Advertisement

ಮಾರುಕಟ್ಟೆ ಕಾಮಗಾರಿಗಿಂದು ಚಾಲನೆ

08:24 PM Jul 12, 2021 | Girisha |

ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಸುಸಜ್ಜಿತ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಲಿದ್ದು, ಪಟ್ಟಣದ ವ್ಯಾಪಾರಿಗಳ ಬಹು ವರ್ಷಗಳ ಕನಸು ನನಸಾಗುವ ಕಾಲ ಕೂಡಿ ಬಂದಿದೆ. ಜು.12ರಂದು 30 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ದೊರೆಯಲಿದೆ.

Advertisement

ಇಂಡಿ ಪಟ್ಟಣದ ವ್ಯಾಪಾರಿಗಳು ಹಾಗೂ ನಾಗರಿಕರ ಬಹು ವರ್ಷಗಳ ಬೇಡಿಕೆಯಾಗಿದ್ದ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಒತ್ತಾಸೆ ಕಾರಣದಿಂದ ಯೋಜನೆ ಸಿದ್ಧವಾಗಿ ವರ್ಷಗಳೇ ಕಳೆದಿವೆ. ಕಳೆದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವದಲ್ಲಿದ್ದಾಗಲೇ ಈ ಯೋಜನೆಗೆ ಚಾಲನೆ ನೀಡಬೇಕೆಂಬ ಉದ್ದೇಶ ಹೊಂದಲಾಗಿತ್ತು.

ಯೋಜನೆ ಅನುಷ್ಠಾನದ ಹಂತದಲ್ಲೇ ಚುನಾವಣೆ ಎದುರಾಗಿದ್ದವು. ನಂತರ ಬಂದ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯ ಸಮ್ಮಿಶ್ರ ಸರ್ಕಾರದಲ್ಲಿ ಕಾಮಗಾರಿಗೆ ಚಾಲನೆ ನೀಡಬೇಕೆಂಬ ಚಿಂತನೆ ಇದ್ದರೂ ಕೈಗೂಡಲಿಲ್ಲ. ಕಳೆದ ವರ್ಷ ಕೋವಿಡ್‌ ಕಾರಣದಿಂದ ಯೋಜನೆಗೆ ಚಾಲನೆ ನೀಡಲು ಸಾಧ್ಯವಾಗಿರಲಿಲ್ಲ. ಇಂಡಿ ಪಟ್ಟಣದಲ್ಲಿ ಅತ್ಯಾಧುನಿಕ ಹಾಗೂ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ 30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ಮೊದಲ ಹಂತದ ಕಾಮಗಾರಿಗೆ 10 ಕೋಟಿ ರೂ. ಹಣದಲ್ಲಿ ಕಾಮಗಾರಿಗೆ ಚಾಲನೆ ಸಿಗಲಿದೆ. ಸದರಿ ಯೋಜನೆ ನಿರ್ಮಾಣಕ್ಕೆ ಕೆಯುಐಡಿಎಫ್‌ಸಿ 21 ಕೋಟಿ ರೂ. ಸಾಲ ನೀಡಲಿದ್ದು, ಇಂಡಿ ಪುರಸಭೆ 9 ಕೋಟಿ ರೂ. ವಂತಿಗೆ ನೀಡಲಿದೆ.

ಮೊದಲ ಹಂತದಲ್ಲಿ ಕೆಯುಐಡಿಎಫ್‌ಸಿ 7 ಕೋಟಿ ರೂ. ಹಾಗೂ ಇಂಡಿ ಪುರಸಭೆ 3 ಕೋಟಿ ರೂ. ಅನುದಾನ ಸೇರಿ 10 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ. 1 ಎಕರೆ 6 ಗುಂಟೆ ನಿವೇಶನದಲ್ಲಿ ತಲೆ ಎತ್ತಲಿರುವ ಮೆಗಾ ಮಾರುಕಟ್ಟೆ ವಾಣಿಜ್ಯ ಸಂಕೀರ್ಣದಲ್ಲಿ 245 ಮಳಿಗೆ ನಿರ್ಮಾಣವಾಗಲಿದೆ. ಗ್ರೌಂಡ್‌ ಫ್ಲೋರ್‌ ನಲ್ಲಿ 98 ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದ್ದು, ನೆಲ ಮಾಳಿಗೆಯಲ್ಲಿ ಮಹಡಿಯಲ್ಲಿ 104 ಮಳಿಗೆಗಳ ನಿರ್ಮಾಣವಾಗಲಿದೆ.

ಮೊದಲ 112 ಹಾಗೂ ಎರಡನೇ ಮಹಡಿಯಲ್ಲಿ 29 ತಲಾ ಮಳಿಗೆ ನಿರ್ಮಾಣವಾಗಲಿವೆ. ಈ ಮೆಗಾ ಮಾರುಕಟ್ಟೆ ನಿರ್ಮಾಣದಿಂದ ವ್ಯಾಪಾರಿಗಳಿಗೆ ಮಾತ್ರವಲ್ಲ ಗ್ರಾಹಕರಿಗೆ ಅದರಲ್ಲೂ ಗ್ರಾಮೀಣ ಪರಿಸರದಿಂದ ಬರುವ ಜನರಿಗೆ ಒಂದೇ ಸೂರಿನಲ್ಲಿ ತಮ್ಮ ಅಗತ್ಯದ ವಸ್ತುಗಳು ಸಿಗುವ ಕಾರಣ ಸಮಯ, ಶ್ರಮ ಎಲ್ಲವೂ ಅನುಕೂಲವಾಗಲಿದೆ. ಇದರೊಂದಿಗೆ ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿರುವ ಕರ್ನಾಟಕ ರಾಜ್ಯದ ಹಾಗೂ ವಿಜಯಪುರ ಜಿಲ್ಲೆಯ ಗಡಿಯಲ್ಲಿರುವ ಕೊನೆಯ ಪಟ್ಟಣದಲ್ಲಿ ಮಹಾನಗರಗಳಂತೆ ಒಂದೇ ಸೂರಿನಲ್ಲಿ ಎಲ್ಲವೂ ದೊರೆಯುವ ವಿಶಿಷ್ಟ ವಾಣಿಜ್ಯ ವಹಿವಾಟಿನ ಮೆಗಾ ಮಾರುಕಟ್ಟೆ ತಲೆ ಎತ್ತಲಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next