ಬೆಂಗಳೂರು: “ಮದುವೆ ಹಕ್ಕನ್ನು ಜಾತಿ ಧರ್ಮದ ಹೆಸರಲ್ಲಿ ಕಸಿದುಕೊಳ್ಳಲಾಗದು’ ಎಂದು ಅಭಿಪ್ರಾಯಪಟ್ಟಿರುವ ರಾಜ್ಯ ಹೈಕೋರ್ಟ್, ಪ್ರಾಪ್ತ ವಯಸ್ಕರು ತಮ್ಮಿಷ್ಟದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು ಸಂವಿಧಾನದಲ್ಲೇ ಕೊಡಲಾಗಿದೆ ಎಂದು ಹೇಳಿದೆ.
ತಾನು ಪ್ರೀತಿಸುತ್ತಿರುವ ಯುವತಿಯನ್ನು ಅಕ್ರಮ ಬಂಧನದಲ್ಲಿರಿಸಿದ್ದು, ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ಅನ್ಯಧರ್ಮದ ಯುವಕನೊಬ್ಬ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್. ಸುಜಾತಾ ಹಾಗೂ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಾಪ್ತರು ತಾವು ಇಷ್ಟಪಟ್ಟ ವ್ಯಕ್ತಿಯನ್ನು ಮದುವೆಯಾಗುವುದು ಅವರ ಮೂಲಭೂತ ಹಕ್ಕು. ತಾವು ಇಷ್ಟಪಟ್ಟವರನ್ನು ಜೀವನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವ ಮೂಲಭೂತ ಹಕ್ಕನ್ನು ಸಂವಿಧಾನದಲ್ಲಿ ಕೊಡಲಾಗಿದೆ. ಇಬ್ಬರು ವ್ಯಕ್ತಿಗಳ ವೈಯಕ್ತಿಕ ಸಂಬಂಧ ವಿಚಾರದಲ್ಲಿ ಕೊಡಮಾಡಲ್ಪಟ್ಟ ಈ ಸ್ವಾತಂತ್ರ್ಯವನ್ನು ಜಾತಿ ಅಥವಾ ಧರ್ಮದ ಕಾರಣದಿಂದ ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ಯುವತಿ ತನ್ನ ಜೀವನದ ಬಗ್ಗೆ ತೀರ್ಮಾನ ಕೈಗೊಳ್ಳಲು ಸಮರ್ಥಳಾಗಿದ್ದಾಳೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿದೆ.
ಪ್ರಕರಣವೇನು?
ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಯುವತಿಗೆ ನಾಲ್ಕು ವರ್ಷದ ಹಿಂದೆ ಮದುವೆಯಾಗಿತ್ತು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದಳು. ಒಂದು ವರ್ಷದ ಹಿಂದೆ ಪತಿಯಿಂದ ವಿಚ್ಛೇದನ ಪಡೆದು, ಚಂದ್ರಾಲೇಔಟ್‌ನಲ್ಲಿ ಪಾಲಕರ ಜತೆ ನೆಲೆಸಿದ್ದಳು. ಈ ನಡುವೆ ಸಹೋದ್ಯೋಗಿ ಜತೆ ಪ್ರೇಮಾಂಕುರವಾಗಿತ್ತು. ಆತನನ್ನು ಮದುವೆಯಾಗುವ ವಿಚಾರವನ್ನು ಪಾಲಕರ ಮುಂದೆ ಪ್ರಸ್ತಾಪಿಸಿದಾಗ ಒಂದು ವರ್ಷದ ಹಿಂದೆಯಷ್ಟೇ ವಿಚ್ಛೇದನವಾಗಿದ್ದರಿಂದ ಮತ್ತೆ ಈಗಲೇ ಮದುವೆಯಾಗುವುದು ಬೇಡ ಎಂದು ಆಕೆಗೆ ಬುದ್ಧಿ ಹೇಳಿದ್ದರು. ಯುವತಿಯನ್ನು ಅಕ್ರಮ ಬಂಧನದಲ್ಲಿರಿಸಿರುವುದಾಗಿ ಯುವಕ ಹೈಕೋರ್ಟ್ ಮೆಟ್ಟಿಲೇರಿದ್ದ.
ಈ ಮೊದಲು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ, ಯುವತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಚಂದ್ರಾಲೇಔಟ್ ಠಾಣೆ ಪೊಲೀಸರಿಗೆ ನಿರ್ದೇಶಿಸಿತ್ತು. ಕೋರ್ಟ್ ನಿರ್ದೇಶನದಂತೆ ಯುವತಿಯನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ಯುವತಿ, ಸಹೋದ್ಯೋಗಿಯನ್ನು ಪ್ರೀತಿಸುತ್ತಿದ್ದೇನೆ. ಆತನನ್ನೇ ಮದುವೆಯಾಗಲು ನಿರ್ಧರಿಸಿದ್ದೇನೆ. ಆದರೆ, ಆತ ಅನ್ಯ ಧರ್ಮಕ್ಕೆ ಸೇರಿದವನೆಂಬ ಕಾರಣದಿಂದ ಮದುವೆಗೆ ನನ್ನ ಪಾಲಕರು ಸಮ್ಮತಿ ನೀಡುತ್ತಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದಳು.