ಸಿಡ್ನಿ: ಆಸ್ಟ್ರೇಲಿಯಾದ ನೂತನ ಬ್ಯಾಟಿಂಗ್ ಸೆನ್ಸೇಶನ್ ಮಾರ್ನಸ್ ಲಬುಶೇನ್ ತಮ್ಮ ಚೊಚ್ಚಲ ಮತ್ತು ಈ ದಶಕದ ಮೊದಲ ದ್ವಿಶತಕ ಬಾರಿಸಿ ಮೆರೆದಾಡಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮಾರ್ನಸ್ ಲಬುಶೇನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸೀಸ್ ಉತ್ತಮ ಮೊತ್ತ ಕಲೆಹಾಕಿದೆ.
ಸಿಡ್ನಿ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 454 ರನ್ ಗಳಿಸಿದೆ.
ಮೊದಲ ದಿನದ ಅಂತ್ಯಕ್ಕೆ 130 ರನ್ ಗಳಿಸಿ ಅಜೇಯರಾಗಿದ್ದ ಮಾರ್ನಸ್ ಲಬುಶೇನ್ ಇಂದು 215 ರನ್ ಗಳಿಸಿ ಔಟಾದರು. ಸ್ಟೀವ್ ಸ್ಮಿತ್ 63 ರನ್ ಗಳಿಸಿ ಔಟಾದರೆ, ನಾಯಕ ಟಿಮ್ ಪೇಯ್ನ್ 35 ರನ್ ಗಳಿಸಿದರು.
ಕಿವೀಸ್ ಪರ ಕಾಲಿನ್ ಡಿ ಗ್ರಾಂಡ್ ಹೋಮ್ ಮತ್ತು ನೀಲ್ ವಾಗ್ನರ್ ತಲಾ ಮೂರು ವಿಕೆಟ್ ಪಡೆದರು.
2019ರಲ್ಲಿ ಟೆಸ್ಟ್ ಕ್ರಿಕೆಟ್ ನಲ್ಲಿ 1,104 ರನ್ ಗಳಿಸಿದ್ದ ಮಾರ್ನಸ್ ಲಬುಶೇನ್ 2020ರಲ್ಲೂ ತಮ್ಮಅದ್ಭುತ ಫಾರ್ಮ್ ಮುಂದುವರಿಸಿದ್ದಾರೆ.
ಮೊದಲ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ 23 ಓವರ್ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 52 ರನ್ ಗಳಿಸಿದೆ.