ಮುಂಬಯಿ : ದಿನದ ಉದ್ದಕ್ಕೂ ಭಾರೀ ಏರಿಳಿತಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 26.87 ಅಂಕಗಳ ನಷ್ಟದೊಂದಿಗೆ 31,599.76 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೇವಲ 1 ಅಂಕ ನಷ್ಟದೊಂದಿಗೆ ದಿನದ ವಹಿವಾಟನ್ನು 9,871.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,524 ಶೇರುಗಳು ಮುನ್ನಡೆ ಸಾಧಿಸಿದವು; 997 ಶೇರುಗಳು ಹಿನ್ನಡೆಗೆ ಗುರಿಯಾದವು; 166 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಒಎನ್‌ಜಿಸಿ, ಟಾಟಾ ಸ್ಟೀಲ್, ವೇದಾಂತ ಶೇರುಗಳು ಮುನ್ನಡೆಯ ಮುಂಚೂಣಿಯಲ್ಲಿದ್ದವು; ವ್ಯತಿರಿಕ್ತವಾಗಿ ಎಚ್‌ಯುಎಲ್, ಡಾ. ರೆಡ್ಡಿ, ಭಾರ್ತಿ ಇನ್‌ಫ್ರಾಟೆಲ್, ಬಿಪಿಸಿಎಲ್ ಶೇರುಗಳು ಹಿನ್ನಡೆ ಕಂಡವು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು 65.44 ಮಟ್ಟಕ್ಕೆ ಇಳಿಯುವುದರೊಂದಿಗೆ ಆರು ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದು ಶೇರು ಮಾರುಕಟ್ಟೆಯ ಕಳವಳಕ್ಕೆ ಕಾರಣವಾಯಿತು.
ವಿದೇಶೀ ಹೂಡಿಕೆದಾರರು ಭಾರತ ಮತ್ತು ಸಾಗರೋತ್ತರ ಶೇರು ಮಾರುಕಟ್ಟೆಗಳಲ್ಲಿ ಪ್ರತಿಕೂಲ ಪರಿಸ್ಥಿತಿ ನೆಲೆಗೊಂಡಿರುವ ಕಾರಣಕ್ಕೆ ತಮ್ಮ ಹೂಡಿಕೆಯನ್ನು ಹಿಂದೆಗೆದುಕೊಳ್ಳುತ್ತಿರುವುದೇ ಮುಂಬಯಿ ಶೇರು ಮಾರುಕಟ್ಟೆಯ ಕುಸಿತಕ್ಕೆ ಕಾರಣವೆಂದು ತಿಳಿಯಲಾಗಿದೆ.