Advertisement
ಜಿಎಸ್‌ಟಿ ಇಳಿಕೆ, ವರ್ಕಿಂಗ್ ಕ್ಯಾಪಿಟಲ್ ಸಬ್ಸಿಡಿಐಟಿ: ಎಲ್ಲಾ ಐಟಿ ಕಂಪನಿಗಳೂ ಬಹುರಾಷ್ಟ್ರೀಯ ಕಂಪನಿಗಳಂತೆಯೇ ಇರುತ್ತವೆ ಎಂಬ ತಪ್ಪು ಅಭಿಪ್ರಾಯ ನಮ್ಮಲ್ಲಿ ಅನೇಕರಿಗಿದೆ. ಆದರೆ, ಅದಕ್ಕೆ ಹೊರತಾದ ಚಿಕ್ಕ ಪುಟ್ಟ ಸಂಸ್ಥೆಗಳು, ಸ್ಟಾರ್ಟಪ್ ಸಂಸ್ಥೆಗಳು ದೊಡ್ಡ ಸಂಖ್ಯೆಯಲ್ಲಿ ನಮ್ಮ ನಡುವೆ ಇವೆ. ಹೀಗಾಗಿ, ಬಜೆಟ್ ಸಂದರ್ಭದಲ್ಲಿ ಸರ್ಕಾರ ನಿಯಮಾವಳಿಗಳನ್ನು ರೂಪಿಸುವಾಗ ಇಂಥಾ ಸಂಸ್ಥೆಗಳನ್ನೂ ಗಮನದಲ್ಲಿರಿಸಿಕೊಂಡರೆ ಉತ್ತಮ. ಸ್ಟಾರ್ಟಪ್ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಮುಖ್ಯವಾದುದು ತಾಂತ್ರಿಕ ಸಂಪನ್ಮೂಲ. ಕಾಲೇಜಿನಿಂದ ಹೊರಬೀಳುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ, ಬಹುತೇಕರಿಗೆ ಪ್ರ್ಯಾಕ್ಟಿಕಲ್ ನಾಲೆಜ್ ಇರುವುದಿಲ್ಲ. ಹೀಗಾಗಿ, ಅವರಿಗೆ 6 ತಿಂಗಳು ಅಥವಾ 1 ವರ್ಷ ತರಬೇತಿ ನೀಡುತ್ತೇವೆ. ನಾವು ತಯಾರು ಮಾಡಿದ ಆ ಅಭ್ಯರ್ಥಿ, ತರಬೇತಿ ಪಡೆದ ಸ್ವಲ್ಪ ಸಮಯದಲ್ಲೇ ದೊಡ್ಡ ದೊಡ್ಡ ಸಂಸ್ಥೆಗಳಿಗೆ ಸೇರಿಕೊಂಡುಬಿಡುತ್ತಾರೆ. ಅಲ್ಲಿಗೆ ನಮ್ಮ ಪರಿಶ್ರಮ, ಸಂಪನ್ಮೂಲ, ದುಡ್ಡು ಎಲ್ಲವೂ ವ್ಯರ್ಥ. ನಮ್ಮ ಮನೆ ಬೆಳಗಬೇಕಾದ ದೀಪ, ಪಕ್ಕದ ಮನೆಯನ್ನು ಬೆಳಗಿದಂತೆ. ನಮ್ಮ ಜನರಲ್ಲಿ ಯಾವುದೇ ಕೆಲಸದ ಕುರಿತು ಪ್ರಾವೀಣ್ಯತೆ, ವೃತ್ತಿಪರತೆ ಹೆಚ್ಚಿಸಲೆಂದು “ಸ್ಕಿಲ್ ಇಂಡಿಯಾ’ ಯೋಜನೆಯನ್ನು ರೂಪಿಸಿದೆ. ಇಷ್ಟಕ್ಕೂ ನಾವು (ಸ್ಟಾರ್ಟಪ್ ಹಾಗೂ, ಸಣ್ಣಪುಟ್ಟ ಕಂಪನಿಗಳು) ಮಾಡುತ್ತಿರುವುದೂ ಅದನ್ನೇ ಅಲ್ಲವೆ?! ಹೀಗಾಗಿ ನಾವು ನೀಡುವ ತರಬೇತಿಯನ್ನೂ ಗುರುತಿಸಿ ಯಾವುದಾದರೂ ರೀತಿಯಲ್ಲಿ ರಿಯಾಯಿತಿಯನ್ನು ಸರ್ಕಾರ ಘೋಷಿಸಬೇಕು. ಇನ್ನು ಕಂಪನಿಗಳಲ್ಲಿ ಕೆಲ ಸಾಫ್ಟ್ವೇರ್‌ಗಳು ಮತ್ತಿತರ ಸೇವೆಗಳಿಗಾಗಿ ವಿದೇಶಿ ಸಂಸ್ಥೆಗಳನ್ನು ಅವಲಂಬಿಸಬೇಕಾಗುತ್ತದೆ. ಅವರಿಗೆ ಶುಲ್ಕ ನೀಡುವಾಗ 10% ಟಿ.ಡಿ.ಎಸ್‌ಅನ್ನು ಸೇರಿಸಿ ನೀಡಬೇಕಾಗುತ್ತದೆ, ಅಲ್ಲದೆ, ಆ ವಿದೇಶಿ ಸಂಸ್ಥೆ ದೇಶದಲ್ಲಿ ನೋಂದಣಿಯಾಗಿರಬೇಕು, ಪ್ಯಾನ್ ಹೊಂದಿರಬೇಕು. ದೊಡ್ಡ ಕಂಪನಿಗಳಿಗೆ ಇದರಿಂದ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲ. ಆದರೆ, ಇಂಥಾ ನಿಯಮಗಳನ್ನು ಸಡಿಸಿಲಿದರೆ ನಮ್ಮಂಥ ಸಣ್ಣಪುಟ್ಟ ಐಟಿ ಕಂಪನಿಗಳಿಗೆ ಸಹಾಯವಾಗುತ್ತದೆ. ಮತ್ತು ಕಡೆಯದಾಗಿ ವರ್ಕಿಂಗ್ ಕ್ಯಾಪಿಟಲ್ ಮೇಲೆ ಸಾಲ ತೆಗೆದುಕೊಳ್ಳಲು ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಗಳಿಗೆ ಸಬ್ಸಿಡಿ ಕೊಡುತ್ತಾರೆ. ಅದನ್ನು ಸರ್ವೀಸ್ ಬೇಸ್ಡ್ ಕಂಪನಿಗಳಿಗೂ ವಿಸ್ತರಿಸಬೇಕು. ನಮ್ಮ ಸಾಫ್ಟ್ವೇರ್ ಉತ್ಪನ್ನಗಳಿಗೆ 18% ಜಿಎಸ್‌ಟಿ ವಿಧಿಸಿದ್ದಾರೆ, ಇದನ್ನು 12ಕ್ಕೆ ಇಳಿಸಿದರೆ ಚೆನ್ನ.
