ಮರಿಯಮ್ಮನಹಳ್ಳಿ: ಬೇಸಿಗೆಗೆ ನೀರಿನ ಸಂಗ್ರಹ ಮತ್ತು ಮಿತಬಳಕೆ ಮಂತ್ರ ಜಪಿಸಬೇಕಾದ ಪಟ್ಟಣ ಪಂಚಾಯಿತಿ ಆಡಳಿತವರ್ಗ ತಿಂಗಳುಗಟ್ಟಲೇ ಇಲ್ಲಿ ನಿತ್ಯವೂ ನೀರು ಪೋಲಾಗುತ್ತಿದ್ದರೂ ಸುಮ್ಮನೆ ಕುಳಿತಿದೆ.
Advertisement
ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಟಿ.ಬಿ. ಡ್ಯಾಂನಿಂದ ನೀರು ಸರಬರಾಜು ಮಾಡುವ ಪೈಪ್‌ಲೈನ್ ಸುಮಾರು ಏಳೆಂಟು ಕಡೆ ಸೋರಿಕೆಯಾಗುತ್ತಿದ್ದು ನಿತ್ಯವೂ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ನೀರಿನ ಮಹತ್ವವನ್ನು ಅರಿಯದ ಪಟ್ಟಣ ಪಂಚಾಯಿತಿ ಆಡಳಿತವರ್ಗ ಮಾತ್ರ ಈ ಬಗ್ಗೆ ಜಾಣ ಕುರುಡುತನ ಅನುಸರಿಸುತ್ತಿದೆ. ಪಟ್ಟಣ ಪಂಚಾಯಿತಿಯಿಂದ ಕೂಗಳತೆಯಲ್ಲಿಯೇ ಪಟ್ಟಣದ ಚರಂಡಿನೀರು ಬಂದು ನಿಲ್ಲುತ್ತಿದ್ದು ಇದರಲ್ಲಿಯೇ ಕುಡಿಯುವ ನೀರಿನ ಪೈಪ್‌ಲೈನ್ ಹಾದು ಹೋಗಿ ಚರಂಡಿ ನೀರು ಸೇರಿಕೊಳ್ಳುತ್ತಿದ್ದು ಇದೇ ನೀರನ್ನು ಪಟ್ಟಣದ ಜನರು ಕುಡಿಯುವುದಕ್ಕೂ ಸ್ನಾನಕ್ಕೂ ಪೂಜೆಗೂ ಎಲ್ಲದಕ್ಕೂ ಬಳಕೆ ಮಾಡಿಕೊಳ್ಳುತ್ತಿದ್ದು ರೋಗರುಜಿನಗಳ ಭಯದಿಂದ ಆತಂಕಕ್ಕೊಳಗಾಗಿದ್ದಾರೆ.
Related Articles
Advertisement
ಸಂಪೂರ್ಣವಾಗಿ ಪೈಪ್‌ಲೈನ್ ತುಕ್ಕು ಹಿಡಿದಿದ್ದು ಒಂದೆಡೆ ತೇಪೆ ಹಾಕಿದರೆ ಮತ್ತೂಂದೆಡೆ ಹೊಡೆದುಕೊಳ್ಳುತ್ತಿದೆ. ನೀರಿನ ಸಮರ್ಪಕ ವಿತರಣೆಗೆ ಯಾವುದೇ ಕುಂದುಕೊರತೆಗಳಾಗಬಾರದೆಂದು ಸರ್ಕಾರಗಳು ಸಾಕಷ್ಟು ಅನುದಾನಗಳನ್ನು ಕೊಟ್ಟರೂ ಆ ಹಣವನ್ನು ಸಮರ್ಪಕವಾಗಿ ಬಳಕೆಮಾಡಿಕೊಳ್ಳದೇ ಸೋರಿಕೆ ಮಾಡುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಸಿಬ್ಬಂದಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಜನರ ಅಳಲನ್ನು ಒಂದು ಕಿವಿಯಿಂದ ಕೇಳಿ ಮತ್ತೂಂದು ಕಿವಿಯಿಂದ ಹೊರಹಾಕಿ ತಮಗೂ ಸಾರ್ವಜನಿಕರಿಗೂ ಸಂಬಂಧವಿಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಈಗಿರುವ ಹಳೆ ಪೈಪ್‌ಲೈನ್‌ನ್ನು ತೆಗೆದು ಹೊಸ ಪೈಪ್‌ಲೈನ್ ಅಳವಡಿಸಿದರೆ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ. ಆದ್ದರಿಂದ ಹೊಸ ಪೈಪ್ ಅಳವಡಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.