ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಗೆಲುವಿನ ಓಟ ನಿರಂತರ ಐದನೇ ದಿನವೂ ಇಂದು ಬುಧವಾರ ಸಾಗಿತು.
ಅಮೆರಿಕ ಹಾಗೂ ಏಶ್ಯನ್ ಶೇರು ಪೇಟೆಗಳಲ್ಲಿ ತೋರಿ ಬಂದಿರುವ ತೇಜಿ ಮತ್ತು ಧನಾತ್ಮಕ ಸ್ಥಿತಿಗತಿಗಳನ್ನು ಅನುಸರಿಸಿದ ಮುಂಬಯಿ ಶೇರು ಪೇಟೆಗೆ ಇಂದು ಡಾಲರ್ ಎದುರು ರೂಪಾಯಿ ಬಲವರ್ಧನೆ ಕೂಡ ಹೊಸ ಉತ್ಸಾಹ ತುಂಬಿತು.
ದಿನಾಂತ್ಯಕ್ಕೆ ಸೆನ್ಸೆಕ್ಸ್ 83.20 ಅಂಕಗಳ ಏರಿಕೆಯನ್ನು ದಾಖಲಿಸಿ, ಎರಡು ವಾರಗಳ ದಿನಾಂತ್ಯದ ಗರಿಷ್ಠ ಮಟ್ಟವಾಗಿ, 33,561.55 ಅಂಕಗಳ ಮಟ್ಟವನ್ನು ತಲುಪಿತು. ಇನ್‌ಫ್ರಾಸ್ಟ್ರಕ್ಚರ್ (ಮೂಲ ಸೌಕರ್ಯ), ಪಿಎಸ್‌ಯು ಮತ್ತು ಆಟೋ ರಂಗದ ಶೇರುಗಳು ಸೆನ್ಸೆಕ್ಸ್ ಓಟಕ್ಕೆ ಶಕ್ತಿ ತುಂಬಿದವು.
ಸೆನ್ಸೆಕ್ಸ್‌ನಂತೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 15.40 ಅಂಕಗಳ ಏರಿಕೆಯನ್ನು ದಾಖಲಿಸಿ 10,368.70 ಅಂಕಗಳ ಮಟ್ಟವನ್ನು ತಲುಪಿತು.
ಸೆನ್ಸೆಕ್ಸ್ ಕಳೆದ ನಾಲ್ಕು ದಿನಗಳಲ್ಲಿ ಒಟ್ಟು 717.91 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ.