Advertisement

ಪಡುಕರೆಯಲ್ಲಿ ಮರೀನಾ ನಿರ್ಮಾಣ : ಕಾರ್ಯ ಸಾಧ್ಯತಾ ವರದಿ ಪಡೆಯಲು ಸಭೆ ನಿರ್ಧಾರ

11:34 PM Dec 16, 2020 | mahesh |

ಉಡುಪಿ: ಪಡುಕರೆ ಬೀಚ್‌ನಲ್ಲಿ ಮರೀನಾ ನಿರ್ಮಾಣ ಕುರಿತಂತೆ ಕಾರ್ಯ ಸಾಧ್ಯತಾ ವರದಿ (ಫೀಸಿಬಿಲಿಟಿ ರಿಪೋರ್ಟ್‌) ಪಡೆಯಲು ಜಿಲ್ಲಾಧಿಕಾರಿ ಜಿ.ಜಗದೀಶ್‌ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಪಡುಕರೆ ತೀರದಲ್ಲಿ ನೈಸರ್ಗಿಕ ದ್ವೀಪಗಳಿದ್ದು ಸುಮಾರು 1.66 ಕಿ.ಮೀ.ನಿಂದ 2 ಕಿ.ಮೀ.ವರೆಗೆ ಬ್ರೇಕ್‌ ವಾಟರ್‌ ನಿರ್ಮಿಸಿ, 3.69 ಕಿ.ಮೀ. ಜಾಗದಲ್ಲಿ ಮರೀನಾ ನಿರ್ಮಿಸಬಹುದಾಗಿದೆ. ಈ ಕುರಿತಂತೆ ಪುಣೆಯ ಸಿಡಬ್ಲ್ಯೂಪಿಆರ್‌ಎಸ್‌ನಿಂದ ಕಾರ್ಯ ಸಾಧ್ಯತಾ ವರದಿಯನ್ನು ಪಡೆದು, ಅನಂತರ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಮೂಲಕ ಈ ಕಾರ್ಯವನ್ನು ಕೈಗೊಳ್ಳುವಂತೆ ತಿಳಿಸಿದರು.

Advertisement

ಪೂರ್ಣಪ್ರಮಾಣದ ಮರೀನಾ ಇಲ್ಲ ಭಾರತದಲ್ಲಿ ಎಲ್ಲಿಯೂ ಪೂರ್ಣ ಪ್ರಮಾಣದ ಮರೀನಾ ಇಲ್ಲ. ಒಂದು ವೇಳೆ ಪಡುಕರೆಯಲ್ಲಿ ಮರೀನಾ ನಿರ್ಮಾಣವಾದಲ್ಲಿ ಜಾಗತಿಕ ಪ್ರವಾಸಿ ತಾಣದಲ್ಲಿ ಗುರುತಿಸಿಕೊಳ್ಳುವುದರ ಜತೆಗೆ, ವಿಪುಲ ಉದ್ಯೋಗಾವಕಾಶಗಳು ಮತ್ತು ರಾಜ್ಯದ ಪ್ರವಾಸೋದ್ಯಮ ಬೆಳವಣಿಗೆಗೆ ಅತ್ಯಂತ ಪ್ರಮುಖ ಕೊಡುಗೆಯಾಗಲಿದೆ ಎಂದ ಜಿಲ್ಲಾಧಿಕಾರಿಗಳು, ಸ್ಥಳೀಯ ಪರಿಸರಕ್ಕೆ ಯಾವುದೆ ಹಾನಿಯಾದಗಂತೆ, ಸಿಆರ್‌ಝಡ್‌ ನಿಯಮಗಳ ಉಲ್ಲಂಘನೆಯಾಗದಂತೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಬಜೆಟ್‌ನಲ್ಲಿ ಸೇರಿಸುವ ಪ್ರಯತ್ನ
ಕಾರ್ಯ ಸಾಧ್ಯತಾ ವರದಿ ಮತ್ತು ವಿಸ್ತೃತಾ ಯೋಜನಾ ವರದಿಯನ್ನು ಪೆಬ್ರವರಿ ಒಳಗೆ ನೀಡಿದಲ್ಲಿ, ಮುಂದಿನ ಬಜೆಟನಲ್ಲಿ ಮರೀನಾ ನಿರ್ಮಾಣ ಕುರಿತಂತೆ ಅನುಮತಿಯನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಶಾಸಕ ರಘುಪತಿ ಭಟ್‌ ಹೇಳಿದರು. ಎಡಿಸಿ ಸದಾಶಿವ ಪ್ರಭು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕುಂದಾಪುರಎಸಿ ರಾಜು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಪ್ರಮುಖ ಪ್ರವಾಸೋದ್ಯಮ ಸಂಘಟನೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

4,000 ನೌಕೆಗಳ ಯಾನ ಸ್ಥಳ
ಮರೀನಾ ಇದು ವಿಶಿಷ್ಟ ಯೋಜನೆಯಾಗಿದೆ. ಪ್ರಸ್ತುತ ಕೊಚ್ಚಿನ್‌ ಮಾತ್ರ ಮರೀನಾ ಹೊಂದಿದ್ದು, ಅಲ್ಲಿಯೂ ಕೂಡಾ ಅಂತಾರಾಷ್ಟ್ರೀಯ ಬೋಟ್‌ ಮತ್ತು ವಿಹಾರ ನೌಕೆಗಳನ್ನು ಉಳಿಸಿಕೊಳ್ಳುವ ಸೌಲಭ್ಯಗಳು ಇಲ್ಲ, ವಿವಿಧ ಕಾರಣಗಳಿಂದಾಗಿ ವಿದೇಶಿ ನೌಕೆಗಳು ಅರಬಿ ಸಮುದ್ರ ಮಾರ್ಗವಾಗಿ ದಕ್ಷಿಣ ಏಷ್ಯಾ ದೇಶಗಳಿಗೆ ಸಾಗಿ ಅಲ್ಲಿಯೇ ಲಂಗರು ಹಾಕುತ್ತವೆ. ಒಂದು ವರ್ಷದಲ್ಲಿ ಸುಮಾರು 4000 ನೌಕೆಗಳು ಈ ಮಾರ್ಗದಲ್ಲಿ ಸಾಗಲಿದ್ದು, ಈ ಮಾರ್ಗದಲ್ಲಿ ಸೂಕ್ತ ಮರೀನಾದ ಕೊರತೆಯಿದೆ. ಪಡುಕೆರೆಯಲ್ಲಿ ನಿರ್ಮಾಣವಾಗುವ ಮರೀನಾಗೆ ಅಂದಾಜು 800 ಕೋಟಿ ವೆಚ್ಚವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next