– ಪಿ.ವಿ. ರೈ, ಎಂ.ಡಿ., ಪಿಕ್ಸೆಲ್ ಸಾಫ್ಟ್ಟೆಕ್
ಗಾರ್ಮೆಂಟ್ಸ್: ಗಾರ್ಮೆಂಟ್ಸ್ ಉದ್ಯಮದಲ್ಲಿ ದುಡಿಯುತ್ತಿರುವ ಪ್ರತಿಯೊಬ್ಬರಿಗೂ ಕನಿಷ್ಠ ವೇತನ ನೀಡಲೇಬೇಕಿದೆ. ಅದು ಸಮಸ್ಯೆಯಲ್ಲ. ಮಾರುಕಟ್ಟೆಯಲ್ಲಿ ಸ್ಪರ್ಧೆ ಹೆಚ್ಚುತ್ತಿದೆ. ಖರೀದಿದಾರರು ಹಿಂದಿನಂತೆ ಹಣ ಬಿಚ್ಚುತ್ತಿಲ್ಲ. ಉದಾಹರಣೆಗೆ ಒಂದು ಗಾರ್ಮೆಂಟ್‌ಗೆ ಮಿಕ್ಕ ಕಂಪನಿಗಳು 100 ರೂ. ಕೊಡುತ್ತಿದ್ದರೆ, ರಿಲಯನ್ಸ್‌ನಂಥ ದೊಡ್ಡ ದೊಡ್ಡ ಕಂಪನಿಗಳು 80 ರೂ. ನೀಡುತ್ತವೆ. ಅವರದು ಬಲ್ಕ್ (ದೊಡ್ಡ ಪ್ರಮಾಣದ) ಆರ್ಡರ್‌ಗಳಾಗಿರುವುದರಿಂದ ಅನಿವಾರ್ಯವಾಗಿ ಅವರು ಹೇಳಿದ ಮೊತ್ತಕ್ಕೇ ಒಪ್ಪಿಕೊಳ್ಳುವಂತಾಗಿದೆ. ಒಂದು ವೇಳೆ ಆ ಆರ್ಡರ್ ಕೈ ತಪ್ಪಿದರೆ ಅವರಿಗೇನೂ ನಷ್ಟವಿಲ್ಲ. ಅವರು ಹೇಳುವ ಮೊತ್ತಕ್ಕೆ ಆರ್ಡರ್ ಪೂರೈಸುವ ಬೇರೊಂದು ಗಾರ್ಮೆಂಟ್ ಸಂಸ್ಥೆಯನ್ನು ಹುಡುಕಿಕೊಳ್ಳುತ್ತಾರೆ. ಆರ್ಡರ್ ಕಳೆದುಕೊಂಡು ದೊಡ್ಡ ಪ್ರಮಾಣದ ನಷ್ಟವನ್ನು ಅನುಭವಿಸುವುದಕ್ಕಿಂತ, ಅವರು ಹೇಳಿದ ಮೊತ್ತಕ್ಕೆ ಡೆಲಿವರಿ ಮಾಡಿ ನಷ್ಟಪ್ರಮಾಣವನ್ನು ಇಳಿಸುವ ಅನಿವಾರ್ಯತೆ ನಮ್ಮದು. ಅದರರ್ಥ, ನಷ್ಟವಂತೂ ಕಟ್ಟಿಟ್ಟ ಬುತ್ತಿ. ಇನ್ನು ಕೆಲವು ಕಂಪನಿಗಳು ಸಕಾಲದಲ್ಲಿ ಪೇಮೆಂಟ್ ಮಾಡುವುದಿಲ್ಲ. ಮೂರು ತಿಂಗಳುಗಳವರೆಗೂ ಪೇಮೆಂಟ್ ಹಿಡಿದಿಟ್ಟುಕೊಳ್ಳುತ್ತಾರೆ. ಇವೆಲ್ಲಾ ನಷ್ಟವನ್ನು ಸರಿದೂಗಿಸಲು ಕಾರ್ಮಿಕರಿಗೆ ಕಡಿಮೆ ವೇತನ ನೀಡುವ ಕೆಲಸವನ್ನಂತೂ ನಾವು ಮಾಡಿಲ್ಲ, ಮಾಡುವುದಿಲ್ಲ. ಸಾಲದ ಹೊರೆಯಂತೂ ಪ್ರತೀ ತಿಂಗಳು ಹೆಚ್ಚುತ್ತಿದೆ. ಉತ್ಪನ್ನಗಳನ್ನು ರಫು ಮಾಡಿದರೆ ಸರ್ಕಾರ ಇಂತಿಷ್ಟು ಮೊತ್ತವನ್ನು ಇನ್ಸೆಂಟಿವ್ ರೂಪದಲ್ಲಿ ಸಂಸ್ಥೆಗೆ ಕೊಡುತ್ತದೆ. ಹಿಂದೆ ಇನ್ಸೆಂಟಿವ್ ಮೊತ್ತ 12% ಇತ್ತು. ಇಂದು ಆ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದನ್ನು ಏರಿಸಿದರೆ ಆ ಹಣವನ್ನು ಮಿಕ್ಕ ಕಡೆ ಬಳಸಿಕೊಳ್ಳಲು ಸಹಾಯವಾಗುತ್ತದೆ. ಜೊತೆಗೆ, ಬ್ಯಾಂಕುಗಳು ಕಡಿಮೆ ಬಡ್ಡಿದರಕ್ಕೆ ಸಾಲ ನೀಡುವುದು ಮತ್ತು ಪೇಮೆಂಟ್ ಸಕಾಲದಲ್ಲಿ ತಲುಪುವಂತೆ ಕೆಲ ನಿಯಮಗಳನ್ನು ರೂಪಿಸುವಂಥಾ ಕಾನೂನನ್ನು ಮಾಡಿದರೆ, ಗಾರ್ಮೆಂಟ್ಸ್ ಉದ್ಯಮ ಪುನಶ್ಚೇತನ ಕಾಣುತ್ತದೆ.
– ಜೆಸ್ಸಿ ಲಾರೆನ್ಸ್, ಲಾರೆನ್ಸ್ ಕ್ಲೋಥಿಂಗ್ ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಲಕಿ ಸ್ಕ್ರಾಪೇಜ್ ಪಾಲಿಸಿ ಮತ್ತು ಜಿ.ಎಸ್.ಟಿ. ರಿಯಾಯಿತಿ
ಆಟೋಮೊಬೈಲ್: ದೇಶದಲ್ಲಿ ಏನಿಲ್ಲವೆಂದರೂ 25,000 ಆಟೋಮೊಬೈಲ್ ಡೀಲರ್‌ಗಳಿದ್ದಾರೆ. ಸುಮಾರು 26 ಲಕ್ಷ ಮಂದಿ ಕಾರ್ಮಿಕರು ಈ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಆ ಮೂಲಕ ಉದ್ಯೋಗ ಸೃಷ್ಟಿಗೂ ಆಟೋಮೊಬೈಲ್ ಕ್ಷೇತ್ರ ಕಾರಣವಾಗಿದೆ. ಇಲ್ಲಿ ಟಿಂಕರ್, ಪೇಂಟರ್, ಫಿಟ್ಟರ್ ವಿಭಾಗಗಳಲ್ಲಿ ದುಡಿಯುವ ತಂತ್ರಜ್ಞರು ಕನಿಷ್ಠ ವಿದ್ಯಾರ್ಹತೆ ಹೊಂದಿರುವವರು ಎಂಬುದು ಎಲ್ಲರಿಗೂ ತಿಳಿದೇ ಇರುತ್ತದೆ. ಈ ವರ್ಗವನ್ನು ಗಮನದಲ್ಲಿರಿಸಿಕೊಂಡಾದರೂ ಸರ್ಕಾರ ಆಟೋಮೊಬೈಲ್ ಉದ್ಯಮದ ಚೇತರಿಕೆಗೆ ಅನುವಾಗುವಂಥ ನಿಯಮಾವಳಿಗಳನ್ನು ರೂಪಿಸಬೇಕು. ಸ್ಕ್ರಾಪೇಜ್ ಪಾಲಿಸಿಯನ್ನು ಜಾರಿಗೆ ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕು. ಅಂದರೆ 10 ವರ್ಷಗಳಿಗಿಂತ ಹಳೆಯ ವಾಹನಗಳ ಪರವಾನಗಿ ರದ್ಧು ಮಾಡಬೇಕು. ಇದರಿಂದಾಗಿ ಪರಿಸರ ಸಂರಕ್ಷಣೆಯೂ ಆಗುತ್ತದೆ. ಜನರೂ ವಾಹನ ಖರೀದಿಗೆ ಮುಂದಾಗುತ್ತಾರೆ. ಆದರೆ ಇಲ್ಲಿ ಇನ್ನೊಂದು ಸಮಸ್ಯೆಯೂ ಇದೆ. ಇಂದು ಬ್ಯಾಂಕೇತರ ಸಂಸ್ಥೆಗಳ ಬಳಿ ದುಡ್ಡಿಲ್ಲ. ಬ್ಯಾಂಕುಗಳು ಕಡಿಮೆ ಬಡ್ಡಿದರದಲ್ಲಿ ವಾಹನ ಸಾಲವನ್ನು ನೀಡಿದರೆ, ವಾಹನ ಕೊಳ್ಳಲು ಮೀನ ಮೇಷ ಎಣಿಸುತ್ತಿರುವ ಜನಸಾಮಾನ್ಯರು ವಾಹನ ಖರೀದಿಗೆ ಮುಂದಾಗುತ್ತಾರೆ. ಅಲ್ಲದೆ, ಜಿ.ಎಸ್.ಟಿ.ಯಲ್ಲೂ ರಿಯಾಯಿತಿಯನ್ನು ನೀಡಬೇಕಾಗಿದೆ. ಈಗಂತೂ ಪ್ರತಿ ತಿಂಗಳು ನೋಂದಣಿಯಾಗುತ್ತಿದ್ದ ಹೊಸ ವಾಹನಗಳ ಸಂಖ್ಯೆ ಶೇ.30ರಷ್ಟು ಕಡಿಮೆಯಾಗಿದೆ ಎನ್ನಬಹುದು. ಉದ್ಯೋಗ ಕಡಿತದಂಥ ಪರಿಸ್ಥಿತಿಯ ಬರಬಾರದೆಂದರೆ ಆದಷ್ಟು ಬೇಗನೆ ಸರ್ಕಾರ ಪ್ರೋತ್ಸಾಹಕರ ನಡೆಯನ್ನು ಕೈಗೊಳ್ಳಲೇಬೇಕಾಗಿದೆ. ಆಟೋಮೊಬೈಲ್ ಕ್ಷೇತ್ರ ಚೇತರಿಕೆ ಕಾಣುವುದರಿಂದ ರಬ್ಬರ್ ಉದ್ಯಮ, ಸ್ಟೀಲ್ ಉದ್ಯಮಗಳಿಗೂ ಪ್ರಯೋಜನವಾಗಲಿದೆ.
– ಶ್ಯಾಮ್ ಭಟ್, ಮಾಲೀಕರು, ಅದ್ವೈತ್ ಹ್ಯುಂಡೈ ಮತ್ತು ಅದ್ವೈತ್ ಸುಝುಕಿ
Related Articles
ಹೋಟೆಲ್ ಮತ್ತು ಹಾಸ್ಪಿಟಾಲಿಟಿ: ದೇಶದ ಒಟ್ಟಾರೆ ಜಿಡಿಪಿಯಲ್ಲಿ ಹೋಟೆಲ್ ಉದ್ಯಮದ ಕಾಣಿಕೆ ಶೇ. 9ರಷ್ಟಿದೆ. ಎಲ್ಲಕ್ಕಿಂತ ಮುಖ್ಯವಾದ ಸಂಗತಿ ಅಂತಂದರೆ ಅಶಿಕ್ಷಿತ ವರ್ಗಕ್ಕೆ ಉದ್ಯೋಗ ಕಲ್ಪಿಸುವಲ್ಲಿ ಹೋಟೆಲ್ ಮತ್ತು ಹಾಸ್ಪಿಟಾಲಿಟಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿದೆ. ಹೀಗಿರುವಾಗ ನಾವು ಸರ್ಕಾರದಿಂದ ನೆರವನ್ನು ನಿರೀಕ್ಷಿಸುತ್ತಿರುವುದು ಸಹಜವೇ ಆಗಿದೆ. ಹಾಗೆಂದು ನಾವು ಸಬ್ಸಿಡಿಯನ್ನೇನೂ ಕೇಳುತ್ತಿಲ್ಲ. ಈಗಿರುವ ವ್ಯವಸ್ಥೆಯಲ್ಲಿಯೇ ಕೆಲ ನಿಯಮಾವಳಿಗಳನ್ನು ಸಡಿಲಗೊಳಿಸಿದರೆ ನಮ್ಮ ಅದೆಷ್ಟೋ ತೊಂದರೆಗಳು ನಿವಾರಣೆಯಾಗುತ್ತವೆ. ಅಂದರೆ ease of business. ಅಂದರೆ ಅಡೆತಡೆಗಳಿಲ್ಲದೆ, ನೂರೆಂಟು ಕಾನೂನು ಕಟ್ಟಳೆಗಳಿಲ್ಲದೆ ವ್ಯವಹಾರ ನಡೆಸುವಂಥ ವಾತಾವರಣ ನಿರ್ಮಾಣವಾಗಬೇಕು. ಹೋಟೆಲ್‌ನವರು ಟ್ರೇಡ್ ಲೈಸೆನ್ಸ್, ಪೊಲ್ಯೂಷನ್ ಕಂಟ್ರೋಲ್ ಲೈಸೆನ್ಸ್, ಇನ್ನೂ ಅನೇಕ ಲೈಸೆನ್ಸ್‌ಗಳನ್ನು ವಾರ್ಷಿಕವಾಗಿ ನವೀಕರಿಸುತ್ತಲೇ ಇರಬೇಕಾಗುತ್ತದೆ. ಅದರ ಬದಲಾಗಿ ಹೊಸ ಹೋಟೆಲ್‌ಗಳಿಗೆ ಮಾತ್ರ 3- 5 ವರ್ಷಗಳ ಕಾಲ ಎಲ್ಲಾ ನವೀಕರಣಗಳನ್ನು ಒಂದೇ ಸಲ, ಒಂದೇ ಸಮಯಕ್ಕೆ ಕಟ್ಟುವಂಥ ಒನ್‌ಟೈಮ್ ಪೇಮೆಂಟ್ ಥರದ ವ್ಯವಸ್ಥೆ ಜಾರಿಗೆ ಬಂದರೆ ಉತ್ತಮ.
ಇನ್ನೊಂದು ವಿಷಯ ಇ.ಪಿ.ಎಫ್.ನದು (ಎಂಪ್ಲಾಯೀಸ್ ಪ್ರಾವಿಡೆಂಟ್ ಫಂಡ್). ನಮ್ಮ ಉದ್ಯಮ, ಉದ್ಯೋಗ ಸೃಷ್ಟಿಗೆ ಕಾರಣವಾಗಿರುವುದರಿಂದ ಇಪಿಎಫ್ ಸವಲತ್ತನ್ನು ನೀಡಲು ಕೇಂದ್ರ ನಿರ್ದೇಶನ ನೀಡಬೇಕು. ನಮ್ಮ ಇನ್ನೊಂದು ಬೇಡಿಕೆ ಮೆಟ್ರೋ ಸಿಟಿಗಳಲ್ಲಿ ನೈಟ್‌ಲೈಫ್ಗೆ ಅವಕಾಶ ನೀಡಬೇಕು. ಅಂದರೆ ಹೋಟೆಲ್‌ಗಳು 24 ಗಂಟೆಗಳ ಕಾಲವೂ ತೆರೆಯಲು ಅನುಮತಿ ನೀಡಬೇಕು. ರಾತ್ರಿಯಿಡೀ ತೆರೆದಿರುವುದರಿಂದ ನಗರದ ಸುರಕ್ಷತೆ ಹೆಚ್ಚುತ್ತದೆ. ರಸ್ತೆಗಳಲ್ಲಿ ಜನರು ನಿರ್ಭೀತಿಯಿಂದ ಸಂಚರಿಸುತ್ತಾರೆ. ಇದರಿಂದ ನಗರಕ್ಕೆ ಬರುವ ಪ್ರವಾಸಿಗರು ಯಾವ ಹೊತ್ತಿನಲ್ಲಿ ಬಂದರೂ ಆಹಾರಕ್ಕಾಗಿ ಪರದಾಡಬೇಕಿಲ್ಲ. ಪ್ರವಾಸೋದ್ಯಮಕ್ಕೂ ಒತ್ತು ಕೊಟ್ಟಂತಾಗುತ್ತದೆ. ನಾವು ರೈತರಿಂದ ತರಕಾರಿಗಳು, ಹಣ್ಣುಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಖರೀದಿಸುವವರು, ಮುಖ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನೂ ನಾವು ಖರೀದಿಸುತ್ತೇವೆ. ನಾನೇನು ಹೇಳಲು ಹೊರಟಿದ್ದೇನೆಂದರೆ, ಹೋಟೆಲ್ ಉದ್ಯಮವನ್ನು ಬೆಳೆಸುವುದರಿಂದ ಅನೇಕ ಮಂದಿಗೆ ಲಾಭವಿದೆ.
