ಫ್ಲೋರಿಡಾ: ಅಮೆರಿಕದಲ್ಲೀಗ ಕೋವಿಡ್ 19 ವೈರಸ್ ನದ್ದೇ ರಣಕೇಕೆ. ಅಮೆರಿಕದ ಹಿರಿಯ ದಂಪತಿ ಅದಕ್ಕೆ ಬಲಿಯಾಗಿದ್ದಾರೆ. ಅದೂ ಕೇವಲ ಆರು ನಿಮಿಷಗಳ ಅಂತರದಲ್ಲಿ ಮಾ.29ರಂದು ನಿಧನರಾಗಿದ್ದಾರೆ.
ಅಸುನೀಗಿದ ದಂಪತಿಯ ಹೆಸರು ಸ್ಟುವರ್ಟ್ ಬೇಕರ್ (74), ಪತ್ನಿ ಆ್ಯಡ್ರಿಯನ್ ಬೇಕರ್ (72). ಸ್ಟುವರ್ಟ್ ಬೇಕರ್‌ಗೆ ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಕೊಂಚ ಅಸ್ವಸ್ಥತೆ ಉಂಟಾಗಿತ್ತು. ಹೀಗಾಗಿ ಕುಟುಂಬದ ವೈದ್ಯರು ಸ್ಟುವರ್ಟ್‌ಗೆ ಚಿಕಿತ್ಸೆ ನೀಡಿದರೂ, ಪರಿಸ್ಥಿತಿ ಸುಧಾರಿಸಿದೇ ಇದ್ದ ಕಾರಣ ಅವರನ್ನು ಫ್ಲೋರಿಡಾದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಕೂಡ ಮನೆಗೆ ವಾಪಸ್ ಕಳುಹಿಸಿ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಿದರು.
ಮಾ.19ರ ವೇಳೆ ಸ್ಟುವರ್ಟ್‌ಗೆ ಜ್ವರ ಮತ್ತು ಅಸ್ತಮಾ ಕಾಣಿಸಿಕೊಂಡದ್ದರಿಂದ ಮತ್ತೆ ಆಸ್ಪತ್ರೆಗೆ ದಾಖಲಿಸಲಾಯಿತು. ಮಾ.24 ರಂದು ಅವರಿಗೆ ಕೊರೊನಾ ಸೋಂಕು ಇರುವುದು ಖಚಿತವಾಯಿತು.
ಇದೇ ವೇಳೆ ಅವರ ಪತ್ನಿ ಆ್ಯಡ್ರಿಯನ್‌ಗೆ ಕ್ವಾರಂಟೈನ್‌ನಲ್ಲಿ ಇರಲು ಸೂಚಿಸಲಾಗಿತ್ತು. ಪತಿಯಲ್ಲಿ ಸೋಂಕು ಇದ್ದದ್ದು ಖಚಿತವಾಗುತ್ತಲೇ, ಪತ್ನಿಗೂ ಪರೀಕ್ಷೆ ನಡೆಸಿದಾಗ ಅವರಿಗೆ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರಿಬ್ಬರಿಗೆ ಒಂದೇ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲು ಶುರುಮಾಡಲಾಯಿತು. ಅಂತಿಮವಾಗಿ ಮಾ.29 ರಂದು ಹಿರಿಯ ದಂಪತಿ ಕೇವಲ ಆರು ನಿಮಿಷಗಳ ಅವಧಿಯಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಈ ಬಗ್ಗೆ ವಿಡಿಯೋ ಸಂದೇಶ ನೀಡಿರುವ ಪುತ್ರ ಬಡ್ಡಿ ಬೇಕರ್ ವೈರಸ್‌ನಿಂದ ಉಂಟಾಗಿರುವ ಸಮಸ್ಯೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅವರು ಮಾಡಿಕೊಂಡಿರುವ ಮನವಿ ಈಗ ವೈರಲ್ ಆಗಿದೆ.