ಮುಂಬಯಿ : ದೇಶದ ಆರ್ಥಿಕಾಭಿವೃದ್ಧಿಯ ಸ್ಥೂಲ ಚಿತ್ರಣ ನೀಡುವ ಅಂಕಿ ಅಂಶಗಳು ಇಂದು ಬಿಡುಗಡೆಗೊಳ್ಳಲಿದ್ದು ಅವು ಆಶಾದಾಯಕವಾಗಿರುವವೆಂಬ ವಿಶ್ವಾಸದಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 156 ಅಂಕಗಳ ಜಿಗಿತವನ್ನು ದಾಖಲಿಸಿ 32,000 ಅಂಕಗಳ ಮನೋ ಪ್ರಾಬಲ್ಯದ ಮಟ್ಟವನ್ನು ಪುನರ್ ಸಂಪಾದಿಸಿತು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 134.34 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 32,016.50 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 42 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 10,048.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ನಿನ್ನೆ ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 194.64 ಅಂಕಗಳ ಏರಿಕೆಯನ್ನೂ ನಿಫ್ಟಿ 71.25 ಅಂಕಗಳ ಏರಿಕೆಯನ್ನು ದಾಖಲಿಸಿ ವಾರಕ್ಕೆ ಶುಭಾರಂಭ ನೀಡಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ನಿಫ್ಟಿ 50 ವಿಭಾಗದಲ್ಲಿ 37 ಶೇರುಗಳು ಮುನ್ನಡೆ ಸಾಧಿಸಿದರೆ 14 ಶೇರುಗಳು ಹಿನ್ನಡೆಗೆ ಗುರಿಯಾದವು.
ಟಾಟಾ ಸ್ಟೀಲ್, ಇನ್‌ಫೋಸಿಸ್, ಎಸ್ ಬ್ಯಾಂಕ್, ಮಾರುತಿ ಸುಜುಕಿ, ಇಂಡಸ್‌ಇಂಡ್ ಬ್ಯಾಂಕ್ ಶೇರುಗಳು ಇಂದು ಹೆಚ್ಚು ಕ್ರಿಯಾಶೀಲವಾಗಿದ್ದರು.
ನಿನ್ನೆಯಂತೆ ಇಂದು ಮಂಗಳವಾರ ಕೂಡ ಬ್ಯಾಂಕ್ ನಿಫ್ಟಿ 100.25 ಅಂಕಗಳ ಭರ್ಜರಿ ನೆಗೆತವನ್ನು ದಾಖಲಿಸಿ ಗಮನ ಸೆಳೆಯಿತು.