ಎಂ. ಸೋಮೇಶ್ ಉಪ್ಪಾರ್
ಮರಿಯಮ್ಮನಹಳ್ಳಿ: ಪ್ರತಿ ವರ್ಷ ಆಷಾಢ ಮಾಸದ ಮೊದಲ ಮಂಗಳವಾರದಂದು ಆಚರಿಸಲಾಗುವ ಹಬ್ಬವನ್ನು ಬಂಜಾರರು ಸೀತಲಾ, ಸಾತಿಯಾಡಿ (ಏಳುಮಕ್ಕಳತಾಯಿ)ಹಬ್ಬವೆಂದೇ ಕರೆಯುತ್ತಾರೆ. ಬಂಜಾರ ಸಮುದಾಯದವರಿಗೆ ಇದೊಂದು ವಿಶೇಷ ಹಬ್ಬ.
ಮಕ್ಕಳಿಗೆ ಬರುವ ದಡಾರ ಮತ್ತಿತರ ಕಾಯಿಲೆಗಳಿಂದ ಏಳು ಮಕ್ಕಳ ತಾಯಿ ಕಾಪಾಡುತ್ತಾಳೆ. ಅಲ್ಲದೇ ಮಳೆ ಬೆಳೆ ಚೆನ್ನಾಗಿ ಆಗಿ ಸಮೃದ್ಧಿಯಿಂದ ಬದುಕುವಂತೆ ದೇವಿ ಆಶೀರ್ವಾದ ಮಾಡುತ್ತಾಳೆ ಅನ್ನೊ ನಂಬಿಕೆ ಈ ಹಬ್ಬದ್ದು.
ಪಟ್ಟಣಕ್ಕೆ ಸಮೀಪದ ಮರಿಯಮ್ಮನಹಳ್ಳಿ ತಾಂಡಾದ ಹೊರಗಡೆ ಪ್ರವೇಶದ್ವಾರದ ಬಳಿ ಎಲ್ಲರೂ ಒಗ್ಗಟ್ಟಿನಿಂದ ಆಚರಿಸುವ ಈ ಹಬ್ಬದಂದು ಬಂಜಾರರು ತಮ್ಮ ಮನೆಯಲ್ಲಿ ಸಿಹಿ ಮತ್ತು ಮಾಂಸಾಹಾರ ಅಡುಗೆ ಮಾಡುತ್ತಾರೆ. ಸಂಜೆಗೆ ಸಾತಿಯಾಡಿ ಪೂಜೆ ವೇಳೆಗೆ ಪ್ರತಿಯೊಬ್ಬರ ಮನೆಯಿಂದ ಒಂದು ಕೋಳಿಯನ್ನು ದೇವಿಗೆ ಬಲಿ ನೀಡುತ್ತಾರೆ. ಅಲ್ಲದೇ ತಾಂಡಾದ ಪರವಾಗಿ ಒಂದು ಕುರಿಯನ್ನು ಬಲಿನೀಡಿ ದೇವಿಗೆ ಹರಕೆ ತೀರಿಸುತ್ತಾರೆ.
ಪೂಜಾರಿ ಗಜನಾಯ್ಕ ಎಲ್ಲ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಾರೆ. ಹಿರಿಯ ಮುಖಂಡ ರೂಪ್ಲಾನಾಯ್ಕ ಅವರು ಬಂಜಾರ ಭಾಷೆಯಲ್ಲಿಯೇ ದೇವಿ ಬಳಿ ತಾಂಡಾದ ಬಾಲ ಮಕ್ಕಳಿಂದ ಹಿಡಿದು ಮುದುಕರವರೆಗೂ ಎಲ್ಲರ ಆರೋಗ್ಯವನ್ನು ದೇವಿ ಕಾಪಾಡು, ದನಕರುಗಳಿಗೂ ಒಳ್ಳೆಯದಾಗಲಿ, ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ, ಹುಲ್ಲುಕಡ್ಡಿಗೂ ದೇವಿ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತಾರೆ. ಪೂಜಾ ವಿಧಿವಿಧಾನ ಮುಗಿದಮೇಲೆ ಅಲ್ಲಿ ನೆರೆದ ಪ್ರತಿಯೊಬ್ಬರಿಗೂ ಸಿಹಿ ಮತ್ತು ಖಾರ ಪದಾರ್ಥಗಳನ್ನು ಪ್ರಸಾದ ರೂಪದಲ್ಲಿ ಹಂಚುತ್ತಾರೆ. ಪ್ರತಿಯೊಬ್ಬರೂ ದೇವಿಗೆ ಹೂವು ಹಣ್ಣು,-ಕಾಯಿ ಅರ್ಪಿಸಿ ಹರಕೆ ತೀರಿಸುತ್ತಾರೆ.
ಬಂಜಾರ ಮಹಿಳೆಯರು ತಮ್ಮ ಸಾಂಪ್ರಾದಾಯಿಕ ಉಡುಗೆ ತೊಡುಗೆಗಳೊಂದಿಗೆ ದೇವಿ ಗುಣಗಾನ ಮಾಡುತ್ತ ಸಾಂಪ್ರದಾಯಕ ನೃತ್ಯ ಮಾಡುವುದೂ ಈ ಹಬ್ಬದ ವಿಶೇಷಗಳಲ್ಲೊಂದು. ತಾಂಡಾದ ಮುಖ್ಯಸ್ಥರಾದ ನಾಯ್ಕ ಢಾಕ್ಯನಾಯ್ಕ, ಢಾವ್ ಭೀಮಾನಾಯ್ಕ, ಕಾರಬಾರಿ ಗಜನಾಯ್ಕ, ಮಾಜಿ ಗ್ರಾಪಂ ಸದಸ್ಯ ಷಣ್ಮುಖನಾಯ್ಕ ಸೇರಿದಂತೆ ಮುಖಂಡರು ಈ ಆಚರಣೆಯ ಉಸ್ತುವಾರಿ ವಹಿಸಿ ಹಬ್ಬದ ಅದ್ಧೂರಿಗೆ ಕೈಜೋಡಿಸುತ್ತಾರೆ.