ಬೆಂಗಳೂರು: ರಾಜ್ಯದ 7,412 ಗ್ರಾಮಗಳು ಹಾಗೂ 1,115 ವಾರ್ಡ್‌ಗಳಲ್ಲಿ ಮುಂದಿನ ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಬಹುದೆಂದು ಗುರುತಿಸಲಾಗಿದ್ದು, ಈ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಒಟ್ಟು 7,108 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಲಾಗಿದೆ.
ಕಂದಾಯ ಸಚಿವ ಕೃಷ್ಣಬೈರೇ ಗೌಡರ ಅಧ್ಯಕ್ಷತೆಯಲ್ಲಿ ಜರಗಿದ ಬರ ನಿರ್ವಹಣೆಯ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಬರ ಸ್ಥಿತಿಗತಿ ಪರಾಮರ್ಶೆ ನಡೆಸಿ ಕೆಲವು ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.
ಟ್ಯಾಂಕರ್ ಹಾಗೂ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನೀರು ಪೂರೈಸಲು ಹಾಗೂ 15 ದಿನಗಳಲ್ಲಿ ಬಿಲ್ ಪಾವತಿಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸದ್ಯ 117 ಗ್ರಾಮಗಳಿಗೆ 181 ಟ್ಯಾಂಕರ್ ಮೂಲಕ ಹಾಗೂ 354 ಗ್ರಾಮಗಳಿಗೆ 419 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಆಧಾರದಲ್ಲಿ ಪಡೆದು ನೀರು ಪೂರೈಸಲಾಗುತ್ತಿದೆ. ಜತೆಗೆ 9 ನಗರ ಸ್ಥಳೀಯ ಸಂಸ್ಥೆಗಳ 57 ವಾರ್ಡ್‌ಗಳಿಗೆ 17 ಟ್ಯಾಂಕರ್‌ಗಳಿಂದ ಹಾಗೂ 29 ವಾರ್ಡ್‌ಗಳಿಗೆ 17 ಖಾಸಗಿ ಕೊಳವೆಬಾವಿಗಳ ಮೂಲಕ ತುರ್ತು ಕುಡಿಯುವ ನೀರು ಪೂರೈಸಲಾಗುತ್ತಿದೆ.
ಪ್ರಸಕ್ತ ಸಾಲಿನ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 930.14 ಕೋ. ರೂ. ಹಂಚಿಕೆಯಾಗಿದ್ದು, ಇದರಲ್ಲಿ ಕೇಂದ್ರದ ಪಾಲು 697.60 ಕೋ. ರೂ. ಹಾಗೂ ರಾಜ್ಯದ ಪಾಲು 232.54 ಕೋ. ರೂ.ಇದೆ. ಈ ಅನುದಾನದ ಜತೆಗೆ ರಾಜ್ಯ ಸರಕಾರದಿಂದ ಹೆಚ್ಚುವರಿ ಅನುದಾನ 885.67 ಕೋ.ರೂ. ಸಹಿತ ಒಟ್ಟು 1,810.81 ಕೋ. ರೂ. ಸಂಪೂರ್ಣ ಅನುದಾನ ಬಿಡುಗಡೆಗೆ ಆರ್ಥಿಕ ಇಲಾಖೆ ಒಪ್ಪಿದ್ದು, ಈವರೆಗೆ 1,602.45 ಕೋ. ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.
ಜಿÇÉಾಧಿಕಾರಿಗಳ ಖಾತೆಯಲ್ಲಿ 725.92 ಕೋ. ರೂ. ಹಾಗೂ ತಹಶೀಲ್ದಾರ್ ಖಾತೆಯಲ್ಲಿ 135.40 ಕೋ. ರೂ. ಸಹಿತ ಒಟ್ಟು 861.32 ಕೋ. ರೂ. ಅನುದಾನವು ಬರ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಲಭ್ಯವಿದೆ ಎಂದು ಕಂದಾಯ ಇಲಾಖೆ ಮಾಹಿತಿ ಹಂಚಿಕೊಂಡಿದೆ.
ಅಂತಾರಾಜ್ಯ ಮೇವು ಸಾಗಣೆ ಸ್ಥಗಿತ:
ಅಂತಾರಾಜ್ಯ ಮೇವು ಸಾಗಣೆಯನ್ನು ನಿರ್ಬಂಧಿಸಿ ನವೆಂಬರ್‌ನಲ್ಲಿ ಆದೇಶ ಹೊರಡಿಸಲಾಗಿದೆ. ಮೇವಿನ ಕಿಟ್ ಖರೀದಿಗೆ ಪಶುಸಂಗೋಪನೆ ಇಲಾಖೆಗೆ 20 ಕೋ. ರೂ. ನೀಡಲಾಗಿದ್ದು, 7.62 ಲಕ್ಷ ಮಿನಿ ಕಿಟ್‌ಗಳನ್ನು ಖರೀದಿಸಲಾಗಿದೆ. ಈ ಕಿಟ್‌ಗಳನ್ನು 4.19 ಲಕ್ಷ ರೈತರಿಗೆ ಉಚಿತವಾಗಿ ನೀಡಿದೆ. ಸದ್ಯ ರಾಜ್ಯದಲ್ಲಿ 144 ಲಕ್ಷ ಟನ್ ಮೇವು ಲಭ್ಯವಿದ್ದು, ಮುಂದಿನ 27 ವಾರಗಳ ಬಳಕೆಗೆ ಸಾಕಾಗುತ್ತದೆ.