– ಪಿ.ಸಿ ರಾವ್, ಅಧ್ಯಕ್ಷರು, ಬೆಂಗಳೂರು ಹೋಟೆಲ್ ಮಾಲೀಕರ ಸಂಘ
Advertisement
ಜಿ.ಎಸ್.ಟಿ.ಯಿಂದ ಒಳ್ಳೆಯದೇ ಆಗಿದೆಎಲೆಕ್ಟ್ರಾನಿಕ್ಸ್: ಎಂ.ಎಸ್.ಎಂ.ಇ (ಮೈಕ್ರೋ, ಸ್ಮಾಲ್, ಮೀಡಿಯಂ ಎಂಟರ್‌ಪ್ರೈಸಸ್) ವರ್ಗಕ್ಕೆ ಸೇರುವ ನಮ್ಮ ಸಂಸ್ಥೆಯ ದೇಶದ ಪ್ರತಿಷ್ಠಿತ ಸಂಸ್ಥೆ ಡಿ.ಆರ್.ಡಿ.ಓ. ಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸರಬರಾಜು ಮಾಡುತ್ತದೆ. ಅಲ್ಲದೆ ಜರ್ಮನಿ, ಜಪಾನ್ ಮತ್ತು ಅಮೆರಿಕದ ಖಾಸಗಿ ಸಂಸ್ಥೆಗಳಿಗೂ ನಮ್ಮ ಉಪಕರಣಗಳು ರಫ್ತಾಗುತ್ತವೆ. ನಿಜವಾಗಿ ಹೇಳಬೇಕೆಂದರೆ ನನಗೆ ಜಿ.ಎಸ್.ಟಿ.ಯ ಮೇಲೆ ಯಾವುದೇ ದೂರುಗಳಿಲ್ಲ. ಮ್ಯಾನುಫ್ಯಾಕ್ಚರಿಂಗ್ ಕಂಪನಿಗಳಿಗೆ ಅದರಿಂದ ಲಾಭವೇ ಆಗಿದೆ. ಅಂದರೆ ಯಾರು ಸ್ವಂತ ತಂತ್ರಜ್ಞಾನ ಸೃಷ್ಟಿಯಲ್ಲಿ ತೊಡಗಿದ್ದಾರೋ ಅವರಿಗೆ ಪ್ರೋತ್ಸಾಹ ಸಿಕ್ಕಿದೆ. ಎಂ.ಎಸ್.ಎಂ.ಇ. ವರ್ಗಕ್ಕೆ ಸೇರಿದ ಉದ್ಯಮಗಳ ಒಂದು ಬಹುಮುಖ್ಯ ತೊಡಕೆಂದರೆ ಪೇಮೆಂಟ್‌ನದು. ಯಾವುದೇ ಪೇಮೆಂಟ್‌ಅನ್ನು 45 ದಿನಗಳ ಒಳಗೆ ನೀಡಬೇಕು ಎಂಬ ನಿಯಮವೇನೋ ಇದೆ. ಆದರೆ ಅದನ್ನು ಬಹುತೇಕರು ಅನುಸರಿಸುತ್ತಿಲ್ಲ. ಏಳೆಂಟು ತಿಂಗಳು, ಅಷ್ಟೇ ಯಾಕೆ ಒಂದು ವರ್ಷಗಳ ಕಾಲವೂ ಪೇಮೆಂಟ್ ವಿಳಂಬವಾಗುವುದುಂಟು. ನಮ್ಮ ಸಂಸ್ಥೆಯ ಶೇ. 