ಮೆಲ್ಬರ್ನ್: ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ಆತಿಥ್ಯದ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯುವುದು ಅನುಮಾನ ಎಂದು ಮಾಜಿ ನಾಯಕ ಮಾರ್ಕ್ ಟೇಲರ್ ಅಭಿಪ್ರಾಯಪಟ್ಟಿದ್ದಾರೆ. ಈ ವಾರದ ಮಂಡಳಿಗಳ ಸಭೆಯಲ್ಲಿ ಐಸಿಸಿ ಈ ಬಗ್ಗೆ ಖಚಿತ ನಿರ್ಧಾರವೊಂದಕ್ಕೆ ಬರಬೇಕಿದೆ ಎಂದಿದ್ದಾರೆ.
ಟಿ20 ವಿಶ್ವಕಪ್ “ಸ್ಥಳಾವಕಾಶ’ದಲ್ಲಿ ಐಪಿಎಲ್ ಪಂದ್ಯಾವಳಿ ನಡೆಯುವುದೇ ಆದಲ್ಲಿ ತನ್ನ ದೇಶದ ಕ್ರಿಕೆಟಿಗರಿಗೆ ಇದರಲ್ಲಿ ಭಾಗವಹಿಸಲು “ಕ್ರಿಕೆಟ್ ಆಸ್ಟ್ರೇಲಿಯ’ ಅನುಮತಿ ನೀಡಬೇಕೆಂದೂ ಮಾರ್ಕ್ ಟೇಲರ್ ಬಯಸಿದ್ದಾರೆ.
“ಪೂರ್ವ ಯೋಜನೆಯಂತೆ ಅಕ್ಟೋಬರ್‌ನಲ್ಲಿ ಟಿ20 ವಿಶ್ವಕಪ್ ನಡೆಯುವ ಸಂಭವ ಕಡಿಮೆ. ಇದೇ ವಾರ ಐಸಿಸಿ ಮಂಡಳಿಗಳ ಸಭೆ ನಡೆಯಲಿದೆ. ಇಲ್ಲಿ ಟಿ20 ವಿಶ್ವಕಪ್ ಭವಿಷ್ಯದ ಬಗ್ಗೆ ಅಂತಿಮ ನಿರ್ಧಾರವೊಂದನ್ನು ತೆಗೆದುಕೊಳ್ಳುವುದು ಒಳ್ಳೆಯದು’ ಎಂದು ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿಯ ನಿರ್ದೇಶಕರೂ ಆಗಿರುವ ಟೇಲರ್ ಹೇಳಿದರು. ಮೇ 28ರಂದು ಐಸಿಸಿ ಮಂಡಳಿಗಳ ಸಭೆ ನಡೆಯಲಿದೆ.
ಭಾರತವೂ ಬರಬೇಕು…
“ಐಪಿಎಲ್ ಆಡಲು ಆಸ್ಟ್ರೇಲಿಯ ಆಟಗಾರರಿಗೆ ಅವಕಾಶ ಕಲ್ಪಿಸಿದರೆ ಬಿಸಿಸಿಐ ಮತ್ತು ಭಾರತಕ್ಕೆ ಖುಷಿಯಾಗಲಿದೆ. ನಮ್ಮ ಬಹಳಷ್ಟು ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡಲಿಕ್ಕಿದೆ. ಹಾಗೆಯೇ ಭಾರತ ತಂಡ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಬೇಕು ಎಂಬುದು ನನ್ನ ಅಪೇಕ್ಷೆ’ ಎಂದು ಟೇಲರ್ ಹೇಳಿದರು. ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ಕಾಂಗರೂ ನಾಡಿನ ವೇಗಿ ಪ್ಯಾಟ್ ಕಮಿನ್ಸ್ 15.50 ಕೋಟಿ ರೂ. ದಾಖಲೆ ಮೊತ್ತಕ್ಕೆ ಹರಾಜಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಇದೇ ವೇಳೆ ಕ್ರಿಕೆಟ್ ಆಸ್ಟ್ರೇಲಿಯದ ಅಧ್ಯಕ್ಷ ಕೆವಿನ್ ರಾಬರ್ಟ್ಸ್ ಕೂಡ ಹೇಳಿಕೆಯೊಂದನ್ನು ನೀಡಿದ್ದು, ಆಗಸ್ಟ್ ವೇಳೆ ಕೋವಿಡ್-19 ನಿಯಂತ್ರಣಕ್ಕೆ ಬಾರದೇ ಹೋದಲ್ಲಿ ಟಿ20 ವಿಶ್ವಕಪ್ ನಡೆಯುವ ಸಾಧ್ಯತೆ ಇಲ್ಲ ಎಂದಿದ್ದಾರೆ.