ನವದೆಹಲಿ: ತನ್ನ ವಿರುದ್ಧದ ಭ್ರಷ್ಟಾಚಾರ(Corruption case) ಪ್ರಕರಣದ ತನಿಖೆಯನ್ನು ಸಿಬಿಐ(CBI)ಗೆ ವರ್ಗಾಯಿಸಿದ್ದ ಕೋಲ್ಕತಾ ಹೈಕೋರ್ಟ್(Calcutta High court) ಆದೇಶವನ್ನು ಪ್ರಶ್ನಿಸಿ ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ್ ಸಂದೀಪ್ ಘೋಷ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ (ಸೆ.06) ವಜಾಗೊಳಿಸಿದೆ.
ಸುಪ್ರೀಂಕೋರ್ಟ್ ಸಿಜೆಐ(CJI) ಡಿವೈ ಚಂದ್ರಚೂಡ್, ಜಸ್ಟೀಸ್ ಜೆಬಿ ಪರ್ಡಿವಾಲಾ ಮತ್ತು ಜಸ್ಟೀಸ್ ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಹಣಕಾಸು ಅವ್ಯವಹಾರದ ಕುರಿತ ಸಿಬಿಐ ತನಿಖೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಒಬ್ಬ ಆರೋಪಿಯಾಗಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವ ಕೋಲ್ಕತಾ ಹೈಕೋರ್ಟ್ ಆದೇಶದ ವಿರುದ್ಧ ಮಧ್ಯಪ್ರವೇಶಿಸುವ ಅಧಿಕಾರ ನಿಮಗಿಲ್ಲ(ಘೋಷ್) ಎಂದು ಸುಪ್ರೀಂ ಪೀಠ ತಿಳಿಸಿದೆ.
ಆಗಸ್ಟ್ 9ರಂದು ನಡೆದ ಟ್ರೈನಿ ವೈದ್ಯೆಯ ಅತ್ಯಾ*ಚಾರ ಮತ್ತು ಕೊಲೆ ಪ್ರಕರಣದ ಜೊತೆ ಭ್ರಷ್ಟಾಚಾರದ ಆರೋಪ ಮಾಡಿರುವ ಕೋಲ್ಕತಾ ಹೈಕೋರ್ಟ್ ನ ಕೆಲವು ಟಿಪ್ಪಣಿಯನ್ನು ತೆಗೆದು ಹಾಕಬೇಕೆಂಬ ಘೋಷ್ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.
2021ರಿಂದ ಪಶ್ಚಿಮಬಂಗಾಳ ಸರ್ಕಾರ ಸ್ವಾಮಿತ್ವದ ಆರ್ ಜಿ ಕರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲರಾಗಿ ಘೋಷ್ ಕಾರ್ಯನಿರ್ವಹಿಸಿದ್ದು, ಈ ಸಂದರ್ಭದಲ್ಲಿ ನಡೆದ ಹಣಕಾಸು ಅವ್ಯವಹಾರದ ತನಿಖೆಯನ್ನು ಕೋಲ್ಕತಾ ಹೈಕೋರ್ಟ್ ಸಿಬಿಐಗೆ ವಹಿಸಿತ್ತು. ಆಗಸ್ಟ್ 23ರಿಂದ ಸಿಬಿಐ ವಿಚಾರಣೆ ಆರಂಭಿಸಿತ್ತು.