Advertisement

ಪೊಲೀಸ್‌ ಠಾಣೆಯಲ್ಲೇ  ಸಪ್ತಪದಿ ತುಳಿದ ಜೋಡಿಹಕ್ಕಿ 

04:31 PM Oct 01, 2018 | |

ಬೆಳಗಾವಿ: ತಮ್ಮ ಪ್ರೀತಿ ಹಾಗೂ ಮದುವೆಗೆ ಮನೆಯವರ ತೀವ್ರ ವಿರೋಧದಿಂದ ಬೇಸತ್ತಿದ್ದ ಯುವ ಪ್ರೇಮಿಗಳು ಕೊನೆಗೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿ ಅಲ್ಲಿಯೇ ಪೋಷಕರ ಹಾಗೂ ಪೊಲೀಸರ ಸಮ್ಮುಖದಲ್ಲಿ ಹಸೆಮನೆ ಏರಿದ ಅಪರೂಪದ ಪ್ರಕರಣ ಬೆಳಗಾವಿ ನಗರದಲ್ಲಿ ಶನಿವಾರ ನಡೆದಿದೆ.

Advertisement

ಇಲ್ಲಿಯ ವೈಭವ ನಗರದ ಅನಿಲ ಚವ್ಹಾಣ(24) ಹಾಗೂ ರಾಮತೀರ್ಥ ನಗರದ ದೀಪಾ ಲಮಾಣಿ (21) ಮದುವೆಯಾದ ಜೋಡಿ. ಶನಿವಾರ ಸಂಜೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಶ್ರೀದೇವಿ ಪಾಟೀಲ ಹಾಗೂ ಪಾಲಕರ ಸಮ್ಮುಖದಲ್ಲಿ ಈ ಜೋಡಿಯು ಪರಸ್ಪರ ಹಾರ ಹಾಕಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿತು. 

ಕುಟುಂಬದ ವಿರೋಧದಿಂದ ಬೇಸತ್ತು ಠಾಣೆಗೆ ಬಂದಿದ್ದ ಈ ಜೋಡಿಯ ಪ್ರೇಮದ ಕತೆ ಕೇಳಿದ ಪೊಲೀಸ್‌ ಅಧಿಕಾರಿ ಶ್ರೀದೇವಿ ಪಾಟೀಲ ಇಬ್ಬರೂ ಪಾಲಕರನ್ನು ಠಾಣೆಗೆ ಕರೆಸಿ ಮಾತನಾಡಿದ್ದಾರೆ. ಎರಡೂ ಕಡೆಯ ಕುಟುಂಬದ ಸದಸ್ಯರ ಅಭಿಪ್ರಾಯ ಆಲಿಸಿದ ಪೊಲೀಸ್‌ ಸಿಬ್ಬಂದಿ, ಕೊನೆಗೆ ಪಾಲಕರ ಮನವೊಲಿಸುವಲ್ಲಿ ಯಶಸ್ವಿಯಾಗಿ ಠಾಣೆಯಲ್ಲೇ ಈ ಜೋಡಿಯ ಮದುವೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿಗೆ ಮದುವೆಯಾಗಲು ಮನೆಯವರ ಒಪ್ಪಿಗೆ ಇರಲಿಲ್ಲ. ಅನಿಲ ಚವ್ಹಾಣ ಕುಟುಂಬದಿಂದ ಒಪ್ಪಿಗೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ದೀಪಾ ಹಾಗೂ ಅನಿಲ ಮನೆಯವರು ಇದಕ್ಕೆ ವಿರೋಧ ಮಾಡಿದ್ದರು. ಎರಡೂ ಮನೆಯವರನ್ನು ಅನುಮತಿ ಕೊಡುವಂತೆ ಸಾಕಷ್ಟು ಪ್ರಯತ್ನ ಮಾಡಿದ ದೀಪಾ ಹಾಗೂ ಅನಿಲ ಕೊನೆಗೆ ಅನಿವಾರ್ಯವಾಗಿ ಪೊಲೀಸ್‌ ಠಾಣೆಯ ಮೆಟ್ಟಿಲು ಹತ್ತಿದರು. ಯುವ ಜೊಡಿಯ ಬೆಂಬಲಕ್ಕೆ ನಿಂತು ಠಾಣೆಯಲ್ಲೇ ಅಪರೂಪದ ಮದುವೆ ಮಾಡಿ ಯುವ ಜೋಡಿಯ ಬಾಳಲ್ಲಿ ಸಂತಸ ಮೂಡುವಂತೆ ಮಾಡಿದರು. ಎರಡೂ ಮನೆಯ ಪಾಲಕರು ಈ ಸಂತಸದಲ್ಲಿ ಭಾಗಿಯಾಗಿದ್ದರು.

ಈ ಜೋಡಿಯು ಶನಿವಾರ ಇಲ್ಲಿಗೆ ಬರುವ ಮೊದಲು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಆದರೆ ಅವರಿಗೆ ಧೈರ್ಯ ಇರಲಿಲ್ಲ. ನಮ್ಮನ್ನು ಸಂಪರ್ಕಿಸಿ ನಾವು ಠಾಣೆಯಲ್ಲೇ ಮತ್ತೆ ನಿಮ್ಮ ಎದುರಲ್ಲಿ ಮದುವೆಯಾಗುತ್ತೇವೆ ಎಂದು ಕೇಳಿದರು. ಇವರ ಮಾತು ಕೇಳಿ ನಾವೇ ಅವರ ಪಾಲಕರನ್ನು ಕರೆಸಿ ಅವರ ಮನವೊಲಿಸಿ ಮದುವೆ ಮಾಡಿಸಿದ್ದೇವೆ ಎಂದು ಪೊಲೀಸ್‌ ಅಧಿಕಾರಿ ಶ್ರೀದೇವಿ ಪಾಟೀಲ ‘ಉದಯವಾಣಿ’ಗೆ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next