ಬೆಂಗಳೂರು: ವಿವಾಹಿತ ಮಹಿಳೆಯೊಬ್ಬರು ಮೂರು ವರ್ಷದ ಮಗಳನ್ನು ಬಿಟ್ಟು ಪ್ರಿಯರಕನೊಂದಿಗೆ ಸ್ವಇಚ್ಛೆಯಿಂದ ಮನೆ ಬಿಟ್ಟು ಹೋದ ಪ್ರಕರಣ ಸೋಮವಾರ ಹೈಕೋರ್ಟ್‌ನಲ್ಲಿ ಸುಖಾಂತ್ಯ ಕಂಡಿತು.
“ಸ್ವಯಂ ಪ್ರೇರಿತಳಾಗಿ ನಾನು ಪ್ರಿಯಕರನೊಂದಿಗೆ ಹೋಗಿದ್ದೇನೆ. ಆತನನ್ನು ಈಗಾಗಲೇ ನಾನು ಮದುವೆಯಾಗಿದ್ದೇನೆ. ಆತನೊಂದಿಗೆ ಮುಂದಿನ ಬಾಳು ಬದುಕುತ್ತೇನೆ. ತಂದೆ ಅಥವಾ ಮೊದಲ ಪತಿಯ ಮನೆಗೆ ಹೋಗುವುದಿಲ್ಲ’ ಎಂಬ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡ ಹೈಕೋರ್ಟ್, ಆಕೆಯನ್ನು ಪ್ರೀಯಕರನೊಂದಿಗೆ ಹೋಗಲು ಅನುಮತಿ ನೀಡಿತು.
ತನ್ನ ವಿವಾಹಿತ ಮಗಳನ್ನು ಯುವಕನೋರ್ವ ಅಪಹರಿಸಿ ಅಕ್ರಮ ಬಂಧನದಲ್ಲಿ ಇರಿಸಿದ್ದಾನೆ. ಆಕೆಯನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ ತಂದೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯು ಹೈಕೋರ್ಟ್ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ಈ ವೇಳೆ ಪೊಲೀಸರು ಮಹಿಳೆಯನ್ನು ನ್ಯಾಯಪೀಠದ ಮುಂದೆ ಹಾಜರಿಪಡಿಸಿದರು. ಆಗ ನಾನು ಸ್ವ ಇಚ್ಛೆಯಿಂದ ಪ್ರಿಯಕರನೊಂದಿಗೆ ಹೋಗಿರುವುದಾಗಿ ಮಹಿಳೆ ಹೇಳಿಕೆ ನೀಡಿದರು. ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ತನ್ನ ಇಷ್ಟದಂತೆ ಬದುಕುವ ಸಂಪೂರ್ಣ ಹಕ್ಕು ಮಹಿಳೆಗೆ ಇದೆ. ಇದು ಅಪಹರಣ ಅಥವಾ ಅಕ್ರಮ ಬಂಧನ ಆಗುವುದಿಲ್ಲ ಎಂದು ಹೇಳಿ, ಅರ್ಜಿಯನ್ನು ಇತ್ಯರ್ಥಪಡಿಸಿತು.
ತನ್ನ ಮಗಳನ್ನು ಅಪಹರಿಸಿದ ಯುವಕನ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವ ಅನುಮತಿ ನೀಡುವಂತೆ ಅರ್ಜಿದಾರ ನ್ಯಾಯಪೀಠಕ್ಕೆ ಮನವಿ ಮಾಡಿದರು. ಆದರೆ, ಇದನ್ನು ನಿರಾಕರಿಸಿದ ನ್ಯಾಯಪೀಠ, ಕ್ರಿಮಿನಲ್ ದೂರು ದಾಖಲಿಸುವುದು ನಿಮಗೆ (ಅರ್ಜಿದಾರರಿಗೆ) ಬಿಟ್ಟ ವಿಚಾರ. ಅದಕ್ಕಾಗಿ ಅನುಮತಿ ನೀಡುವ ಅವಶ್ಯಕತೆ ಇಲ್ಲ ಎಂದು ಹೇಳಿತು.
ನನ್ನ ಮಗಳಿಗೆ 2012ರಲ್ಲಿ ಮದುವೆಯಾಗಿದೆ. ಆಕೆಯ ಪತಿ ದುಬೈನಲ್ಲಿದ್ದಾರೆ. ದಂಪತಿಗೆ ಮೂರು ವರ್ಷದ ಹೆಣ್ಣು ಮಗಳಿದ್ದಾಳೆ. ಈ ಮಧ್ಯೆ ಮಗಳನ್ನು ಯುವಕನೊರ್ವ 2019ರ ಫೆ.9ರಂದು ಮನೆಯಿಂದ ಅಪಹರಿಸಿ ಅಕ್ರಮ ಬಂಧನದಲ್ಲಿ ಇರಿಸಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು. ಎಫ್ಐಆರ್ ದಾಖಲಿಸಿರುವ ಪೊಲೀಸರು, ತನ್ನ ಮಗಳ ಪತ್ತೆಗೆ ಕ್ರಮ ಜರುಗಿಸಿಲ್ಲ ಎಂದು ತಂದೆ ಅರ್ಜಿಯಲ್ಲಿ ಅಳಲು ತೋಡಿಕೊಂಡಿದ್ದಾರೆ.