Advertisement

ಮಾರುಕಟ್ಟೆಯಲ್ಲಿ ಕಳೆ ಗಟ್ಟಿದ ಖರೀದಿ ಭರಾಟೆ

12:31 PM Oct 24, 2020 | Suhan S |

ಬೆಂಗಳೂರು: ಆಯುಧ ಪೂಜೆ, ವಿಜಯದಶಮಿಗೆ ಶುಕ್ರವಾರದಿಂದಲೇ ನಗರದಲ್ಲಿ ಖರೀದಿ ಭರಾಟೆ ಜೋರಾಗಿದ್ದು, ಎಲ್ಲೆಡೆ ವ್ಯಾಪಾರ ವಹಿವಾಟು ಬಿರುಸಾಗಿ ನಡೆದಿತ್ತು. ಕೆ.ಆರ್‌.ಮಾರುಕಟ್ಟೆ, ಕಲಾಸಿಪಾಳ್ಯ, ಮಲ್ಲೇಶ್ವರ,ಬಸವಗುಡಿಯ ಗಾಂಧಿ ಬಜಾರ್‌, ಜಯನಗರ, ಬನಶಂಕರಿ, ಸಾರಕ್ಕಿ, ಯಶವಂಪುರ, ಕೆ.ಆರ್‌.ಪುರ ಮಾರುಕಟ್ಟೆ ಸೇರಿದಂತೆ ಹಲವು ಮಾರುಕಟ್ಟೆ ಪ್ರದೇಶಗಳಲ್ಲಿ ಜನ ಹೂವು -ಹಣ್ಣು, ತರಕಾರಿ ಖರೀದಿಯಲ್ಲಿ ತೊಡಗಿದ್ದರು.

Advertisement

ಅತಿವೃಷ್ಟಿ ಜತೆಗೆ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣಿನ ಬೆಲೆ ಏರಿಕೆಯಾಗಿದೆ. ಬೂದುಗುಂಬಳ ಕಾಯಿ, ಬಾಳೆಕಂಬ, ಮಾವಿನ ಸೊಪ್ಪು ದಾಸ್ತಾನು ಮಾರುಕಟ್ಟೆಗೆ ಪೊರೈಕೆಯಾಗಿದ್ದು, ಜನ ಖರೀದಿಯಲ್ಲಿ ಮುಳುಗಿದ್ದರು. ಕಚೇರಿ, ಕಾರ್ಖಾನೆಗಳು, ಮಳಿಗೆಗಳು ಶುಕ್ರವಾರವೇ ಪೂಜೆ ಪುನಸ್ಕಾರಕ್ಕೆ ಮುಂದಾಗಿದ್ದರಿಂದ ವ್ಯಾಪಾರ ಜೋರಾಗಿ ನಡೆದಿತ್ತು. ಸಂಜೆ ಮಳೆಯಿಂದ ಸ್ವಲ್ಪ ವ್ಯಾಪಾರ ತಗ್ಗಿತ್ತು. ಪ್ರತಿ ವರ್ಷ ಹಬ್ಬದಿನಗಳಲ್ಲಿ ಬಾಳೆಕಂಬ, ಮಾವಿನ ಸೊಪ್ಪು ಮಾರಾಟಕ್ಕೆ ಇಲ್ಲಿಗೆ ಬರುತ್ತೇವೆ. ಕೋವಿಡ್ ಹಿನ್ನೆಲೆಯಲ್ಲಿ ಬದುಕು ಕಷ್ಟಕರವಾಗಿದ್ದು, ಉತ್ತಮ ವ್ಯಾಪಾರದ ನಿರೀಕ್ಷೆಯಲ್ಲಿದ್ದೇವೆ ಎಂದು ಕನಕಪುರದ ವ್ಯಾಪಾರಿ ನಂದೀಶ್‌ ಹೇಳಿದರು.

