Advertisement

ಮಾರ್ಕೆಟಿಂಗ್‌ ಯುವಕನೀಗ ಭತ್ತ ಬೆಳೆಯುವ ಕೃಷಿಕ

11:00 PM Oct 28, 2020 | mahesh |

ಬಂಟ್ವಾಳ: ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳದ ಯುವಕನೊಬ್ಬ ಲಾಕ್‌ಡೌನ್‌ ಬಳಿಕ ಇದೀಗ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಹಡೀಲು ಬಿದ್ದಿದ್ದ ಅವರ ಗದ್ದೆಗಳು ಇದೀಗ ಹಚ್ಚ ಹಸುರಿನ ಭತ್ತದ ಪೈರಿನಿಂದ ಕಂಗೊಳಿಸುವಂತೆ ಮಾಡಿದ್ದಾರೆ. ಕೆಲವೇ ತಿಂಗಳುಗಳಲ್ಲಿ ಕೃಷಿ ಆತನ ಆಸಕ್ತಿಯನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಇನ್ನೂ ಹೆಚ್ಚಿನ ಪ್ರಯೋಗಗಳನ್ನು ಮಾಡುವ ಹಂಬಲ ವ್ಯಕ್ತಪಡಿಸುತ್ತಿದ್ದಾರೆ.

Advertisement

ಬಂಟ್ವಾಳ ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಕೊಟ್ಟಾರಿಬೆಟ್ಟು ನಿವಾಸಿ ನಾಗೇಶ್‌ ಶೆಟ್ಟಿ ಅವರೇ ಕೃಷಿಯಲ್ಲಿ ತೊಡಗಿಕೊಂಡಿರುವ ಯುವಕ. ಕಳೆದ 4 ವರ್ಷಗಳಿಂದ ಬೆಂಗಳೂರಿನಲ್ಲಿ ಮಾರ್ಕೆಟಿಂಗ್‌ ಉದ್ಯೋಗದಲ್ಲಿದ್ದ ಅವರೀಗ ಪೂರ್ಣ ಪ್ರಮಾಣದ ಕೃಷಿಕರಾಗಿ ಪರಿವರ್ತನೆಗೊಂಡಿದ್ದು, ಪಾರ್ಟ್‌ಟೈಂ ಆಗಿ ಮಾರ್ಕೆಟಿಂಗ್‌ ಉದ್ಯೋಗವಾದ ಆಯುರ್ವೇದಿಕ್‌, ಇತರ ನಿತ್ಯೋಪಯೋಗಿ ಉತ್ಪನ್ನಗಳನ್ನು ಊರಿನಲ್ಲಿ ಮಾರಾಟ ಮಾಡುತ್ತಿದ್ದಾರೆ.

ನಾಗೇಶ್‌ ಶೆಟ್ಟಿ ಅವರ ಮನೆಯಲ್ಲಿ ತಾಯಿ, ತಮ್ಮ ಹಾಗೂ ತಂಗಿ ಇದ್ದು, ಸುಮಾರು 2 ಎಕರೆ ಜಮೀನು ಹೊಂದಿದ್ದಾರೆ. ಹಿಂದೆ ತಾಯಿ ಕೆಲಸದವರ ಸಹಾಯದಿಂದ 2 ಗದ್ದೆಗಳಲ್ಲಿ ಬೇಸಾಯ ಮಾಡಿದ್ದರೆ ಇದೀಗ ಸ್ವತಃ ನಾಗೇಶ್‌ ಅವರೇ ಈ ಕಾರ್ಯದಲ್ಲಿ ತೊಡಗಿಕೊಂಡಿದ್ದು, ವಿದ್ಯಾಭ್ಯಾಸ ಮಾಡುತ್ತಿರುವ ಅವರ ತಮ್ಮ ಹಾಗೂ ತಂಗಿಯೂ ಸಾಥ್‌ ನೀಡಿದ್ದಾರೆ. ಕೆಲಸದವರು ಮಾಡಿದ ಕೆಲಸವನ್ನು ನೋಡಿಕೊಂಡು ಅನುಭವ ಗಿಟ್ಟಿಸಿಕೊಂಡ ನಾಗೇಶ್‌ ಅವರು ಮುಂದೆ ತಾನೇ ಬೇಸಾಯ ನೇತೃತ್ವ ವಹಿಸಿಕೊಳ್ಳುವ ಛಲ ಬೆಳೆಸಿಕೊಂಡಿದ್ದಾರೆ.

