ಮುಂಬಯಿ: ಕಚ್ಛಾ ತೈಲ ಬೆಲೆ ಏರಿಕೆ, ವಿದೇಶಿ ಬಂಡವಾಳದ ಹೊರ ಹರಿವು, ಜಾಗತಿಕ ಷೇರು ಮಾರುಕಟ್ಟೆಯ ವಹಿವಾಟಿನ ಪರಿಣಾಮ ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 866.65 ಅಂಕ ಕುಸಿತದೊಂದಿಗೆ ವಾರಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಇದನ್ನೂ ಓದಿ:ಅಂಕೋಲದಲ್ಲಿ ನಕಲಿ ನೋಟು- ಅಸಲಿ ನೋಟು ದಂಧೆ: ನಾಲ್ವರ ಬಂಧನ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 866.65 ಅಂಕ ಇಳಿಕೆಯೊಂದಿಗೆ 54,835 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ. ಮಧ್ಯಂತರ ವಹಿವಾಟಿನ ವೇಳೆ 1,115.48 ಅಂಕ ಪತನವಾಗಿದ್ದು, 54,586.75 ಅಂಕಗಳಲ್ಲಿ ವಹಿವಾಟು ಮುಂದುವರಿದಿತ್ತು.
ಸೆನ್ಸೆಕ್ಸ್ ಭರ್ಜರಿ ಕುಸಿತದಿಂದಾಗಿ ಹೂಡಿಕೆದಾರರಿಗೆ ಬರೋಬ್ಬರಿ 5 ಲಕ್ಷ ಕೋಟಿಗೂ ಅಧಿಕ ಹಣ ನಷ್ಟವಾದಂತಾಗಿದೆ. ಷೇರುಪೇಟೆಯ ವಾರಾಂತ್ಯದ ವಹಿವಾಟಿನಲ್ಲಿ ಹೂಡಿಕೆದಾರರ ಹಣ ಕೊಚ್ಚಿ ಹೋದಂತಾಗಿದೆ.
ಎನ್ ಎಸ್ ಇ ನಿಫ್ಟಿ ಕೂಡಾ 271.40 ಅಂಕ ಕುಸಿತಗೊಂಡಿದ್ದು, 16,411.25 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿದೆ. ಬಜಾಜ್ ಫೈನಾನ್ಸ್, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್ ಸರ್ವ್, ನೆಸ್ಲೆ, ವಿಪ್ರೋ, ಎಚ್ ಡಿಎಫ್ ಸಿ, ಇನ್ಫೋಸಿಸ್, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಆಲ್ಟ್ರಾ ಟೆಕ್ ಸಿಮೆಂಟ್ ಷೇರುಗಳು ಭಾರೀ ನಷ್ಟ ಕಂಡಿದೆ.
ಮತ್ತೊಂದೆಡೆ ಟೆಕ್ ಮಹೀಂದ್ರ, ಪವರ್ ಗ್ರಿಡ್, ಐಟಿಸಿ, ಎಸ್ ಬಿಐ ಮತ್ತು ಎನ್ ಟಿಪಿಸಿ ಷೇರುಗಳು ಲಾಭಗಳಿಸಿದೆ. ಇನ್ನುಳಿದಂತೆ ಹಾಂಗ್ ಕಾಂಗ್, ಶಾಂಘೈ ಮತ್ತು ಕೊರಿಯಾ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಇಳಿಕೆಯಾಗಿದ್ದು, ಟೋಕಿಯೋ ಷೇರು ಮಾರುಕಟ್ಟೆ ಸೆನ್ಸೆಕ್ಸ್ ಏರಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.