70ರಷ್ಟು ಉತ್ಪನ್ನಗಳು ದೇಶದ ರಕ್ಷಣಾ ಇಲಾಖೆಗೇ ಸರಬರಾಜಾಗುತ್ತದೆ. ಅಲ್ಲೂ ಪೇಮೆಂಟ್ ವಿಳಂಬವಾಗುತ್ತಿದೆ. ಪೇಮೆಂಟ್ ವಿಳಂಬ ನಾನಾ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಬ್ಯಾಂಕುಗಳಲ್ಲಿ ಕ್ರೆಡಿಟ್ ಅನುಪಾತ ಮತ್ತು ಕರೆಂಟ್ ಅನುಪಾತ ನೋಡಿ ಸಂಸ್ಥೆಗಳಿಗೆ ಸಾಲ ಮಂಜೂರು ಮಾಡುತ್ತಾರೆ. ಆದರೆ, ಪೇಮೆಂಟ್ ವಿಳಂಬದಂಥ ಸಮಸ್ಯೆಗಳಿಂದ ಸಂಸ್ಥೆಗಳ ಕ್ರೆಡಿಟ್ ಅನುಪಾತ ಮತ್ತು ಕರೆಂಟ್ ಅನುಪಾತದಲ್ಲಿ ಇಳಿಕೆ ಕಂಡುಬರುತ್ತದೆ. ಅದನ್ನು ನೆಪವಾಗಿಸಿ ಬ್ಯಾಂಕುಗಳು ಲೋನ್ ನಿರಾಕರಿಸುತ್ತವೆ. ಇದು ನಮ್ಮ ಸಂಸ್ಥೆಯೊಂದರದ್ದೇ ಸಮಸ್ಯೆಯಲ್ಲ. ಹೀಗಾಗಿ ಪೇಮೆಂಟ್ ಅನ್ನು ಸಮಯಕ್ಕೆ ಸರಿಯಾಗಿ ನೀಡುವ ಹಾಗೆ ನಿಯಮಗಳನ್ನು ಜಾರಿಗೆ ತಂದರೆ ಉತ್ತಮ. ಹಾಗೂ ಬ್ಯಾಂಕುಗಳು ಕ್ರೆಡಿಟ್ ಅನುಪಾತ ಮತ್ತು ಕರೆಂಟ್ ಅನುಪಾತವನ್ನು ಗಣನೆಗೆ ತೆಗೆದುಕೊಳ್ಳಬಾರದು. ಐಟಿ ಸ್ಲಾಬ್‌ನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಏರಿಸಿದರೆ ಒಳ್ಳೆಯದು. ಈ ಬೇಡಿಕೆಗಳು ಜಾರಿಗೆ ಬಂದರೆ ಮಾತ್ರ ಕಾರ್ಖಾನೆಗಳು ಬೆಳೆಯುವುದಕ್ಕೆ ಸಹಾಯವಾಗುತ್ತದೆ.
– ಜೇಕಬ್ ಕ್ರಾಸ್ತಾ, ಸಿ.ಎಂ. ಎನ್ವಿರಾನ್ ಪ್ರೈ. ಲಿ. ನಿರೂಪಣೆ: ಹರ್ಷವರ್ಧನ್ ಸುಳ್ಯ