ಬಜಪೆ: ಮಾರುಕಟ್ಟೆಯಲ್ಲಿ ಈ ತಿಂಗಳು ಮೊಟ್ಟೆಯದ್ದೇ ಆಟ. ಒಮ್ಮೆ ಏರಿಕೆ, ಇನ್ನೊಮ್ಮೆ ಇಳಿಕೆ ಮತ್ತೆ ಏರಿಕೆಯತ್ತ ಸಾಗಿದೆ. ಗ್ರಾಹಕರು ಮಾತ್ರ ಈ ಏರಿಕೆಯಿಂದ ಗಡಿಬಿಡಿಗೊಂಡಿದ್ದಾರೆ.
ಏರಿಕೆ, ಇಳಿಕೆಯನ್ನು ಕಂಡ ಗ್ರಾಹಕರು ಏರಿಕೆಯ ಬಳಿಕ ಇಳಿಕೆ ಯಾಗಬಹುದು ಎಂದು ನಂಬಿ ಮೊಟ್ಟೆ ಖರೀದಿಯಲ್ಲಿ ಕಡಿತ ಮಾಡಿ ಮತ್ತೆ ಮರು ದಿನ ಏರಿಕೆ ಕಂಡು ಬೆರಗಾಗಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆ ದರ 6.60ರೂ.ಗೆ ಏರಿದೆ.
ಭಾರೀ ಸೆಕೆ ಹಾಗೂ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳು ರಜೆಯಲ್ಲಿ ತೆರಳಿದ್ದ ಕಾರಣ ಮೊಟ್ಟೆಯ ಬೇಡಿಕೆ ಹಾಗೂ ಖರೀದಿಯಲ್ಲಿ ಕೊಂಚ ಇಳಿಕೆ ಇತ್ತು. ಮೇ 2ರಂದು ಮೊಟ್ಟೆ ದರ ರಖಂ 4.80-4.90 ರೂ. ಇದ್ದರೆ ಚಿಲ್ಲರೆಯಾಗಿ 5.50 ರೂ.ಗೆ ಮಾರಾಟವಾಗುತ್ತಿತ್ತು. ಬಳಿಕ ಮೇ 3ರಂದು ಒಮ್ಮೆಲೇ 5.30ಕ್ಕೆ ರಖಂ ದರ ಏರಿಕೆ ಕಂಡಿತ್ತು. ಚಿಲ್ಲರೆ ದರ 6ಕ್ಕೆ ಏರಿಕೆಯಾಗಿತ್ತು. ಮತ್ತೆ ಏರಿಕೆ ಕಂಡು ಮೇ 8ರಂದು ರಖಂ ದರವೇ 6 ರೂ.ಗೆ ತಲುಪಿತು. ಮೇ 9ರಂದು ಮೊಟ್ಟೆ ಒಂದಕ್ಕೆ 6.10 ಹಾಗೂ ಶುಕ್ರವಾರ 6.20ಕ್ಕೆ ರಖಂ ದರ ಏರಿಕೆಯಾಗಿದೆ.ರಖಂ ವ್ಯಾಪಾರಿಗಳ ಪ್ರಕಾರ ಮೊಟ್ಟೆ ದರ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ.
ಗರ್ಭಿಣಿ ಮತ್ತು ಬಾಣಂತಿ ಯರಿಗೆ ತಿಂಗಳಿಗೆ 25 ಮೊಟ್ಟೆ, ಅಂಗನವಾಡಿ ಕೇಂದ್ರ ಮಕ್ಕಳಿಗೆ ರಜೆಯಾದರೂ ವಾರಕ್ಕೆ 2 ಮೊಟ್ಟೆ ನೀಡಲಾಗುತ್ತದೆ. ಪಿಯುಸಿ ಫಲಿತಾಂಶ, ಎಸೆಸೆಲ್ಸಿ ಫಲಿತಾಂಶ ಬಂದು ವಿದ್ಯಾರ್ಥಿ ನಿಲಯ ಕೆಲವೆಡೆ ತೆರೆಯಲಾರಂಭಿಸಿವೆ. ರಜೆಯಲ್ಲಿ ತೆರಳಿದ ವಿದ್ಯಾರ್ಥಿಗಳು ವಾಪಸಾಗುತ್ತಿದ್ದಾರೆ. ಕೆಲವೆಡೆ ಮಳೆ ಆರಂಭವಾಗಿದ್ದು ಸ್ವಲ್ಪ ಸೆಕೆ ಕಡಿಮೆಯಾದ ಕಾರಣ ಆಮ್ಲೆàಟ್‌ಗೆ ಬೇಡಿಕೆ ಮತ್ತೆ ಏರಿಕೆ ಕಂಡಿದೆ. ಅಲ್ಲದೆ ಬೇಡಿಕೆಯಷ್ಟು ಮೊಟ್ಟೆ ವಿತರಣೆ ಇಲ್ಲದಿರುವುದೂ ಸೇರಿಹಲವು ಕಾರಣದಿಂದ ದರ ಏರಿಕೆ ಕಂಡಿದೆ.
ವ್ಯಾಪಾರಿಗಳಲ್ಲಿ ಹರ್ಷ
ಮೊಟ್ಟೆ ದರ ಏರಿಕೆಯಾಗುತ್ತಿದ್ದರೆ ವ್ಯಾಪಾರಿಗಳು ಹೆಚ್ಚು ಮೊಟ್ಟೆಯನ್ನು ಶೇಖರಣೆ ಮಾಡಿ ಇಡುತ್ತಾರೆ. ಮೊಟ್ಟೆ ದರ ಏರಿಕೆ ಕಂಡರೆ ಅದಕ್ಕೆ ಬೇಡಿಕೆ ಜಾಸ್ತಿ, ಮೊಟ್ಟೆ ದರ ಇಳಿಕೆ ಕಂಡಾಗ ವ್ಯಾಪಾರಿಗಳು ಮೊಟ್ಟೆಯನ್ನು ಬೇಗ ಬೇಗ ಮಾರಾಟ ಮಾಡಲು ಪ್ರಯತ್ನಿಸುತ್ತಾರೆ. ನಾಳೆ ಇನ್ನೂ ದರ ಕಡಿಮೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿ ಮೊಟ್ಟೆ ಶೇಖರಣೆಗೆ ಪ್ರಯತ್ನ ಮಾಡುವುದಿಲ್ಲ.ಆ ಸಮಯದಲ್ಲಿ ಮೊಟ್ಟೆ ಹೆಚ್ಚು ಮಾರಾಟವೂ ಆಗುವುದಿಲ್ಲ.
ಒಟ್ಟಿನಲ್ಲಿ ಮೊಟ್ಟೆ ದರ 8 ದಿನಗಳಲ್ಲಿ 1.40 ರೂ. ರಖಂ ದರದಲ್ಲಿಯೇ ಏರಿಕೆ ಕಂಡಿದೆ. ಚಿಲ್ಲರೆ ದರ ಒಂದಕ್ಕೆ ರೂ. 5.30ರಿಂದ6.60ರ ಗೆ ಏರಿಕೆಯಾಗಿದೆ.