Advertisement

ದಾವಣಗೆರೆ: ನಗರದಲ್ಲಿರುವ ರಾಜ್ಯ ಮಹಿಳಾ ನಿಲಯದ ಆವರಣ ಬುಧವಾರ ಎಂದಿನಂತಿರಲಿಲ್ಲ. ಇಡೀ ಆವರಣ ತಳೀರು ತೋರಣದ ಅಲಂಕಾರದಿಂದ ಕಂಗೊಳಿಸುತ್ತಿತ್ತು. ಅಲ್ಲಲ್ಲಿ ಚಿತ್ತಾಕರ್ಷಕ ರಂಗೋಲಿ ಚಿತ್ತಾರವೂ ಇತ್ತು. ಈ ನಡುವೆ ಮಂಗಳವಾದ್ಯದ ನಿನಾದ, ಅತ್ತಿತ್ತ ಸಡಗರದಿಂದ ಓಡಾಡುವ ಹೆಂಗಳೆಯರ ಕಾಲ್ಗೆಜ್ಜೆಯ ಸದ್ದು ಸಂಭ್ರಮವನ್ನು ಇಮ್ಮಡಿಸಿತ್ತು.

Advertisement

ಮಹಿಳಾ ನಿಲಯದಲ್ಲಿ ಇಷ್ಟೊಂದು ಸಡಗರ-ಸಂಭ್ರಮಕ್ಕೆ ಕಾರಣವಾದದ್ದು ನಿಲಯ ವಾಸಿ ಯುವತಿಯ ಮದುವೆ. ನಿಲಯವಾಸಿ ಸೌಮ್ಯಳನ್ನು (28 ವರ್ಷ) ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಡೇಕೋಡಿಯ ಸುಬ್ರಾಯ ಮಂಜುನಾಥ ಭಟ್ಟ (37 ವರ್ಷ) ಬಾಳಸಂಗಾತಿಯನ್ನಾಗಿ ಸ್ವೀಕರಿಸಿದರು. ವಧು ಸೌಮ್ಯಳ ಪಾಲಿಗೆ ಅಧಿಕಾರಿಗಳೇ ಪೋಷಕರಾಗಿ, ಹಿರಿಯರಾಗಿ, ಬಂಧು-ಬಾಂಧವರಾಗಿ ಶಾಸ್ತ್ರೋಕ್ತವಾಗಿ ಧಾರೆ ಎರೆದು ತಮ್ಮದೇ ಮಗಳ ಮದುವೆ ಮಾಡಿದ ಹೆಮ್ಮೆಯ ಭಾವ ಮೆರೆದರು.

ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿ, ನೌಕರ ಸಿಬ್ಬಂದಿಯವರು ಮದುವೆಯ ಎಲ್ಲ ಶಾಸ್ತ್ರಗಳನ್ನು ಅಚ್ಚುಕಟ್ಟಾಗಿ ನೆರವೇರಿಸಿ ನಿಲಯವಾಸಿ ಸೌಮ್ಯಳ ಮೇಲೆ ತಮಗಿರುವ ಪ್ರೀತಿ ಪ್ರದರ್ಶಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಸಿಇಒ ಡಾ| ವಿಜಯಮಹಾಂತೇಶ್‌ ದಾನಮ್ಮನವರ್‌ ವಧುವಿನ ಪೋಷಕ ಸ್ಥಾನದಲ್ಲಿ ನಿಂತು ಮದುವೆ ಶಾಸ್ತ್ರಗಳಿಗೆ ಕೈಜೋಡಿಸಿದರು. ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷೆ ಚಿಕ್ಕಮ್ಮ ಬಸವರಾಜ್‌, ಜಿಪಂ ಸದಸ್ಯ ತೇಜಸ್ವಿ ಪಟೇಲ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಸೇರಿದಂತೆ ಇತರ ಗಣ್ಯರು ಈ ಅಪರೂಪದ ಮದುವೆಗೆ ಸಾಕ್ಷಿಯಾದರು.

ನಿಲಯದಲ್ಲಿ ಈ ಹಿಂದೆ ಮದುವೆಯಾದವರು ಸಹ ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ತಾವು ಸಂತೋಷದಿಂದ ಜೀವನ ನಡೆಸುತ್ತಿರುವುದಾಗಿ ಸಂತಸ ವ್ಯಕ್ತಪಡಿಸಿದರು.

Advertisement

ನಿಲಯದಲ್ಲಿ 40 ವಿವಾಹ: ದಾವಣಗೆರೆಯ ರಾಜ್ಯ ಮಹಿಳಾ ನಿಲಯದಲ್ಲಿ ಈವರೆಗೆ 40 ವಿವಾಹ, 7 ನಾಮಕರಣ ನಡೆದಿವೆ. ನಿಲಯದಲ್ಲಿ ಮದುವೆಯಾಗುವ ಈ ಜೋಡಿಯ ಜೀವನ ಹೇಗಿದೆ ಎಂದು ಇಲಾಖೆ ಐದು ವರ್ಷ ನಿಗಾ ಇಡುತ್ತದೆ. ಮದುವೆ ಸಂದರ್ಭದಲ್ಲಿ ವಧು-ವರರ ಜಂಟಿ ಖಾತೆಯಲ್ಲಿ 15 ಸಾವಿರ ರೂ.ಗಳ ಬಾಂಡ್‌ ನೀಡಲಾಗುತ್ತದೆ. ಮದುವೆ ಖರ್ಚಿಗಾಗಿ ತಲಾ ಐದು ಸಾವಿರ ರೂ. ನೀಡಲಾಗುತ್ತದೆ ಹಾಗೂ ಮದುವೆ ಕಾರ್ಯಕ್ರಮ ಸಂಘಟಿಸಲಾಗುತ್ತದೆ. ಈವರೆಗೆ ನಿಲಯದ ಯುವತಿಯರನ್ನು ಮದುವೆಯಾದವರೆಲ್ಲರೂ ಉತ್ತಮ ಜೀವನ ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್‌ ಇದೇ ಸಂದರ್ಭದಲ್ಲಿ ಹೆಮ್ಮೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next