Advertisement

ಮಳೆರಾಯನಿಗಾಗಿ ದೇವರ ಜಪ

12:07 PM May 27, 2019 | Naveen |

ಎಂ.ಸೋಮೇಶ್‌ ಉಪ್ಪಾರ
ಮರಿಯಮ್ಮನಹಳ್ಳಿ:
ಸಕಾಲಕ್ಕೆ ಮಳೆ ಬಾರದೇ ಹೋದರೆ ಜನರು ಕಂಗಾಲಾಗುತ್ತಾರೆ. ದನಕರುಗಳಿಗಾದರೂ ಮಳೆ ಕರುಣಿಸಪ್ಪಾ ಎಂದು ಕಂಡ ಕಂಡ ದೇವರಲ್ಲಿ ಮೊರೆ ಹೋಗುತ್ತಾರೆ. ಗುಡಿಗಳಲ್ಲಿ ರಾತ್ರಿಯಿಡೀ ಭಜನೆ ಮಾಡುತ್ತಾರೆ. ಕತ್ತೆ ಮೆರವಣಿಗೆ ಇತ್ಯಾದಿ ಆಚರಣೆ ಮಾಡುತ್ತಾರೆ. ಹಾಗೆಯೇ ಜನಪದ ಮಹಿಳೆಯರೂ ಜನಪದ ಕಾವ್ಯಗಳನ್ನು ಹಾಡುತ್ತಾರೆ.

Advertisement

ಹೀಗೆ ಶರಣರ, ಮಹಿಮಾನ್ವಿತರ ಹಾಡುಗಳನ್ನು ಹಾಡಿದರೆ ಮಳೆ ಬರುತ್ತದೆ ಭೂಮಿಯ ಮೇಲೆ ಸಮೃದ್ಧಿ ತುಂಬುತ್ತದೆ ಎಂಬ ನಂಬಿಕೆ ಜನಪದರಲ್ಲೂ ಇನ್ನೂ ಜೀವಂತವಿದೆ.

ಇದಕ್ಕೆ ಜೀವಂತ ಸಾಕ್ಷಿ ಎಂಬಂತೆ ಮರಿಯಮ್ಮನಹಳ್ಳಿಯ 7ನೇ ವಾರ್ಡಿನ ಜನಪದ ಹಾಡುಗಾರರನಿಲ್ಲಿನ ಮಾರೆಮ್ಮನ ಗುಡಿಯ ಆವರಣದಲ್ಲಿ ಕಾಳಿಂಗರಾಯ ಮತ್ತು ಚೆನ್ನಮ್ಮ ಶರಣ ದಂಪತಿ ಕತೆಯನ್ನೊಳಗೊಂಡ ಹಾಡನ್ನು ಪ್ರತಿದಿನ ರಾತ್ರಿ ಹಾಡುತ್ತಿದ್ದಾರೆ. ದೀರ್ಘ‌ವಾಗಿರುವ ಈ ಕಥನ ಕಾವ್ಯ ಮೂರು ರಾತ್ರಿಗಳ ಅವಧಿಗೂ ಹೆಚ್ಚು ಕಾಲ ಹಾಡಲಾಗುತ್ತದೆ.

ಸಮೃದ್ಧಿಗಾಗಿ ಹಾಡು: ಗ್ರಾಮಕ್ಕೆ ಸಮೃದ್ಧಿ ತುಂಬುತ್ತದೆ ಎಂಬ ನಂಬಿಕೆಯೂ ಇದೆ. ಈ ಹಾಡನ್ನು ಹೇಳಿಸಿದರೆ. ಕೇಳಿದರೆ ಹೇಳಿಸಿದವರಿಗೂ ಕೇಳಿದವರಿಗೂ ಒಳಿತಾಗುತ್ತದೆ. ಮಕ್ಕಳಿಲ್ಲದವರಿಗೂ ಮಕ್ಕಳಾಗುತ್ತವೆ. ರೋಗ ರುಜಿನಗಳಿದ್ದರೆ ವಾಸಿಯಾಗುತ್ತವೆ ಎಂಬ ನಂಬಿಕೆಗಳೂ ಜನರಲ್ಲಿವೆ.

ಜನಪದ ಹಾಡುಗಾರ್ತಿಯರು: ಇಲ್ಲಿನ ಕಲಾವಿದರಾದ ಎಸ್‌.ಎಂ. ಬಸಮ್ಮ, ಎಚ್.ಜಂಬಮ್ಮ, ಎಚ್.ನೀಲಮ್ಮ, ಎಚ್.ಅಡಿವೆಮ್ಮ ಇವರು ಮುಖ್ಯ ಗಾಯಕರು. ಇವರೇ ಕಥೆಯನ್ನು ಹಾಡುತ್ತಾ ಬೆಳೆಸುತ್ತಾ ಹೋಗುತ್ತಾರೆ. ಇವರ ಸಹ ಹಾಡುಗಾರರಾಗಿ, ಎಚ್.ಚೆನ್ನಮ್ಮ, ಈ ಸೋಮಕ್ಕ, ಈ.ಲಕ್ಷ್ಮವ್ವ, ಶಾರದಮ್ಮ, ಮಂಜುಳಾ, ಗಂಗಮ್ಮ, ಸರಸ್ವತಿ ಇವರು ಹಾಡಿನ ಪಲ್ಲವಿ ಸಾಲನ್ನು ಪುನರಾವರ್ತನೆ ಮಾಡುತ್ತಾ ಹಾಡುತ್ತಾರೆ.

