೆ. ನಾವು ಹೊರಗೆ ಹೋಗುವಾಗ, ಏನನ್ನಾದರೂ ಮುಚ್ಚಿಡಲು ಅಗತ್ಯವಿದೆ. ಅದಕ್ಕಾಗಿಯೇ ನಾನು ಅದನ್ನು ಧರಿಸಿದ್ದೇನೆ.

ಹಾಗಾದರೆ ನೀವು ಮದುವೆಯ ವಿಚಾರವನ್ನು ನಿರಾಕರಿಸುತ್ತಿದ್ದೀರಾ?

= ಹೌದು. ಅಂಥದ್ದೇನೂ ಇಲ್ಲ. ನಾವು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗಾಗಿ ಹೊರಗೆ ಹೋಗಿದ್ದೇವೆ ಅಷ್ಟೆ. ವದಂತಿಗಳು ಹುಟ್ಟಿಕೊಂಡಿವೆ, ಆದರೆ ನಾವು ಮದುವೆಯಾಗಲಿಲ್ಲ ಎಂದಿದ್ದಾರೆ.

ಮಲಕಂದ್ ವಿಭಾಗದ ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ ನಾಸಿರ್ ಮೆಹಮೂದ್ ಸತ್ತಿ ಅವರು ಅಂಜು (35) ಮತ್ತು ನಸ್ರುಲ್ಲಾ (29) ಅವರ ನಿಕಾಹ್‌ ಆಗಿದ್ದು ನಿಜವೆಂದಿದ್ದಾರೆ.  ಅಂಜು ಇಸ್ಲಾಂಗೆ ಮತಾಂತರಗೊಂಡ ನಂತರ ಫಾತಿಮಾ ಎಂದು ಬದಲಾಯಿಸಿಕೊಂಡಿದ್ದಾರೆ  ಎಂದು ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next