Advertisement

ಹಲವು ವೈಶಿಷ್ಟ್ಯದ ಕೆಳಾಕಳಿ ಮಾರಿಕಾಂಬಾ ಜಾತ್ರೆ

01:25 PM May 08, 2022 | Team Udayavani |

ಕುಂದಾಪುರ: ಹಕ್ಲಾಡಿ ಗ್ರಾಮದ ಗ್ರಾಮದೇವತೆ ಕೆಳಾಕಳಿ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ 2 ವರ್ಷಗಳಿಗೊಮ್ಮೆ ನಡೆಯುವ ವಾರ್ಷಿಕ ಜಾತ್ರ ಮಹೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಮೇ 10ರಿಂದ ಆರಂಭವಾಗಲಿದ್ದು, 12ರ ವರೆಗೆ ನಡೆಯಲಿದೆ. ಶಿರಸಿಯ ಮಾರಿಕಾಂಬೆಯ ತಂಗಿಯೆಂದೇ ಜನಜನಿತವಾಗಿರುವ ಕೆಳಾಕಳಿ ದೇವಿಯ ಜಾತ್ರಾ ಮಹೋತ್ಸವವು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Advertisement

ದೇವಸ್ಥಾನದ ವಠಾರದಲ್ಲಿ ಮೇ 9 ರಂದು ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ರಾತ್ರಿ 12ಕ್ಕೆ ದೇವಿಯ ವೈಭವದ ಬೀಡಿಕೆ ಮೆರವಣಿಗೆ, ಮೇ 10ರಂದು ಹರಕೆಯ ಸೇವೆಗಳು, ಕೋಣನ ಪುರ ಪ್ರವೇಶ, ಮಂಗಳಾರತಿ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನ ಮಂಡಳಿಯಿಂದ ಭಕ್ತಿ ಲಹರಿ, ನಾಟಕ, ಯಕ್ಷಗಾನ, ಮೇ 11ರಂದು ಬೇವು ಉಡಿಸುವುದು, ಸುತ್ತಕ್ಕಿ ಸೇವೆ, ಕಸಗುಡಿಸುವ ಸೇವೆ, ಅನ್ನಸಂತರ್ಪಣೆ, ಮೇ 12 ರಂದು ತುಲಾಭಾರ, ದೇವಿಯ ಪುರಪ್ರವೇಶ, ಹರಕೆ ಸೇವೆ, ಅನ್ನಸಂತರ್ಪಣೆ ನಡೆಯಲಿದೆ.

21 ದಿನ ಮೊದಲೇ ನಿಗದಿ

ಜಾತ್ರೆಗೆ 21 ದಿನ ಮೊದಲೇ ಮಂಗಳವಾರ ದಿನ ನಿಗದಿಪಡಿಸಲಾಗುತ್ತದೆ. ಈ ವೇಳೆ ಹಕ್ಲಾಡಿ, ಹಕೂìರು, ಸೇನಾಪುರ ಗ್ರಾಮದಲ್ಲಿ ಜಾತ್ರೆ ಮುಗಿಯುವವರೆಗೆ ಯಾವುದೇ ಮದುವೆ ಸಹಿತ ಯಾವುದೇ ಶುಭಕಾರ್ಯಗಳು ನಡೆಯುವುದಿಲ್ಲ. ಅದಾದ ಎರಡನೇ ಮಂಗಳವಾರ ದೇಗುಲದ ಕಟ್ಟು-ಕಟ್ಟಲೆಗೆ ಸಂಬಂಧಿಸಿದಂತೆ ಅನೇಕ ವರ್ಷಗಳಿಂದ ಪೂಜಿಸಿಕೊಂಡು ಬಂದಿರುವ ದೇಗುಲದ ಎದುರಿನ ಮಾವಿನ ಮರಕ್ಕೆ ಪೂಜೆ ಸಲ್ಲಿಸಿ, ಮಚ್ಚು ಹಾಕಲಾಗುತ್ತದೆ. ಅದಾದ ಮರು ದಿನ ಕೋಣನ ಮೆರವಣಿಗೆ ಆರಂಭವಾಗುತ್ತದೆ.

ಕೋಣನ ಪುರ ಮೆರವಣಿಗೆ

Advertisement

ದೇಗುಲದಲ್ಲಿ ಪೂಜೆ ಮಾಡಿ, ಜನರ ಸಂಕಷ್ಟ ನಿವಾರಣೆಗೆಂದು ಪುರ ಮೆರವಣಿಗೆ ಹೊರಡುವ ದೈವ ಸ್ವರೂಪಿಯಾದ ಕೋಣನಿಗೆ ಗ್ರಾಮದ ಮುತ್ತೈದೆಯರು ಕಾಲು ತೊಳೆದು, ಹಣೆಗೆ ಅರಿಶಿನ ಕುಂಕುಮವಿಟ್ಟು, ನೆತ್ತಿಗೆ ಎಣ್ಣೆ ಹಾಕಿ ಭಕ್ತಿಯಿಂದ ಕಾಲಿಗೆರಗಿ ಮಾರಿಕಾಂಬಾ ಕಾಪಾಡಮ್ಮಾ ಎಂದು ಭಯಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಕೋಣ ಮನೆ ಬಾಗಿಲಿಗೆ ಬಂದರೆ ಶುಭ ಎನ್ನುವ ನಂಬಿಕೆಯಿಂದ ಕೋಣನ ಮನೆ -ಮನೆ ಮೆರವಣಿಗೆ ನಡೆಯುತ್ತದೆ.

ಶಿರಸಿಯಂತೆ ಮನೆ-ಮನೆ ಮೆರವಣಿಗೆ

ರಾಜ್ಯದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದಾದ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆಯ ಸಂದರ್ಭ ಕೋಣನ ಮೆರವಣಿಗೆ ನಡೆಯುವುದು ವಾಡಿಕೆ. ರಾಜ್ಯದ ಅದೆಷ್ಟೋ ಮಾರಿಕಾಂಬಾ ದೇವಿಯ ದೇವಸ್ಥಾನಗಳಲ್ಲಿ ಶಿರಸಿ ಬಿಟ್ಟರೆ ಕೋಣನ ಮೆರವಣಿಗೆ ನಡೆಯುವುದು ಕೆಳಾಕಳಿಯಲ್ಲಿ ಮಾತ್ರ ಅನ್ನುವುದು ವಿಶೇಷ. ಅಂದರೆ ಅವಿಭಜಿತ ದ.ಕ. ಜಿಲ್ಲೆಗಳಲ್ಲಿ ಕೆಳಾಕಳಿಯಲ್ಲಿ ಮಾತ್ರ ಈ ಪದ್ಧತಿಯಿದೆ. ಜಾತ್ರೆಯ ಒಂದು ವಾರ ಮೊದಲಿನ ಮಂಗಳವಾರ (ಈ ಬಾರಿ ಮೇ 4) ಕೋಣನ ಮೆರವಣಿಗೆ ಹೊರಟಿದ್ದು, ಹಕ್ಲಾಡಿ, ಹಕೂìರು ಹಾಗೂ ಸೇನಾಪುರ ಈ 3 ಗ್ರಾಮಗಳ ಎಲ್ಲ ಮನೆಗಳಿಗೆ ಭೇಟಿ ನೀಡುತ್ತದೆ. ಈಗ ಮನೆ ಹೆಚ್ಚಾಗಿದ್ದರಿಂದ ಅಲ್ಲಲ್ಲಿ ಒಂದು ಕಡೆ ಕಟ್ಟೆ ಮಾಡಿ, ಅಲ್ಲಿಯೇ ಕೋಣನಿಗೆ ಪೂಜೆ ನೆರವೇರಿಸಲಾಗುತ್ತಿದೆ.

ದೇವಿಯೇ ಮನೆ-ಮನೆಗೆ ಬರುವುದು

ಕಳೆದ ವರ್ಷ ಕೊರೊನಾದಿಂದ ಜಾತ್ರೆ ನಡೆದಿರಲಿಲ್ಲ. ಅದರ ಪ್ರಾಯಶ್ಚಿತವಾಗಿ ಈ ವರ್ಷ ಆಚರಿಸಲಾಗುತ್ತಿದೆ. ಸಿರಸಿಯಂತೆಯೇ ಎಲ್ಲ ಆಚರಣೆಗಳನ್ನು ನಡೆಸಲಾಗುತ್ತಿದೆ. ಕೋಣನ ಪುರ ಮೆರವಣಿಗೆಯೆಂದರೆ ದೇವಿಯೇ ಮನೆ- ಮನೆಗೆ ಬಂದು, ಆಶೀರ್ವಚಿಸುತ್ತಾಳೆ ಅನ್ನುವ ನಂಬಿಕೆ ನಮ್ಮೆಲ್ಲರದು. ಉಡುಪಿ, ಕುಂದಾಪುರ ಮಾತ್ರವಲ್ಲದೆ ಶಿರಸಿ, ಸಾಗರ, ನಗರ, ಹೊಸನಗರ ಕಡೆಯಿಂದೆಲ್ಲ ಭಕ್ತರು ಬರುತ್ತಾರೆ. – ಜಯರಾಜ್‌ ಎಸ್‌. ಹೆಗ್ಡೆ, ಆನುವಂಶಿಕ ಮೊಕ್ತೇಸರ, ಶ್ರೀ ಮಾರಿಕಾಂಬಾ ದೇವಸ್ಥಾನ ಕೆಳಾಕಳಿ

Advertisement

Udayavani is now on Telegram. Click here to join our channel and stay updated with the latest news.

Next