ನೀರಿನ ಕೊರತೆ ಇದೆ
ಪ್ರಸ್ತುತ ಅವರ ಪೂರ್ಣ ಪ್ರಮಾಣದ ಕೃಷಿ ಕಾರ್ಯಕ್ಕೆ ನೀರಿನ ಕೊರತೆ ಇದ್ದು, ಈ ಬಾರಿ ಗುಡ್ಡದ ನೀರನ್ನು ಗದ್ದೆಗೆ ಹರಿಸಿ ಬೇಸಾಯದ ಕಾರ್ಯ ಮಾಡಿದ್ದಾರೆ. ಮುಂದೆ ನೀರಿಗೆ ವ್ಯವಸ್ಥೆ ಮಾಡಿಕೊಂಡು ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಭತ್ತದ ಬೆಳೆ ತೆಗೆಯುವ ಗುರಿಯನ್ನು ಹೊಂದಿದ್ದಾರೆ. ಭತ್ತದ ಜತೆ ಅಡಿಕೆ ಕೃಷಿಯಾನ್ನು ವಿಸ್ತರಿಸುವ ಯೋಜನೆಯನ್ನು ಕೂಡ ಅವರು ಹಾಕಿಕೊಂಡಿದ್ದಾರೆ. ಸದ್ಯ ಅವರ ಮನೆಯಲ್ಲಿ 50 ಅಡಿಕೆ ಗಿಡಗಳು ಮಾತ್ರ ಇವೆ. ಜತೆಗೆ ಕೃಷಿಯಲ್ಲಿ ಹಲವು ಪ್ರಯೋಗಳನ್ನು ನಡೆಸುವ ಆಸಕ್ತಿ ಹೊಂದಿದ್ದು, ಲಭ್ಯ ಭೂಮಿಯಲ್ಲಿ ಉಪಬೆಳೆಗಳನ್ನೂ ಬೆಳೆಯುವ ಗುರಿ ಹೊಂದಿದ್ದಾರೆ.

ಕೃಷಿ ತನಗೆ ಖುಷಿ ನೀಡಿದೆ
ಬೆಂಗಳೂರಿನಿಂದ ಊರಿಗೆ ಬಂದ ಬಳಿಕ ಕೃಷಿ ತನಗೆ ಖುಷಿ ನೀಡಿದೆ. ಮುಂದೆ ಕೃಷಿಯಲ್ಲೇ ಹೊಸ ಹೊಸ ಪ್ರಯೋಗ ಗಳ ಮೂಲಕ ಸಾಧನೆ ಮಾಡಬೇಕೆಂಬ ಆಸಕ್ತಿ ಇದೆ. ಜತೆಗೆ ತನ್ನ ಹಿಂದಿನ ಮಾರ್ಕೆ ಟಿಂಗ್‌ ವೃತ್ತಿಯನ್ನು ಊರಿನಲ್ಲೇ ಮುಂದುವರಿಸುತ್ತೇನೆ. ನೀರಿನ ಕೊರತೆ ಯನ್ನು ನೀಗಿಸಿಕೊಂಡು ಕೃಷಿಯನ್ನು ವಿಸ್ತರಿಸುವ ಯೋಜನೆಯಿದೆ.
ನಾಗೇಶ್‌ ಶೆಟ್ಟಿ ಕೊಟ್ಟಾರಿಬೆಟ್ಟು.

Advertisement

ಕೊರೊನಾ ತಂದಿತ್ತ ಸಂಕಷ್ಟವನ್ನು ಎದುರಿಸಿ ಬದುಕನ್ನು ಕಟ್ಟಿಕೊಳ್ಳುತ್ತಿ ರುವವರ ಕುರಿತು ಈ ಅಂಕಣ. ನಿಮ್ಮ ಅಕ್ಕಪಕ್ಕದಲ್ಲಿ ಇಂಥವರಿದ್ದರೆ ನಮಗೆ ತಿಳಿಸಿ. ನಿಮಗೂ ತಿಳಿದಿದ್ದರೆ ಹೆಸರು, ಊರು, ಸಂಪರ್ಕ ಸಂಖ್ಯೆ ಅವರ ಕಳಿಸಿಕೊಡಿ. ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲೆಂದು ಈ ಮಾಲಿಕೆ . ವಾಟ್ಸ್‌ಆ್ಯಪ್‌ ಸಂಖ್ಯೆ:  7618774529

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next