ಮುಂಬಯಿ: ಜಾಗತಿಕ ಷೇರು ಮಾರುಕಟ್ಟೆಯ ವಹಿವಾಟು ಹಾಗೂ ವಿದೇಶಿ ಬಂಡವಾಳದ ಒಳಹರಿವಿನ ಪರಿಣಾಮ ಸೋಮವಾರ (ಸೆಪ್ಟೆಂಬರ್ 06) ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 160ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ದಿನಾಂತ್ಯದ ವಹಿವಾಟನ್ನು ಪೂರ್ಣಗೊಳಿಸಿದೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು: ಯಡಿಯೂರಪ್ಪ
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 166.96 ಅಂಕ ಏರಿಕೆಯೊಂದಿಗೆ 58,296.91 ಅಂಕಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಮಧ್ಯಂತರದ ವಹಿವಾಟಿನ ಸಂದರ್ಭದಲ್ಲಿ ಸೆನ್ಸೆಕ್ಸ್ ಅಂಕ 58,515.85ರ ಗಡಿ ತಲುಪಿತ್ತು.
ಅದೇ ರೀತಿ ಎನ್ ಎಸ್ ಇ ನಿಫ್ಟಿ 54.20 ಅಂಕಗಳ ಏರಿಕೆಯೊಂದಿಗೆ 17,337.80 ಅಂಕಗಳ ಸಾರ್ವಕಾಲಿಕ ದಾಖಲೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಮಧ್ಯಂತರ ವಹಿವಾಟಿನಲ್ಲಿ ನಿಫ್ಟಿ 17,429.55ರ ಗಡಿ ತಲುಪಿತ್ತು.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಎಚ್ ಸಿಎಲ್, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರ, ಬಜಾಜ್ ಆಟೋ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಲಾಭ ಗಳಿಸಿದೆ.
ಇಂಡಸ್ ಇಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್, ಪವರ್ ಗ್ರಿಡ್, ಸನ್ ಫಾರ್ಮಾ ಹಾಗೂ ಏಷ್ಯನ್ ಪೇಂಟ್ಸ್ ಷೇರುಗಳು ನಷ್ಟ ಕಂಡಿದೆ. ಶಾಂಘೈ ಸಿಯೋಲ್, ಟೋಕಿಯೊ, ಹಾಂಗ್ ಕಾಂಗ್ ಷೇರು ಮಾರುಕಟ್ಟೆ ಲಾಭದೊಂದಿಗೆ ದಿನಾಂತ್ಯದ ವಹಿವಾಟನ್ನು ಅಂತ್ಯಗೊಳಿಸಿದೆ.