Advertisement

ಈ ಕಲಾವಿದರು ಮೊದಲು ಕಾಳಿಂಗರಾಯನ ಮತ್ತು ಚೆನ್ನಮ್ಮನ ದೇವರನ್ನು ಕಳಸದಿಂದ ಮಾಡಿ ಕಾಳಿಂಗರಾಯನಿಗೆ ಬಿಳಿ ಪಂಚೆ, ವಸ್ತ್ರ ತೊಡಿಸಿ, ಚೆನ್ನಮ್ಮನಿಗೆ ಹಸಿರು ಸೀರೆ ತೊಡಿಸಿ ಪ್ರತಿಷ್ಠಾಪಿಸಿ ಪೂಜೆಗೈದು ಹಾಡಲು ಆರಂಭಿಸುತ್ತಾರೆ.

ಕಥಾ ಸಾರ: ಕಥೆಯಲ್ಲಿ ಕಾಳಿಂಗರಾಯ ಹುಟ್ಟಿದಾಗ ಆ ಮಗುವಿನ ತೊಟ್ಟಿಲ ಸಂದರ್ಭದಲ್ಲಿ ತೊಟ್ಟಿಲು ಕಟ್ಟಿ ಒಂದು ಬೊಂಬೆ ಇಟ್ಟು, ತೊಟ್ಟಿಲು, ನಾಮಕರಣ ಕಾರ್ಯಕ್ರಮ ಅನುಕರಿಸುತ್ತಾರೆ.

ನಿತ್ಯ ಕೃಷಿ ಕೂಲಿಕಾರ್ಮಿಕರಾಗಿ ದುಡಿಯುವ ಈ ಜನಪದ ಹಾಡುಗಾರರು ಸಂಜೆ ಮನೆಗೆ ಬಂದ ನಂತರ ಮನೆಕೆಲಸ ಮುಗಿಸಿಕೊಂಡು, ಸ್ನಾನ ಮಾಡಿಕೊಂಡು ಬಂದು ಶ್ರದ್ಧೆ ಭಕ್ತಿಗಳಿಂದ ಹಾಡುತ್ತಾರೆ. ಹಾಡಿನ ಮಧ್ಯೆ ಮಧ್ಯೆ ಸ್ವಲ್ಪ ಸಮಯ ವಿಶ್ರಾಂತಿ ಪಡೆಯುತ್ತಾರೆ. ಈ ವೇಳೆ ಚಹ, ಎಲೆಅಡಿಕೆ ಸೇವನೆ ಮಾಡುತ್ತಾರೆ. ಮಧ್ಯರಾತ್ರಿಯವರೆಗೂ ಹಾಡುತ್ತಾರೆ. ಬಾಕಿ ಉಳಿದ ಹಾಡಿನ ಸಂದುಗಳನ್ನು ಮರುದಿನ ಹಾಡುತ್ತಾರೆ ಹೀಗೆ ಮೂರ್‍ನಾಲ್ಕು ದಿನಗಳವರೆಗೂ ಹಾಡುತ್ತಾರೆ.

ಹತ್ತು ವರ್ಷದ ಮಗನಿಗೆ ಡೆಂಘೀ ಜ್ವರ ಬಂದು ಸಾಯುವ ಸ್ಥಿತಿ ತಲುಪಿದ್ದ. ಈ ವೇಳೆ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಿಸಿದೆವು. ಮಗನನ್ನು ಉಳಿಸಿದರೆ ಶಕ್ತಿ ಇರುವವರೆಗೂ ಹಾಡನ್ನು ಜೀವನದುದ್ದಕ್ಕೂ ಹಾಡುತ್ತೇನೆ ಎಂಬ ಹರಕೆ ಹೊತ್ತು ಹಾಡುತ್ತಾ ಬಂದೆ. ಮಗನೂ ಉಳಿದ. ಅಂದಿನಿಂದಲೂ ನಾನು ಹಾಡನ್ನು ಹಾಡುತ್ತಾ ಬಂದಿದ್ದೇನೆ. ಮುಂದೆಯೂ ಹಾಡುತ್ತೇನೆ.
ಎಸ್‌.ಎಂ. ಬಸಮ್ಮ
ಜನಪದ ಹಾಡುಗಾರ್ತಿ

Advertisement

Udayavani is now on Telegram. Click here to join our channel and stay updated with the latest news.

Next