ಮುಂಬಯಿ : ಇಂದು ಶುಕ್ರವಾರ ನಿರಂತರ ಮೂರನೇ ದಿನವೂ ಲಾಭದ ಹಾದಿಯಲ್ಲಿನ ತನ್ನ ಓಟವನ್ನು ಮುಂದುವರಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿದವು.
ದಿನಾಂತ್ಯಕ್ಕೆ ಸೆನ್ಸೆಕ್ಸ್ 251.29 ಅಂಕಗಳ ಏರಿಕೆಯೊಂದಿಗೆ 35,511.58 ಅಂಕಗಳ ಮಟ್ಟಕ್ಕೆ ಜಿಗಿಯಿತಾದರೆ ನಿಫ್ಟಿ 77.70 ಅಂಕಗಳ ಏರಿಕೆಯೊಂದಿಗೆ 10,894.70 ಅಂಕಗಳ ಮಟ್ಟವನ್ನು ತಲುಪಿತು.
ಇಂದಿನ ವಹಿವಾಟಿನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್, ಐಟಿಸಿ ಮುಂತಾದ ಬ್ಲೂ ಚಿಪ್ ಕಂಪೆನಿಗಳ ಶೇರುಗಳ ಭರಾಟೆಯ ಖರೀದಿ ನಡೆಯಿತು. ಜಿಎಸ್‌ಟಿ ಮಂಡಳಿಯು ನಿನ್ನೆಯ ತನ್ನ ಸಭೆಯಲ್ಲಿ ತೋರಿದ ಔದಾರ್ಯ ಮುಂಬಯಿ ಶೇರು ಪೇಟೆಗೆ ಇನ್ನಷ್ಟು ಉತ್ತೇಜನ ನೀಡಿತು.
ವಿದೇಶಿ ಹೂಡಿಕೆ ಶೇರು ಮಾರುಕಟ್ಟೆಗೆ ನಿರಂತರವಾಗಿ ಗಮನಾರ್ಹ ಪ್ರಮಾಣದಲ್ಲಿ ಹರಿದು ಬರುತ್ತಿರುವುದು ಕೂಡ ತೇಜಿಗೆ ಕಾರಣವಾಯಿತು. ಜತೆಗೆ ಡಿಸೆಂಬರ್ ತ್ತೈಮಾಸಿಕ ಫಲಿತಾಂಶಗಳು ಉತ್ತಮವಿರುವುದು ಕೂಡ ಮುಖ್ಯ ಕಾರಣವಾಯಿತು.
ಇಂದು 3,030 ಶೇರುಗಳು ವಹಿವಾಟಿಗೆ ಒಳಪಟ್ಟವು; 1,422 ಶೇರುಗಳು ಮುನ್ನಡೆ ಸಾಧಿಸಿದವು; 1,464 ಶೇರುಗಳು ಹಿನ್ನಡೆಗೆ ಗುರಿಯಾದವು; 144 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.