ಬಾಗಲಕೋಟೆ : ಕಳೆದ ಜೂ. 1ರಿಂದ ಜಿಲ್ಲೆಯ ಸ್ಥಳೀಯ ನಿವಾಸಿಗಳಲ್ಲಿ ಕಂಡು ಬಾರದ ಕೋವಿಡ್-19 ಸೋಂಕು, ಶನಿವಾರ ಜಿಲ್ಲೆಯ ಇಬ್ಬರಲ್ಲಿ ಪತ್ತೆಯಾಗಿದೆ. ಅದರಲ್ಲಿ ಒಬ್ಬರು, ಅಬಕಾರಿ ಇಲಾಖೆಯ ಸಬ್ ಇನ್ಸಪೆಕ್ಟರ್ ಆಗಿದ್ದು, ಜೂ. 12ರಂದು ಮದುವೆಯಾಗಿದ್ದರು. ಇದೀಗ ಅವರ ಮನೆಯಲ್ಲಿ ಕೋವಿಡ್-19 ಸಂಕಷ್ಟ ಶುರುವಾಗಿದೆ.
ಬಾಗಲಕೋಟೆ ತಾಲೂಕಿನ ಕಲಾದಗಿ ಗ್ರಾಮದ 29 ವರ್ಷದ ಪಿ 8300 (ಬಿಜಿಕೆ 116) ಯುವಕ ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಅಬಕಾರಿ ಸಬ್ ಇನ್ಸಪೆಕ್ಟರ್ ಆಗಿದ್ದಾರೆ. ಇವರು ಜೂ. 12ರಂದು ಬಾಗಲಕೋಟೆಯ ಯುವತಿಯೊಂದಿಗೆ ಮದುವೆಯಾಗಿದ್ದು, ಜೂ. 18ರಂದು ಪುನಃ ಸೇವೆಗೆ ಹಾಜರಾಗಿದ್ದರು. ಕಲಬುರಗಿಯಲ್ಲಿ ಇಲಾಖೆ ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಭಾಗವಹಿಸಲಿದ್ದರು ಎನ್ನಲಾಗಿದೆ.
ಮದುವೆಗೆ ದೀಘ್ರಕಾಲಿಕ ರಜೆ ಪಡೆದು, ಪುನಃ ಬ್ಯಾಡಗಿಯಲ್ಲಿ ಸೇವೆಗೆ ಹಾಜರಾಗಿದ್ದರು. ಆ ವೇಳೆಗೆ ಅವರಿಗೆ ಜ್ವರ, ಕೆಮ್ಮು ನೆಗಡಿ ಕಾಣಿಸಿಕೊಂಡಿತ್ತು. ಹೀಗಾಗಿ ಬ್ಯಾಡಗಿಯಲ್ಲೇ ಇಲಾಖೆಯಿಂದ ಆರೋಗ್ಯ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಅವರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಬಾಗಲಕೋಟೆಯ ಕೋವಿಡ್-19 ಆಸ್ಪತ್ರೆಗೆ ಸೇರಿಸಲಾಗಿದೆ.
ಕಳೆದ ಜೂ. 12ರಂದೇ ಹಸೆಮಣೆ ಏರಿ, ಖುಷಿಯಲ್ಲಿದ್ದ ಅಬಕಾರಿ ಸಬ್ ಇನ್ಸಪೆಕ್ಟರ್ ಮನೆಯಲ್ಲೀಗ ಕೋವಿಡ್-19 ಸಂಕಷ್ಟ ಶುರುವಾಗಿದೆ. ಅವರ ಪ್ರಾಥಮಿಕ ಸಂಪರ್ಕದಲ್ಲಿ 21 ಜನ, ದ್ವಿತೀಯ ಸಂಪರ್ಕದಲ್ಲಿ 32 ಜನ ಸೇರಿ ಒಟ್ಟು 53 ಜನ ಸಂಪರ್ಕಕ್ಕೆ ಬಂದಿದ್ದು, ಅವರ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೇ, ಈ ಮದುವೆಗೆ ಹಲವು ಹಿರಿಯ, ಕಿರಿಯ ಅಧಿಕಾರಿಗಳೂ ಭಾಗವಹಿಸಿದ್ದು, ಅವರಿಗೂ ಆತಂಕ ಶುರುವಾಗಿದೆ.
ಜಿಲ್ಲೆಯಲ್ಲಿ ಶನಿವಾರ ಗುಡೂರಿನ 50 ವರ್ಷದ ಮಹಿಳೆ ಪಿ 8301 (ಬಿಜಿಕೆ 117) ಸೋಂಕು ಖಚಿತಪಟ್ಟಿದ್ದು, ಇವರು, ಗುಡೂರಿನಿಂದ ಧಾರವಾಡ, ಅಲ್ಲಿಂದ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ್ದರು. ಮದುವೆ ಬಳಿಕ ಹುಬ್ಬಳ್ಳಿಯ ಕಿಮ್ಸನಲ್ಲಿ ಗಂಟಲು ದ್ರವ ಪರೀಕ್ಷೆಗೆ ನೀಡಿ, ಕಾರಿನಲ್ಲಿ ಗುಡೂರಿಗೆ ಬಂದಿದ್ದರು. ಈ ವೇಳೆ ಅವರನ್ನು ಕ್ವಾರಂಟೈನ್ ಮಾಡಿದ್ದು, ಶನಿವಾರ ಸೋಂಕು ಖಚಿತಪಟ್ಟಿದೆ. ಈ ಮಹಿಳೆಯ ಸಂಪರ್ಕಕ್ಕೆ ಬಂದ 12 ಜನರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ.
ಬಾಗಲಕೋಟೆಯಲ್ಲಿ ನಡೆದ ಸೋಂಕು ಖಚಿತಪಟ್ಟ ಅಬಕಾರಿ ಪೊಲೀಸ್ ಸಬ್ ಇನ್ಸಪೆಕ್ಟರ್‌ರ ಮದುವೆ ಹಾಗೂ ಗಜೇಂದ್ರಗಡದಲ್ಲಿ ನಡೆದ ಮದುವೆಯಲ್ಲಿ ಗುಡೂರಿನ ಮಹಿಳೆ ಭಾಗವಹಿಸಿದ್ದು, ಈ ಎರಡೂ ಮದುವೆಗೆ ಹೋಗಿದ್ದವರಲ್ಲಿ ಈಗ ಕೋವಿಡ್-19 ಭೀತಿ ಎದುರಾಗಿದೆ.