ಕನಕಾಂಬರ ಹೂವು ತುಟ್ಟಿ: ಕೆ.ಆರ್‌.ಮಾರುಕಟ್ಟೆ ಯಲ್ಲಿ ಕನಕಾಂಬರ ಶುಕ್ರವಾರ ಕೆ.ಜಿ.ಗೆ 1600 ರೂ.ನಿಂದ 1800 ರೂ.ವರೆಗೆ ಮಾರಾಟವಾಯಿತು. ಮಲ್ಲಿಗೆ ಕೆ.ಜಿ. 800ರೂ.ದಿಂದ 1000 ರೂ., ಸೇವಂತಿಗೆ ಬಿಡಿ ಹೂವು ಕೆ.ಜಿ.ಗೆ 150ರೂ. ನಿಂದ 160 ರೂಗೆ ಮಾರಾಟವಾಯಿತು. ಇನ್ನೂ ಬೂದುಗುಂಬಳ 80 ರೂ.ನಿಂದ 120 ರೂ., ಸೇಬು, ದಾಳಿಂಬೆ ಕೆ.ಜಿಗೆ 80 ರಿಂದ 120 ರೂ, ಮೂಸಂಬಿ 70 ರೂ., ಕಿತ್ತಳೆ 40 ರೂ. ಮತ್ತು ಏಲಕ್ಕಿ ಬಾಳೆಹಣ್ಣು 40 ರೂ.ವರೆಗೂ ಮಾರಾಟವಾಯಿತು.

ಹಬ್ಬದ ಎಫೆಕ್ಟ್; ತ್ಯಾಜ್ಯ ಸಮಸ್ಯೆ ಸಾಧ್ಯತೆ :

ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಎಂದಿನಂತೆ ಹೆಚ್ಚು ತ್ಯಾಜ್ಯ ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಈ ಮಧ್ಯೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.

Advertisement

ಹಬ್ಬದ ಪ್ರಯುಕ್ತ ಪೂಜೆಗಾಗಿ ನಗರದಲ್ಲಿ ಕೆ.ಆರ್‌. ಮಾರುಕಟ್ಟೆ, ಮಲ್ಲೇಶ್ವರ, ಮಡಿವಾಳ, ಕೆ.ಆರ್‌.ಪುರ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಈಗಾಗಲೇ ರೈತರು ಹಾಗೂ ವ್ಯಾಪಾರಿಗಳು ಬಾಳೆಕಂದು, ಮಾವಿನ ಎಲೆ, ಬೂದು ಕುಂಬಳಕಾಯಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಖರೀದಿ ಭರಾಟೆಯೂ ಜೋರಾಗಿದೆ. ಈ ಪೈಕಿಮಾರಾಟವಾಗದೆ ಉಳಿಯುವ ವಸ್ತುಗಳವಿಲೇವಾರಿ ಸಮಸ್ಯೆಯಾಗಿ ಪರಿಣಮಿಸಲಿದೆ.

ಗಸ್ತು, ದಂಡದ ಎಚ್ಚರಿಕೆ: ವ್ಯಾಪಾರಿಗಳು ಮತ್ತು ರೈತರು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯಬಾರದು ಎಂದು ಧ್ವನಿವರ್ಧಕದ ಮೂಲಕ ಮಾಹಿತಿ ನೀಡುವಂತೆ ಮಾರ್ಷಲ್‌ಗ‌ಳಿಗೆ ಸೂಚಿಸಲಾಗಿದೆ. ಬೇಕಾಬಿಟ್ಟಿ ಬಿಸಾಕಿದ್ದು ಕಂಡುಬಂದರೆ, ತಕ್ಷಣ ದಂಡ ಹಾಕಲು ನಿರ್ದೇಶನ ನೀಡಲಾಗಿದೆ’ ಎಂದುವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಿ. ರಂದೀಪ್‌ ತಿಳಿಸಿದರು.

ತಮಿಳುನಾಡು ಮತ್ತು ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಿಂದ ಹೂವು ಕೆ.ಆರ್‌.ಮಾರುಕಟ್ಟೆಗೆ ಪೂರೈಕೆಯಾಗುತ್ತದೆ. ಆದರೆ ಸದ್ಯ ಅತಿವೃಷ್ಟಿ ಕಾರಣಕ್ಕೆ ಇಳುವರಿ ಕಡಿಮೆಯಿದ್ದು, ಗುಣಮಟ್ಟದ ಹೂವಿನ ಬೆಲೆ ಏರಿಕೆಯಾಗಿದೆ. ದಯಾಳ್‌, ಹೂವಿನ ವ್ಯಾಪಾರಿ

Advertisement

Udayavani is now on Telegram. Click here to join our channel and stay updated with the latest news.

Next