“ಚೆಲುವಿನ ಚಿತ್ತಾರ’ ಚಿತ್ರದ ಬೆಡಗಿ ಅಮೂಲ್ಯ ಹಾಗೂ ಜಗದೀಶ್ ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಕಾಲಭೈರವೇಶ್ವರ ಸನ್ನಿಧಿಯಲ್ಲಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶುಕ್ರವಾರದಂದು ಆದಿ ಚುಂಚನಗಿರಿಯ ಬಿಜಿಎಸ್ ಸಭಾ ಮಂಟಪದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ವೇದಿಕೆಯಲ್ಲಿ ಪುರೋಹಿತ ಲಕ್ಷ್ಮೀಕಾಂತ ಭಟ್ ನೇತೃತ್ವದಲ್ಲಿ ವರಪೂಜೆ, ಕಂಕಣ ಶಾಸ್ತ್ರ ಸೇರಿ ಒಕ್ಕಲಿಗ ಸಂಪ್ರದಾಯದಂತೆ ವಿವಾಹ ಶಾಸ್ತ್ರಗಳು ಬೆಳಗ್ಗೆಯಿಂದಲೇ ನೆರವೇರಿದವು.
ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದದೊಂದಿಗೆ ಶ್ರೀ ನಾಗಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಭವ್ಯವಾಗಿ ನಿರ್ಮಿಸಿದ್ದ ವಿವಾಹ ಮಂಟಪಕ್ಕೆ ಪುಷ್ಪಾಲಂಕೃತ ಆಕರ್ಷಕ ಪಲ್ಲಕ್ಕಿಯಲ್ಲಿ ನಟಿ ಅಮೂಲ್ಯ ಅವರನ್ನು ಕರೆತರಲಾಯಿತು. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಬೆಳಗ್ಗೆ ಅಭಿಜಿತ್ ಲಗ್ನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನ ನಟಿ ಅಮೂಲ್ಯ – ಜಗದೀಶ್ ಕಂಕಣಧಾರಣೆ, ಕಾಶಿಯಾತ್ರೆ, ನಂತರ ಕನ್ಯಾದಾನ, ಮಾಂಗಲ್ಯ ಧಾರಣೆ ನಡೆಸುವುದರೊಂದಿಗೆ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದರು.
ಬಳಿಕ ಬಿಜಿಎಸ್ ಸಭಾ ಮಂಟಪದಲ್ಲಿ ಫೋಟೋಸೆಷನ್ ಕಾರ್ಯಕ್ರಮ ನಡೆಯಿತು. ವಧು ಅಮೂಲ್ಯ ನೀಲಿ ಬಣ್ಣದ ರೇಷ್ಮೆ ಸೀರೆ ಮತ್ತು ವಿಶೇಷವಾಗಿ ವಿನ್ಯಾಸ ಮಾಡಿದ್ದ ರವಿಕೆಯಲ್ಲಿ ಕಂಗೊಳಿಸಿದರು. ವರ ಜಗದೀಶ್ ರೇಷ್ಮೆ ಶರ್ಟ್ ಮತ್ತು ಪಂಚೆಯಲ್ಲಿ ಆಕರ್ಷಕವಾಗಿ ಮಿಂಚಿದರು.
ಗಣೇಶ್ ನೇತೃತ್ವ: ಕ್ಷೇತ್ರದ ಅಧಿದೇವರಾದ ಕಾಲಭೈರವೇಶ್ವರ ಸನ್ನಿಧಿಯ ಪ್ರಾಂಗಣದಲ್ಲಿ ಗೋಲ್ಡನ್‌ಸ್ಟಾರ್ ಗಣೇಶ್, ಪತ್ನಿ ಶಿಲ್ಪಾ ಗಣೇಶ್ ಸೇರಿ ಕುಟುಂಬದ ಸದಸ್ಯರು ಮದುವೆಯ ನೇತೃತ್ವ ವಹಿಸಿದ್ದರು. ಆತ್ಮೀಯರು, ಗಣ್ಯರು, ಬೆಂಗಳೂರು ಶಾಖಾ ಮಠದ ಶ್ರೀ ಶೇಖರನಾಥ ಸ್ವಾಮೀಜಿ, ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮದುವೆಗೆ ಸಾಕ್ಷಿಯಾದರು. ನಟಿ ಅಮೂಲ್ಯ, ಜಗದೀಶ್ ಮದುವೆ ವೀಕ್ಷಿಸಲು ಅಭಿಮಾನಿಗಳ ದಂಡು ಚುಂಚನಗಿರಿಗೆ ಆಗಮಿಸಿತ್ತು.
ಅಭಿಮಾನಿಗಳನ್ನು ನಿಯಂತ್ರಿಸುವುದು ಕುಟುಂಬ ವರ್ಗಕ್ಕೆ ಕಷ್ಟವಾಗಿತ್ತು. ವಿಧಿ ಇಲ್ಲದೇ ಪೊಲೀಸರ ಸೇವೆಯನ್ನು ಬಳಸಿಕೊಳ್ಳಲಾಯಿತು. ಆಪ್ತ ವಲಯದವರಿಗೆ ಮಾತ್ರ ವಿವಾಹ ಸಮಾರಂಭಕ್ಕೆ ಆಹ್ವಾನಿಸಿದ್ದರು. ಆದರೂ ಸಾವಿರಾರು ಅಭಿಮಾನಿಗಳು ಕ್ಷೇತ್ರಕ್ಕೆ ಆಗಮಿಸಿ ತಮ್ಮ ನೆಚ್ಚಿನ ನಟಿಯ ಮದುವೆಯ ಸಂಭ್ರಮದ ಕ್ಷಣಗಳನ್ನು ಕಣ್ತುಂಬಿಕೊಂಡರು.
ಗಣ್ಯರ ಆಗಮನ: ಹಿರಿಯ ನಟ, ಶಾಸಕ ಅಂಬರೀಶ್, ಶಾಸಕ ಸಿ.ಟಿ.ರವಿ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಪತ್ನಿ ಪ್ರಮೀಳಾರಾಣಿ, ಕರವೇ ರಾಜಾಧ್ಯಕ್ಷ ನಾರಾಯಣಗೌಡ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ಚಿತ್ರರಂಗದ ಮತ್ತು ರಾಜಕೀಯ ನಾಯಕರು ನವಜೋಡಿಗೆ ಶುಭ ಹಾರೈಸಿದರು.